ನಿತ್ಯ ಜೀವನದಲ್ಲಿ ಉತ್ತಮ ಆಹಾರ ಪದ್ಧತಿ ಅಗತ್ಯ: ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಸ್ವಾಮಿಗೌಡ

| Published : Jun 30 2024, 12:47 AM IST

ನಿತ್ಯ ಜೀವನದಲ್ಲಿ ಉತ್ತಮ ಆಹಾರ ಪದ್ಧತಿ ಅಗತ್ಯ: ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಸ್ವಾಮಿಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನಿತ್ಯ ಜೀವನದಲ್ಲಿ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸ್ವಾಮಿಗೌಡ ಹೇಳಿದರು. ಅರಕಲಗೂಡಿನಲ್ಲಿ ಆಯೋಜಿಸಿದ ಅಪೌಷ್ಟಿಕ ಕ್ಷಯರೋಗ ಪೀಡಿತ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಆಹಾರ ಕಿಟ್‌ಗಳನ್ನು ಹಾಗೂ ಮೊಟ್ಟೆ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷಯರೋಗ ಪೀಡಿತ, ಗರ್ಭಿಣಿ ಸ್ತ್ರೀಯರಿಗೆ ಆಹಾರ ಕಿಟ್, ಮೊಟ್ಟೆ ವಿತರಣೆ

ಕನ್ನಡಪ್ರಭ ವಾರ್ತೆ ಅರಕಲಗೂಡು

ಸಾರ್ವಜನಿಕರು ಉತ್ತಮವಾಗಿರುವಂತ ಪೌಷ್ಟಿಕ ಆಹಾರ ಬಳಸಬೇಕು. ತಮ್ಮ ತಮ್ಮ ಮನೆಯ ಊಟವನ್ನೇ ಮಾಡುವುದರ ಮೂಲಕ ನಿತ್ಯ ಜೀವನದಲ್ಲಿ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸ್ವಾಮಿಗೌಡ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲೂಕು ರೋಟರಿ ಕ್ಲಬ್ ವತಿಯಿಂದ ಶನಿವಾರ ಹಮ್ಮಿಕೊಂಡ ಅಪೌಷ್ಟಿಕ ಕ್ಷಯರೋಗ ಪೀಡಿತ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಆಹಾರ ಕಿಟ್‌ಗಳನ್ನು ಹಾಗೂ ಮೊಟ್ಟೆ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅಪೌಷ್ಟಿಕತೆ ಸಾಕಷ್ಟು ಜನರಲ್ಲಿ ಕಂಡು ಬರುತ್ತಿದೆ. ಜನರು ಹೊರಗಡೆ ಸಿಗುವಂತಹ ಗೋಬಿ ಮಂಚೂರಿ, ಪಾನಿಪುರಿ, ನೂಡಲ್ಸ್, ಎಗ್‌ರೈಸ್ ಮುಂತಾದ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ತಿನ್ನಬಾರದು. ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮೊಳಕೆ ಒಡೆದ ಕಾಳು, ತರಕಾರಿ, ಸೊಪ್ಪು ನೈಸರ್ಗಿಕವಾಗಿ ಸಿಗುವಂತಹ ತರಕಾರಿಗಳನ್ನು ಮನೆಗಳಲ್ಲಿ ಬಳಸಬೇಕು ಹಾಗೂ ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಡೆಂಘೀ ನಂತಹ ಕಾಯಿಲೆಯನ್ನು ಸಹ ನಿಯಂತ್ರಿಸಬಹುದು. ಪ್ರತಿಯೊಬ್ಬರು ಸಮಾಜದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯದಿಂದ ವಾಸಿಸಬಹುದು ಎಂದು ಹೇಳಿದರು.

ತಾಲೂಕಿನ ರೋಟರಿ ಕ್ಲಬ್ ಸದಸ್ಯ ಜಯಕುಮಾರ್ ಮಾತನಾಡಿ, ‘ಪ್ರಕೃತಿ ನಮಗೆ ಉತ್ತಮವಾಗಿರುವಂತ ಗಾಳಿ, ಬೆಳಕು ಅಹಾರಗಳನ್ನು ನೀಡಿದೆ. ಆದರೆ ನೈಸರ್ಗಿಕವಾಗಿ ಸಿಗುವಂತಹ ಆಹಾರ ಪದಾರ್ಥಗಳನ್ನು ಸಾರ್ವಜನಿಕರು ನಿತ್ಯ ಜೀವನದಲ್ಲಿ ಬಳಸುತ್ತಿಲ್ಲ ಎಂಬುದು ನೋವಿನ ಸಂಗತಿ. ಹಾಗಾಗಿ ನಾವೆಲ್ಲರೂ ನೈಸರ್ಗಿಕವಾಗಿ ಸಿಗುವಂತಹ ಆಹಾರ ಪದಾರ್ಥಗಳನ್ನು ಬಳಸುವುದರ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕ ಪರಶುರಾಮ್ ಶಿರೂರ, ಗರ್ಭಿಣಿ ಸ್ತ್ರೀಯರಲ್ಲಿಯೂ ಸಹ ಅಪೌಷ್ಟಿಕತೆ ಎದ್ದು ಕಾಣುತ್ತಿದ್ದು ಸರ್ಕಾರ ಅಂಗನವಾಡಿಯಲ್ಲಿ ನೀಡುತ್ತಿರುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗರ್ಭಿಣಿ ಸ್ತ್ರೀಯರು ಅಪೌಷ್ಟಿಕತೆ, ರಕ್ತ ಹೀನತೆಯಿಂದ ಬಳಲುತ್ತಿರುವುದು ನಿತ್ಯ ಆಸ್ಪತ್ರೆಯಲ್ಲಿ ಕಂಡು ಬರುತ್ತಿದ್ದು, ಸರಿಯಾದ ಔಷಧೋಪಚಾರ ಹಾಗೂ ತರಕಾರಿ ಸೊಪ್ಪು, ಹಣ್ಣು-ಹಂಪಲು, ರಾಗಿ ಮುದ್ದೆ ಮುಂತಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಊಟದ ವಿಧಾನಗಳನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡರೆ ಮಾತ್ರ ಉತ್ತಮವಾಗಿರುವಂತ ಮಗುವನ್ನು ಪಡೆಯಬಹುದು ಎಂದು ತಿಳಿಸಿದರು.

ಹೊರಗಡೆ ಸಿಗುವ ಆಹಾರ ಪದಾರ್ಥಗಳು ನಾಲಿಗೆಗೆ ರುಚಿಯನ್ನು ಮಾತ್ರ ನೀಡಬಲ್ಲವೇ ಹೊರತು ಪೌಷ್ಟಿಕ ಆಹಾರ ಅಲ್ಲವೇ ಅಲ್ಲ. ಗೋಬಿ ಮಂಚೂರಿ, ಪಾನಿಪುರಿ ಇಂತಹ ಹೊರಗಡೆ ಸಿಗುವ ಪದಾರ್ಥಗಳನ್ನು ತಿಂದು ಸಾಕಷ್ಟು ಜನರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವುದನ್ನು ಕಂಡು ಸರ್ಕಾರ ಈಗಾಗಲೇ ಗೋಬಿ ಮಂಚೂರಿ ಹಾಗೂ ಪಾನಿಪುರಿಗಳನ್ನು ಬ್ಯಾನ್ ಮಾಡಿದೆ. ಆದ್ದರಿಂದ ಸಾರ್ವಜನಿಕರು ಜಾಗೃತರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ 20 ಜನ ಕ್ಷಯ ರೋಗಿಗಳು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿ ಸ್ತ್ರೀಯರಿಗೆ ಮೊಟ್ಟೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ರೋಟರಿ ಅಧ್ಯಕ್ಷ ಪ್ರಭುಶ್ರೀಧರ ವಹಿಸಿದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ಪ್ರದೀಪ್, ಸದಸ್ಯರಾದ ಚನ್ನಕೇಶವ ಗೌಡ, ಗಂಗಾಧರ್, ಜಯಕುಮಾರ್, ನಿತಿನ್, ರಾಷ್ಟ್ರ ಪ್ರಶಸ್ತಿ ವಿಜೇತ ಮಲ್ಲೇಶ್, ಆಸ್ಪತ್ರೆಯ ಹಿರಿಯ ಶುಶ್ರೂಷಕ ಅಧಿಕಾರಿ ಪಲ್ಲವಿ, ತಾಲೂಕು ಕ್ಷಯ ರೋಗ ಮೇಲ್ವಿಚಾರಕ ಸುಬ್ರಹ್ಮಣ್ಯ, ಪ್ರಯೋಗ ಶಾಲಾ ತಂತ್ರಜ್ಞ ರಾಮಚಂದ್ರ, ಐಸಿಟಿಸಿ ಪ್ರಯೋಗಶಾಲ ತಂತ್ರಜ್ಞರಾದ ಗೌರಮ್ಮ, ತನುಜ, ನಾನು ಕ್ಲಿನಿಕ್ ಸಿಬ್ಬಂದಿ ಮಂಜುಳ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.