ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲೆಯಲ್ಲಿ ಎಕೋ ಟೂರಿಸಂಗೆ ಉತ್ತಮ ಅವಕಾಶಗಳಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸಾರಿಗೆ, ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆ ಆರಂಭವಾಗುತ್ತಿದ್ದಂತೆ ಸಭೆಯಲ್ಲಿ ಹಾಜರಿರುವ ಅಧಿಕಾರಿಗಳ ಹಾಜರಿ ಮತ್ತು ಗೈರು ಹಾಜರಿ ತೆಗೆದುಕೊಳ್ಳುವಂತೆ ಸೂಚಿಸಿದರು. ಕೌಶಲ್ಯ ಅಭಿವೃದ್ಧಿ ನಿಗಮ, ಆಯುಷ್ ಇಲಾಖೆ ಅಧಿಕಾರಿಗಳು ಸೇರಿದಂತೆ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸಚಿವ ರಾಮಲಿಂಗಾರೆಡ್ಡಿ ಜಿಲ್ಲಾಧಿಕಾರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಸವಾರರಿಗೆ ಲೈಸೆನ್ಸ್‌ಗಳೇ ಇರುವುದಿಲ್ಲ. ಸಾರಿಗೆ ಇಲಾಖೆ ವತಿಯಿಂದ ಕ್ಯಾಂಪ್ ಮಾಡಿ ಡ್ರೈವಿಂಗ್ ಲೈಸೆನ್ಸ್ ಕೊಡಲು ಕ್ರಮ ವಹಿಸಿ ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ನೆಟ್‌ಕಲ್ ಕುಡಿಯುವ ನೀರು ಯೋಜನೆ ಸರಿಯಾಗಿ ನಡೆದಿಲ್ಲ, ಆದರೂ ೬ ಕೋಟಿ ಹಣ ಖರ್ಚಾಗಿದೆ ಎಂದು ಶಾಸಕರು ಸಭೆಯ ಗಮನ ಸೆಳೆದಿದ್ದಾರೆ. ಸರ್ಕಾರದ ಹಣ ದುರ್ಬಳಕೆ ಆಗಬಾರದು, ಈ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು.ಚನ್ನಪಟ್ಟಣ ಕ್ಷೇತ್ರದಲ್ಲಿ ನಿವೇಶನ ಕೊಡಲು ೧೫೦ಕ್ಕೂ ಹೆಚ್ಚು ಎಕರೆ ಜಮೀನು ಗುರುತಿಸಲಾಗಿದೆ. ಜನರಿಗೆ ಮಾತು ಕೊಟ್ಟಿದ್ದು, ಅರ್ಹ ನಿವೇಶನಗಳನ್ನು ರಹಿತರಿಗೆ ನೀಡಲು ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ಚನ್ನಪಟ್ಟಣ ಸೇರಿ ಎಲ್ಲಾ ತಾಲೂಕುಗಳಲ್ಲಿ ಸಭೆ ನಡೆಸಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಕಲ್ಲುಗಣಿಗಾರಿಕೆ ಡಿಎಂಎಫ್‌ನ ಹಣವನ್ನು ಮಾಗಡಿ ಮತ್ತು ರಾಮನಗರ ಕ್ಷೇತ್ರದ ಗಣಿಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಿರುವ ಭಾಗದ ಅಭಿವೃದ್ಧಿಗೆ ಬಳಕೆ ಮಾಡಬೇಕಿದೆ. ಹಣವನ್ನು ಎಲ್ಲಿ ಖರ್ಚು ಮಾಡುತ್ತಿದ್ದೀರಿ, ಕ್ರಷರ್‌ನಲ್ಲಿ ಓವರ್ ಲೋಡ್, ಟಾರ್ಪಲ್ ಹಾಕದವರ ಬಗ್ಗೆ ಕ್ರಮ ವಹಿಸಿ, ನೀವು ಮನೆ ಕಟ್ಟುವವರಿಗೆ ದಂಡ ವಸೂಲಿಗೆ ಮುಂದಾಗಿ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದೀರಿ ಎಂದು ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಹುಸೇನ್ ಗಣಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ಜಿಲ್ಲೆಯಲ್ಲಿರುವ ೧೨ ಕೆರೆಗಳಲ್ಲಿ ವಾಟರ್ ಸ್ಫೋರ್ಟ್‌ಗೆ ಅನುಮತಿ ಸಿಕ್ಕಿದ್ದು, ರಂಗರಾಯನದೊಡ್ಡಿ ಮತ್ತು ನೆಲ್ಲಿಗುಡ್ಡೆ ಕೆರೆಯನ್ನು ಪ್ರಾಯೋಗಿಕವಾಗಿ ತೆಗೆದುಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಈ ವಿಷಯವಾಗಿ ವಿಧಾನ ಪರಿಷತ್ ಸದಸ್ಯ ಸುಧಾಮ್‌ದಾಸ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಪರಿಶೀಲನೆ ನಡೆಸಿ ಎಕೋಟೂರಿಸಂ ಬಗ್ಗೆ ಯಾವುದಾರೂ ಪ್ರಸ್ತಾವನೆ ಸಲ್ಲಿಸಿದ್ದೀರಾ, ಅಥವಾ ಖಾಸಗಿಯವರು ಮುಂದೆ ಬಂದರೆ ನಿಮ್ಮ ಇಲಾಖಾ ಪಾತ್ರವೇನು ಎಂದ ಅವರು ಪ್ರವಾಸೋದ್ಯಮಕ್ಕೆ ಬಂಡವಾಳ ಹೂಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಸಲಹೆ ನೀಡಿದರು.
ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಮಂಚನಬೆಲೆ ಜಲಾಶಯದ ಬಳಿ ಜಂಗಲ್‌ಲಾಡ್ಜ್ ನಿರ್ಮಾಣ ಮತ್ತು ಕಣ್ವ ಜಲಾಶಯದ ಬಳಿ ವಾಟರ್‌ಗೇಮ್ ನಿರ್ಮಾಣಕ್ಕೆ ಅವಕಾಶವಿದ್ದು, ಪ್ರವಾಸೋದ್ಯಮ ಇಲಾಖೆ ಕಾರ್ಯೋನ್ಮುಖವಾಗುವ ಬಗ್ಗೆ ಚರ್ಚೆ ನಡೆಸಿದರು.ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಸಭೆಯಲ್ಲಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯುವ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ ಸರ್ಕಾರಿ ಕಾರ್ಯಕ್ರಮಗಳಿಗೆ ಕಲಾ ತಂಡಗಳ ಆಯೋಜನೆ ಮಾಡುವ ಕೆಲಸ ಮಾಡಿ ಎಂದು ಸಹಾಯಕ ನಿರ್ದೇಶಕರಿಗೆ ಸಲಹೆ ನೀಡಿದರು. ಅಲ್ಲದೆ ವಿವಿಧ ವಸತಿ ಯೋಜನೆಗಳಡಿ ಪಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಿ ಒಂದು ಕಂತು ಹಣ ಪಡೆದು ಬ್ಲಾಕ್ ಹಾಕಿದವರಿಗೆ ಮುಂದೆ ಅದೇ ಯೋಜನೆಯಲ್ಲಿ ಹಣ ಪಡೆಯಬಹುದೇ ಅಥವಾ ಪಡೆದಿರುವ ಹಣ ವಾಪಸ್ಸು ಕಟ್ಟಿದರೆ ಹೊಸ ಯೋಜನೆಯಲ್ಲಿ ಮತ್ತೆ ಅವರನ್ನು ಆಯ್ಕೆ ಮಾಡಬಹುದೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಅಧಿಕಾರಿಗಳ ಉತ್ತರಕ್ಕೆ ಶಾಸಕದ್ವಯರು ವಸತಿ ಯೋಜನೆ ಬಗ್ಗೆ ಅಧಿಕಾರಿಗಳಿಗೆ ಜ್ಞಾನವೇ ಇಲ್ಲ, ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಚರ್ಚೆ ಮಾಡದೆ ನೀವು ಸುಮ್ಮನೆ ಕುಳಿತರೆ ಏನರ್ಥ, ಕನಕಪುರದಲ್ಲಿ ಇಂತಹ ಸಮಸ್ಯೆಗಳಿಗೆ ಪರಿಹಾರ ಮಾಡಿದ್ದೀರಿ, ಇನ್ನುಳಿದ ತಾಲೂಕು ವಸತಿ ಸಮಸ್ಯೆ ಬಗೆಹರಿಸಲು ಏಕೆ ಪ್ರಯತ್ನಿಸುತ್ತಿಲ್ಲ ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ತರಾಟೆಗೆ ತೆಗದುಕೊಂಡರು. ಇದಕ್ಕೆ ಬಾಲಕೃಷ್ಣ ಸಹ ಧ್ವನಿಗೂಡಿಸಿದ ಘಟನೆ ನಡೆಯಿತು.----------
ನೆಟ್‌ಕಲ್ ಯೋಜನೆ ವರದಿ ನೀಡಿ:೪೫೬ ಕೋಟಿ ರು. ವೆಚ್ಚದ ನೆಟ್‌ಕಲ್ ಕುಡಿಯುವ ನೀರು ಯೋಜನೆಯಲ್ಲಿ ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ರೆಸ್ಟೋರೆಂಟ್ ಗೆ ಸುಮಾರು ೧೨.೫೦ ಕೋಟಿ ರು. ಮೀಸಲಿದೆ. ಅದರಲ್ಲಿ ೬ ಕೋಟಿ ರೆಸ್ಟೋರೆಂಟ್ ಗೆ ಖರ್ಚು ಮಾಡಿರುವ ಬಗ್ಗೆ ಜಲಮಂಡಳಿ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡುತ್ತಿದ್ದಾರೆ. ಆದರೆ ಅಲ್ಲಿ ಒಂದು ಅಡಿ ಸಹ ರಸ್ತೆ ರೆಸ್ಟೋರೆಂಟ್ ಆಗಿಲ್ಲ ಎಂದು ಶಾಸಕ ಎಚ್.ಎ ಇಕ್ಬಾಲ್‌ಹುಸೇನ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಎಇಇ ಕುಸುಮಾ ಮಾತನಾಡಿ, ಸುಮಾರು ೧೫ ಕಿಮೀ ರಸ್ತೆ ರೆಸ್ಟೋರೆಂಟ್ ಮಾಡಲಾಗಿದೆ ಎಂಬ ಮಾಹಿತಿಗೆ ಇಕ್ಬಾಲ್ ಹುಸೇನ್ ಮಾತನಾಡಿ, ಒಂದು ಅಡಿ ರಸ್ತೆಯೂ ರೆಸ್ಟೋರೆಂಟ್ ಮಾಡಿಲ್ಲ. ರಸ್ತೆಗೆ ಸಿಲ್ಟ್ ಹಾಕಿ ಮುಚ್ಚಿದ್ದು ೬ ಕೋಟಿ ರು.ಗಳು ಖರ್ಚಾಗಿದೆ ಎಂದು ಮಾಹಿತಿ ನೀಡುವುದರಲ್ಲಿ ಅರ್ಥವಿಲ್ಲ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.ಕೆಡಿಪಿ ಸಭೆಯಲ್ಲಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಎಚ್.ಎ.ಇಕ್ಬಾಲ್ ಹುಸೇನ್, ಸಿ.ಪಿ.ಯೋಗೇಶ್ವರ್, ಎಂಎಲ್‌ಸಿ ಸುಧಾಮದಾಸ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ರಾಜು, ಜಿಲ್ಲಾಧಿಕಾರಿ ಯಶ್ವಂತ್ ಗುರುಕರ್, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ಸಿಇಒ ಅನುಮೋಲ್ ಜೈನ್, ಎಎಸ್ಪಿ ಸುರೇಶ್ ಸೇರಿ ಇಲಾಖಾ ಮುಖ್ಯಸ್ಥರು ಭಾಗವಹಿಸಿದ್ದರು.