ಬಿಸಿಎಂ ಹಾಸ್ಟೆಲ್‌ಗಳ ಉತ್ತಮ ಕಾರ್ಯನಿರ್ವಹಣೆ : ಗೀತಾ ಹುಡೇದ

| Published : May 10 2025, 01:12 AM IST

ಬಿಸಿಎಂ ಹಾಸ್ಟೆಲ್‌ಗಳ ಉತ್ತಮ ಕಾರ್ಯನಿರ್ವಹಣೆ : ಗೀತಾ ಹುಡೇದ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಸತ್ತಿ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಅಡುಗೆಯವರು ಮತ್ತು ಅಡುಗೆ ಸಹಾಯಕರಿಗೆ ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆ ಕುರಿತ ವಿಶೇಷ ಪುನಶ್ಚೇತನ ಕಾರ್ಯಗಾರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿ ನಿಲಯಗಳ ಅಡುಗೆಯವರು ಮತ್ತು ಅಡುಗೆ ಸಹಾಯಕರು ಹಾಸ್ಟೆಲ್‌ಗಳಲ್ಲಿರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಸಲಹೆ ನೀಡಿದರು.

ನಗರದ ಸತ್ತಿ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಅಡುಗೆಯವರು ಮತ್ತು ಅಡುಗೆ ಸಹಾಯಕರಿಗೆ ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆ ಕುರಿತ ಒಂದು ದಿನದ ವಿಶೇಷ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಅಡುಗೆಯವರಿಗೆ ಹಾಗೂ ಅಡುಗೆ ಸಹಾಯಕರಿಗೆ ಆಗಿಂದಾಗ್ಗೆ ತರಬೇತಿ ನೀಡುವ ಕಾರ್ಯಕ್ರಮಗಳು ಆಗುತ್ತಿರಬೇಕು. ಅದರಂತೆ ಅವರಿಗಾಗಿ ಆರೋಗ್ಯ ಶಿಬಿರ ಸಹ ಏರ್ಪಾಡಾಗಬೇಕು. ಇವರು ಸ್ವಚ್ಛತೆ ಹಾಗೂ ಆರೋಗ್ಯದಿಂದ ಇದ್ದರೆ ಮಾತ್ರ ವಿದ್ಯಾರ್ಥಿ ನಿಲಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯ. ಹಾಸ್ಟೆಲ್ ಸಂಬಂಧಿತ ಯಾವುದೇ ಸಮಸ್ಯೆಗಳು ಇದ್ದರೂ ಸಹ ಅದನ್ನು ನಮ್ಮ ಗಮನಕ್ಕೆ ತೊಂದರೆ ಅದನ್ನು ಪರಿಹರಿಸಲು ಕ್ರಮ ವಹಿಸಲಾಗುವುದು ಎಂದರು.ಅಡುಗೆಯನ್ನು ಪ್ರತಿದಿನವೂ ಮೆನುವಿನಲ್ಲಿರುವಂತೆ ರುಚಿಕರವಾಗಿ ಮಾಡಿಕೊಡುವ ಮನಸ್ಥಿತಿ ಹೊಂದಬೇಕು. ಬೇರೆ ಬೇರೆ ಊರುಗಳಿಂದ ವಿದ್ಯಾರ್ಥಿ ನಿಲಯಗಳಿಗೆ ಬಂದಿರುವ ಮಕ್ಕಳ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಬಹಳ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಅಡುಗೆಗೆ ಅವಧಿ ಮೀರಿದ ಪದಾರ್ಥಗಳನ್ನು ಬಳಸಿ ಅಡುಗೆ ತಯಾರಿಸಿಬಾರದು. ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಸಿದರೆ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರುವ ಸಾಧ್ಯತೆ ಹೆಚ್ಚಿರಲಿದೆ. ಹೀಗಾಗಿ ಅಡುಗೆ ಸಹಾಯಕರು ಜಾಗರೂಕತೆಯಿಂದ ಅಡುಗೆ ಪದಾರ್ಥಗಳನ್ನು ಪರಿಶೀಲನೆ ಮಾಡಿ ಗುಣಮಟ್ಟದ ಹಾಗೂ ರುಚಿಕರವಾಗಿ ಆಹಾರ ತಯಾರಿಸುವಲ್ಲಿ ಕ್ರಮ ವಹಿಸಬೇಕು ಎಂದರು. ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳಬಾರದು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ನಿಲಯಗಳಿಂದ ಹೊರ ಹೋದ ಮಕ್ಕಳು ನಿಮ್ಮನ್ನು ನೆನೆಸಿಕೊಳ್ಳುವಂತೆ ಅವರನ್ನು ನೋಡಿಕೊಳ್ಳಲು ಕ್ರಮವಹಿಸಬೇಕು ಎಂದು ಸಲಹೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ನಿಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶರಣಪ್ಪ ಎಂ.ಮೊಗಲೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಪ್ತ ಸಮಾಲೋಚಕಿ ಮೇಘಶ್ರೀ, ನಿವೃತ್ತ ನಿಲಯ ಪಾಲಕಿ ಮಂಜುಳ,ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶಿವಾಜಿರಾವ್ ಪವಾರ್, ಆರೋಗ್ಯ ಇಲಾಖೆಯ ಶಾಂತಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ವಿಶ್ವನಾಥ್, ತಾಲೂಕು ಅಧಿಕಾರಿ ಲಿಂಗರಾಜು, ಇತರರು ಹಾಜರಿದ್ದರು.