ಸಾರಾಂಶ
ಸಾಗರ: ಕೆಜೆಪಿ ಕಟ್ಟಿದಾಗ ಯಡಿಯೂರಪ್ಪ ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ಕೊಡುತ್ತೇನೆ ಎಂದು ಘೋಷಣೆ ಮಾಡಿದ್ದರು. ಇದೀಗ ಬಜೆಟ್‌ನ ಶೇ.೧ರಷ್ಟನ್ನು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಿದರೆ ಬಿಜೆಪಿಯವರು ಹಲಾಲ್ ಬಜೆಟ್ ಎಂದು ಟೀಕಿಸುವ ಮೂಲಕ ತಮ್ಮ ಹಲಾಲ್ಕೋರ್ ಬುದ್ಧಿ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲುಕಿನ ಬೆಳಂದೂರು-ಚನ್ನಾಪುರ ಗ್ರಾಮದ ಸಂಪರ್ಕ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಪತ್ರಕರ್ತರ ಜೊತೆ ಅವರು ಮಾತನಾಡಿದರು.ಕೈಯಲ್ಲಿ ಕತ್ತಿ ಹಿಡಿದು ಟಿಪ್ಪು ಸುಲ್ತಾನರ ಟೋಪಿ ಧರಿಸಿ ಮನೆಮನೆಗೆ ಹೋಗಿ ಮುಸ್ಲೀಮರು ನಮ್ಮ ಬಾಯಿಬಾಯಿ ಎಂದವರು ಈಗ ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಸಣ್ಣ ಪ್ರಮಾಣದ ಘೋಷಣೆ ಮಾಡಿದರೆ ಹಲಾಲ್ ಬಜೆಟ್ ಎಂದು ಟೀಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಶೇ.೨೩ರಷ್ಟು ಅಲ್ಪಸಂಖ್ಯಾತರಿದ್ದಾರೆ. ಈ ಬಾರಿ ೪.೯೫೦೦ ಕೋಟಿ ರು. ಬಜೆಟ್ ಮಂಡಿಸಿದ್ದು, ಈ ಪೈಕಿ ಶೇ.೧ರಷ್ಟನ್ನು ಅಲ್ಪಸಂಖ್ಯಾತರ ಏಳಿಗೆಗೆ ಘೋಷಣೆ ಮಾಡಲಾಗಿದೆ. ಶೇ.೯೯ ಇತರೆ ಸಮುದಾಯದವರಿಗೆ ನೀಡಿರುವುದು ಬಿಜೆಪಿಯವರಿಗೆ ಕಾಣಿಸುತ್ತಿಲ್ಲವೆ ಎಂದರು.
ಕಾಂಗ್ರೆಸ್ ಪಕ್ಷ ಎಲ್ಲ ಜಾತಿ ಧರ್ಮವನ್ನು ಸಮಾನವಾಗಿ ನೋಡುತ್ತದೆ. ಈ ಬಾರಿ ಮುಖ್ಯಮಂತ್ರಿಗಳು ಅತ್ಯಂತ ಉತ್ತಮವಾದ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ, ವಿದ್ಯಾರ್ಥಿನಿಲಯ, ಆರೋಗ್ಯದ ಕ್ಷೇತ್ರಕ್ಕೆ ಹೆಚ್ಚು ಗಮನ ಹರಿಸಲಾಗಿದೆ. ಎಲೆಚುಕ್ಕಿ ರೋಗ ಸಂಶೋಧನೆಗೆ ೬೪ ಕೋಟಿ ರು. ಘೋಷಣೆ ಮಾಡಲಾಗಿದೆ. ಮಳೆ ಮಾಪನಾ ಕೇಂದ್ರಕ್ಕೆ ಒತ್ತು ನೀಡಲಾಗಿದೆ. ಕೃಷಿ ಬಲವರ್ಧನೆಗೆ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದೆ ಎಂದು ತಿಳಿಸಿದರು.ಸಾಗರ ಹೊಸನಗರ ವ್ಯಾಪ್ತಿಯಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗೂ ಸಂಪರ್ಕ ರಸ್ತೆಗೆ ಕನಿಷ್ಠ ಎರಡು ಕೋಟಿ ರು. ನೀಡಲಾಗಿದೆ. ರಸ್ತೆ ಅಗಲೀಕರಣಕ್ಕೆ ಒತ್ತು ನೀಡಿದ್ದು, ಯಡೇಹಳ್ಳಿ ವೃತ್ತದಿಂದ ರಿಪ್ಪನಪೇಟೆ ವೃತ್ತದವರೆಗೆ ರಸ್ತೆ ಅಗಲೀಕರಣಕ್ಕೆ ೨೦ ಕೋಟಿ ರು., ರಿಪ್ಪನಪೇಟೆ ವೃತ್ತ ಅಗಲೀಕರಣಕ್ಕೆ ೫.೫೦ ಕೋಟಿ ರು. ನೀಡಲಾಗಿದೆ ಎಂದರು.ಪ್ರಮುಖರಾದ ಸೋಮಶೇಖರ ಲ್ಯಾವಿಗೆರೆ, ಕಲಸೆ ಚಂದ್ರಪ್ಪ, ಪ್ರಶಾಂತ್ ಖಂಡೋಜಿ, ಯೋಗೀಶ್, ರೇವತಿ, ಶರತ್ ನಾಗಪ್ಪ, ಗಣಪತಿ ಮಂಡಗಳಲೆ ಇನ್ನಿತರರು ಹಾಜರಿದ್ದರು.