ಹಳಿಯಾಳ: ಮಾನವ ಕುಲದ ಉದ್ಧಾರಕ್ಕಾಗಿ ಪ್ರಭು ಯೇಸು ಕ್ರಿಸ್ತ್ ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ ದಿನವಾದ ಗುಡ್ ಫ್ರೈಡೇಯನ್ನು ತಾಲೂಕಿನೆಲ್ಲೆಡೆ ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಯೇಸುವಿನ ತ್ಯಾಗ-ಬಲಿದಾನವನ್ನು ಸ್ಮರಿಸುವ ದಿನವಾಗಿರುವುದರಿಂದ ಈ ದಿನದಂದು ಸಂಭ್ರಮಾಚರಣೆಗೆ ಅವಕಾಶ ನೀಡದೇ ಆತ್ಮಾವಲೋಕನ ಮಾಡಿಕೊಳ್ಳುವ ಶೋಕದ ದಿನವಾಗಿ ಆಚರಿಸಿದರು. ಬಹುತೇಕರು ಶುಕ್ರವಾರ ಉಪವಾಸ ಆಚರಿಸಿದರು. ಗುಡ್ ಫ್ರೈಡೇ ಪ್ರಯುಕ್ತ ಚರ್ಚ್‌ಗಳಲ್ಲಿ ದಿನವಿಡಿ ಶೋಕಾಚರಣೆಗಳು, ವಿಶೇಷ ಸಾಮೂಹಿಕ ಪ್ರಾರ್ಥನಾ ವಿಧಿಗಳು ಜರುಗಿದವು.ಕ್ರಿಸ್ತರ ಶಿಲುಬೆಯ ಮಾರ್ಗ
ತಾಲೂಕಿನ ಕ್ರೈಸ್ತ ಧರ್ಮಿಯರ ಪ್ರಧಾನ ದೇವಾಲಯವಾಗಿರುವ ಹಳಿಯಾಳ್ ಮಿಲಾಗ್ರಿಸ್ ಚರ್ಚ್‌ನಲ್ಲಿ ನಡೆದ ಪೂಜಾವಿಧಿಯ ಸಾನ್ನಿಧ್ಯವನ್ನು ಪ್ರಧಾನ ಗುರು ಪ್ರಾನ್ಸಿಸ್ ಮಿರಾಂಡಾ ವಹಿಸಿದ್ದರು. ಸಹಾಯಕ ಗುರು ಅರುಣ ಫರ್ನಾಂಡೀಸ್ ಇದ್ದರು.ಶಿಲುಬೆಯ ಮರಣದ ಮೊದಲು ಕ್ರಿಸ್ತರು ಭಾರವಾದ ಶಿಲುಬೆಯನ್ನು ಹೊತ್ತುಕೊಂಡು ಗೋಲ್ಗೋಥಾ ಬೆಟ್ಟದತ್ತ ಸಾಗಿದ ಆ ಯಾತನಾಮಯ ಕಷ್ಟಗಳನ್ನು ಸ್ಮರಿಸುವ ಶಿಲುಬೆಯ ಮಾರ್ಗವೆಂಬ ವಿಶೇಷ ಪೂಜಾವಿಧಿಯನ್ನು ಚರ್ಚ್ ಆವರಣದಲ್ಲಿ ನಡೆಸಲಾಯಿತು. ಈ ಪೂಜಾವಿಧಿಯಲ್ಲಿ ನೂರೈವತ್ತಕ್ಕೂ ಹೆಚ್ಚು ವರ್ಷಗಳ ಹಳೆಯದಾದ ಯೇಸು ಕ್ರಿಸ್ತರ ಕಳೆಬರಹದ ಮೂರ್ತಿಯನ್ನು ಹಾಗೂ ಮಾತೇ ಮರಿಯಾಳ ಮೂರ್ತಿಯನ್ನು ಬಳಸಲಾಯಿತು.
ದಿನವಿಡಿ ಪ್ರಾರ್ಥನೆ--ಪೂಜಾವಿಧಿ
ತದನಂತರ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆಗಳು ಜರುಗಿದವು. ಜಗತ್ತಿನಲ್ಲಿ ಆರಂಭಗೊಂಡಿರುವ ಯುದ್ಧವು ಕೊನೆಗೊಂಡು ಜಾಗತಿಕ ಶಾಂತಿ ನೆಲೆಸಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ದೇಶದ ಸಮೃದ್ಧಿ ಹಾಗೂ ನಮ್ಮ ಕೇಂದ್ರ ಮತ್ತು ರಾಜ್ಯದ ಜನಪ್ರತಿನಿಧಿಗಳಿಗಾಗಿ ಪ್ರಾರ್ಥಿಸಲಾಯಿತು. ದೇಶದಲ್ಲಿ ಸರ್ವರೂ ಸಾಮರಸ್ಯದಿಂದ ಬಾಳುವಂತಹ ವಾತಾವರಣ ಮೂಡಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು.
ಗುಡ್ ಫ್ರೈಡೇಯ ದಿನದ ಬೈಬಲ್ ಶುಭವಾರ್ತೆಯನ್ನು ಗುರು ಫ್ರಾನ್ಸಿಸ್ ಮಿರಾಂಡಾ, ಸಹಾಯಕ ಗುರು ಅರುಣ ಹಾಗೂ ಶಿಕ್ಷಕರಾದ ಜೇಮ್ಸ್ ಡಿಸೋಜ ವಾಚಿಸಿದರು. ತದನಂತರ ಗುಡ್ ಫ್ರೈಡೇ ಸಂದೇಶ ನೀಡಲಾಯಿತು. ನಂತರ ಶಿಲುಬೇಗೆರಿದ ಕ್ರಿಸ್ತರ ಮೂರ್ತಿಯ ದರ್ಶನವನ್ನು ಸಾರ್ವಜನಿಕರಿಗೆ ನೀಡಲಾಯಿತು. ಹಳಿಯಾಳ ಪಟ್ಟಣ ಸೇರಿದಂತೆ ಚರ್ಚ್ ವ್ಯಾಪ್ತಿಯಲ್ಲಿ ಬರುವ ಐದು ಗ್ರಾಪಂಗಳ ಕ್ರೈಸ್ತ ಧರ್ಮಿಯರು ಪೂಜಾವಿಧಿಯಲ್ಲಿ ಪಾಲ್ಗೊಂಡರು.ತಾಲೂಕಿನೆಲ್ಲೆಡೆ ಆಚರಣೆ
ತಾಲೂಕಿನ ಮಂಗಳವಾಡ ಗ್ರಾಮದಲ್ಲಿನ ಸಂತ್ ಸೆಬೆಸ್ಟಿಯನ್ ಚರ್ಚ್‌ನಲ್ಲಿ ಗುರು ನಾತ್ವಿದಾದ್ ರೊಡ್ರಿಗ್ಸ್, ಯಡೋಗಾದ ಸಂತ್ ಅನ್ನಾ ಚರ್ಚ್‌ನಲ್ಲಿ ಗುರು ಉರ್ಬನ್ ಫರ್ನಾಂಡೀಸ್, ಬುಡಕಟ್ಟು ಸಿದ್ದಿ ಸಮುದಾಯದವರು ನೆಲೆಸಿರುವ ವಾಡಾ-ಗರಡೊಳ್ಳಿ ಹಾಗೂ ಗಾಡಗೇರಾ ಗ್ರಾಮಗಳ ಚರ್ಚ್‌ಗಳಲ್ಲಿ ಗುರು ರೊನಾಲ್ಡೊ ಡಿಸೋಜಾ, ಬುಕ್ಕಿನಕೊಪ್ಪ ಗ್ರಾಮದ ಸಂತ್ ಪಾವ್ಲ್ ಚರ್ಚ್‌ನಲ್ಲಿ ಗುರು ಬೆನೆದಿಕ್ಟ್ ರೊಡ್ರಿಗಸ್ ಅವರು ಗುಂಡೊಳ್ಳಿಯ ಸಂತ್ ಅಂತೋನಿ ಚರ್ಚ್‌ನಲ್ಲಿ ಗುರು ನೊಯೆಲ್ ಪ್ರಕಾಶ ಅವರ ಸಾನ್ನಿಧ್ಯದಲ್ಲಿ ಪೂಜಾವಿಧಿಗಳು ಜರುಗಿದವು.