ಕನ್ನಡಪ್ರಭ ವಾರ್ತೆ ಮಂಡ್ಯ
ಒಳ್ಳೆಯ ಸಾಧನೆಗಳು ಸಮಾಜದ ಬೆಳವಣಿಗೆಗೆ ಪೂರಕವಾಗಿರುತ್ತವೆ. ಅಲ್ಲದೆ, ಮುಂದಿನ ಪೀಳಿಗೆಗೂ ದಾರಿದೀಪವಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಿ.ಎನ್.ಶ್ರೀಪಾದು ಹಿತೈಷಿ ಬಳಗದಿಂದ ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು-೭೫ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಳೆಯ ಬೇರು-ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬ ಡಿವಿಜಿಯವರ ಮಾತಿನಂತೆ ಹಿರಿಯರ ಆದರ್ಶಗಳು ಕಿರಿಯರಿಗೆ ಮಾರ್ಗದರ್ಶಕವಾಗಬೇಕು. ಸಾಹಿತ್ಯ ಮತ್ತು ಮಾಧ್ಯಮ ಒಂದೇ ನಾಣ್ಯದ ಎರಡು ಮುಖಗಳು. ಮಾಧ್ಯಮ ಯಾವಾಗಲು ಸಮಾಜದ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಬೇಕು. ಸಮಾಜದ ಋಣ ತೀರಿಸುವ ಕೆಲಸ ಮಾಡಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು.ಡಿ.ಎನ್.ಶ್ರೀಪಾದು ಅವರು ಪ್ರಾಮಾಣಿಕತೆ ಮತ್ತು ಬದ್ಧತೆಯನ್ನಿಟ್ಟುಕೊಂಡು ಸುದೀರ್ಘಕಾಲ ಪತ್ರಿಕೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಒಳ್ಳೆಯತನ ಉಳಿಸಿಕೊಂಡು ಹೋಗುವುದು ಸವಾಲಿನ ಕೆಲಸ. ಹಣ, ಅಧಿಕಾರಕ್ಕೆ ಆಸೆ ಪಡದೆ ಪತ್ರಿಕೆಯನ್ನು ಪ್ರೀತಿಸುತ್ತಲೇ ಅದನ್ನು ಒಂದು ವಾರವೂ ತಪ್ಪದ ರೀತಿಯಲ್ಲಿ ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಬದುಕಿನ ಮೌಲ್ಯಗಳನ್ನು ಕಿರಿಯರೂ ಅನುಸರಿಸುವಂತೆ ಸಲಹೆ ನೀಡಿದರು.
ಚಿತ್ರನಟ ಮಂಡ್ಯ ರಮೇಶ್ ಮಾತನಾಡಿ, ಡಿ.ಎನ್.ಶ್ರೀಪಾದು ಅವರೊಂದಿಗಿನ ಸ್ನೇಹ ಐವತ್ತು ವರ್ಷ ಹಳೆಯದು. ಚಿಕ್ಕಂದಿನಿಂದಲೂ ಅವರಲ್ಲಿ ಉತ್ತಮವಾದ ಸಂಘಟನಾ ಚಾತುರ್ಯವಿದೆ. ಕೈಯ್ಯಲ್ಲಿ ಹಣವಿಲ್ಲದಿದ್ದರೂ ಏನನ್ನಾದರೂ ಸಾಧಿಸಬೇಕೆಂಬ ಹಠ, ಛಲ, ಹಂಬಲವಿದೆ. ಗಟ್ಟಿಯಾದ ನಿಲುವು, ಸ್ನೇಹಶೀಲ ವ್ಯಕ್ತಿತ್ವ, ಸದಾ ಒಳ್ಳೆಯದನ್ನೇ ಬಯಸುವಂತಹ ಗುಣ ಇವೆಲ್ಲವೂ ನನಗೆ ಬಹಳ ಅಚ್ಚುಮೆಚ್ಚು ಎಂದರು.
ಡಿ.ಎನ್.ಶ್ರೀಪಾದು ಅವರಲ್ಲಿ ಅಪಾರವಾದ ಜ್ಞಾನ ಭಂಡಾರವಿದೆ. ಜಿಲ್ಲೆಯ ಇತಿಹಾಸವನ್ನು ಸಾಕಷ್ಟು ತಿಳಿದುಕೊಂಡಿದ್ದಾರೆ. ಅವರಿಂದ ಈಗಿನ ಪತ್ರಕರ್ತರು ಕಲಿಯುವುದು ಬಹಳಷ್ಟಿದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿಕೊಂಡು ಬರುತ್ತಿರುವವರಲ್ಲಿ ಅಧ್ಯಯನ ಮತ್ತು ತಿಳಿವಳಿಕೆ ಕೊರತೆ ಇದೆ. ಪತ್ರಿಕಾ ಪದವಿಯನ್ನು ಗಳಿಸದಿದ್ದರೂ ಅನುಭವದಿಂದಲೇ ಅತ್ಯುತ್ತಮ ಲೇಖನಗಳನ್ನು ನಿರಂತರವಾಗಿ ಬರೆಯುತ್ತಾ, ಸಮಾಜಕ್ಕೆ ಬೇಕಾದುದನ್ನೇ ನೀಡುತ್ತಾ ಪತ್ರಿಕಾರಂಗದ ಘನತೆ-ಗೌರವಗಳನ್ನು ಎತ್ತಿಹಿಡಿದಿದ್ದಾರೆ. ಅವರ ಬದುಕನ್ನು ಪತ್ರಿಕೆಗೆ ಮುಡಿಪಾಗಿಟ್ಟಿದ್ದಾರೆ. ಸಂಪಾದಕರಾಗಿದ್ದರೂ ಮನೆ ಮನೆಗೆ ಹೋಗಿ ಪತ್ರಿಕೆ ಹಾಕುವ ಕೆಲಸವನ್ನು ಈಗಲೂ ಮಾಡುತ್ತಿರುವುದು ಅವರು ಪತ್ರಿಕೆ ಮೇಲಿಟ್ಟಿರುವ ಪ್ರೀತಿ-ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಎಸ್.ಡಿ.ಜಯರಾಂ ಗರಡಿಯಲ್ಲಿ ಶ್ರೀಪಾದು ಬೆಳೆದವರು. ಬಡತನದಿಂದ ಹುಟ್ಟಿ ಬೆಳೆದುಬಂದ ಅವರು ಎಂದಿಗೂ ಪತ್ರಿಕಾಧ್ಯೇಯವನ್ನು ಮರೆಯಲಿಲ್ಲ. ಸಂಘಟನಾಶೀಲತೆ, ಸಂಯಮವನ್ನು ಜೀವನದುದ್ದಕ್ಕೂ ಬೆಳೆಸಿಕೊಂಡು ಬಂದರು. ಹಿರಿಯ ಸಾಹಿತಿಗಳು, ರಾಜಕಾರಣಿಗಳು, ಹೋರಾಟಗಾರರ ಒಡನಾಟವನ್ನು ಹೊಂದಿರುವ ಡಿ.ಎನ್.ಶ್ರೀಪಾದು ಉತ್ತಮ ಜ್ಞಾನವನ್ನು ಸಂಪಾದಿಸಿಕೊಂಡಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಅವರ ಕಾರ್ಯಶೈಲಿ ನಿಜಕ್ಕೂ ಮಾದರಿಯಾದುದು ಎಂದರು.ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸೃಜನಶೀಲ ವ್ಯಕ್ತಿತ್ವದೊಂದಿಗೆ ಯಾರ ಸಹವಾಸಕ್ಕೂ ಹೋಗದೆ ತಮ್ಮಪಾಡಿಗೆ ತಾವು ಲೇಖನಗಳನ್ನು ಬರೆದುಕೊಂಡು ಎಲೆಮರೆ ಕಾಯಿಯಂತೆಯೇ ಡಿ.ಎನ್.ಶ್ರೀಪಾದು ಉಳಿದುಕೊಂಡಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸದೆ ಸಮಾಜಕ್ಕೆ ಉಪಯುಕ್ತವಾದ ಉತ್ತಮ ಲೇಖನ, ಬರಹಗಳನ್ನು ನೀಡುತ್ತಲೇ ಪತ್ರಿಕಾಧರ್ಮವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಇಂತಹ ವ್ಯಕ್ತಿತ್ವ ನಮ್ಮ ಕಣ್ಣಮುಂದಿರುವುದೇ ಹೆಮ್ಮೆಯ ಸಂಗತಿ ಎಂದು ವರ್ಣಿಸಿದರು.
ಕಾರ್ಯಕ್ರಮದಲ್ಲಿ ಹಿರಿಯಪತ್ರಕರ್ತ ಡಿ.ಎನ್.ಶ್ರೀಪಾದು ದಂಪತಿಯನ್ನು ಅಭಿನಂದಿಸಲಾಯಿತು. ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಧ್ವನಿ ಸಂದೇಶವನ್ನು ಕೇಳಿಸಲಾಯಿತು. ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಕಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ನಿರ್ದೇಶಕ ಎಂ.ಕೃಷ್ಣ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ರಾಘವೇಂದ್ರ, ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಕೆ.ಶ್ರೀನಿವಾಸ್, ಸಿ.ಎನ್.ಮಂಜುನಾಥ, ಬಿ.ಟಿ.ಮೋಹನ್‌ಕುಮಾರ್, ಮಧು ಕ್ಯಾತಘಟ್ಟ, ರವಿಸಾವಂದಿಪುರ ಇತರರಿದ್ದರು.ಆದರ್ಶಗಳು ಸಮಾಜದಲ್ಲಿ ಇನ್ನೂ ಜೀವಂತ: ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಕನ್ನಡಪ್ರಭ ವಾರ್ತೆ ಮಂಡ್ಯ
ಆದರ್ಶಗಳು ಸಮಾಜದಲ್ಲಿ ಇನ್ನೂ ಜೀವಂತವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ಪಾಲಿಸುವುದನ್ನು ಕಲಿಯಬೇಕು. ಆದರ್ಶಗಳನ್ನು ಬಿಟ್ಟರೆ ಬದುಕು ನಿರರ್ಥಕ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಡಿ.ಎನ್.ಶ್ರೀಪಾದು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಆದರ್ಶಗಳಿದ್ದಾಗಲೇ ಮನುಷ್ಯನ ಜೀವನದ ಮೌಲ್ಯ ಹೆಚ್ಚುತ್ತದೆ. ವ್ಯಕ್ತಿತ್ವಕ್ಕೊಂದು ಬೆಲೆ ಬರುತ್ತದೆ. ಡಿ.ಎನ್.ಶ್ರೀಪಾದು ಅವರು ಪತ್ರಕರ್ತರಾಗಿ ಜೀವನದುದ್ದಕ್ಕೂ ಆದರ್ಶಗಳನ್ನಿಟ್ಟುಕೊಂಡು ಮೌಲ್ಯಯುತವಾದ ಜೀವನ ನಡೆಸಿಕೊಂಡು ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಿರಿಯ ಪತ್ರಕರ್ತರು ಬೆಳವಣಿಗೆ ಸಾಧಿಸಬೇಕು ಎಂದರು.
ಜಿಲ್ಲೆಯ ಇತಿಹಾಸದ ಬಗ್ಗೆ ಬಹಳಷ್ಟು ಮಾಹಿತಿಗಳು ಅವರ ಜ್ಞಾನ ಭಂಡಾರದಲ್ಲಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವರು ಅವರಲ್ಲಿರುವ ಮಾಹಿತಿಗಳನ್ನೆಲ್ಲಾ ಸಂಗ್ರಹಿಸಲು ಅಭಿನಂದನಾ ಗ್ರಂಥವೊಂದನ್ನು ಹೊರತರುವಂತೆ ಸಲಹೆ ನೀಡಿದರು. ಅದು ಮುಂದಿನ ದಿನಗಳಲ್ಲಿ ದಾಖಲಾರ್ಹ ಸಂಗ್ರಹ ಪುಸ್ತಕವಾಗಲಿದೆ. ಅದಕ್ಕೆ ಬೇಕಾದ ಆರ್ಥಿಕ ನೆರವನ್ನು ಒದಗಿಸಲು ನಾನು ಸಿದ್ಧನಿದ್ದೇನೆ ಎಂದು ಮುಕ್ತವಾಗಿ ಹೇಳಿದರು.