ಗ್ರಾಮಗಳಲ್ಲಿನ ರಸ್ತೆ, ಚರಂಡಿ, ಕುಡಿಯುವ ನೀರು, ಬಸ್ ನಿಲ್ದಾಣ, ಬೀದಿದೀಪ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವನ್ನು ಸಮುದಾಯ ಗಮನಿಸಬೇಕು.
ಮುಂಡಗೋಡ: ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಆಡಳಿತ, ಪಾರದರ್ಶಕತೆ ಮತ್ತು ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ಪಂಚಾಯತ್ ರಾಜ್ ಇಲಾಖೆಯ ತರಬೇತುದಾರ ಬಿ.ಎಸ್. ಮಲ್ಲಿಕಾರ್ಜುನಪ್ಪ ಹೇಳಿದರು.
ಪಟ್ಟಣದ ಲೊಯೋಲ ವಿಕಾಸ ಕೇಂದ್ರದ ತರಬೇತಿ ಸಭಾಂಗಣದಲ್ಲಿ ೨೫ ಗ್ರಾಮ ಅಭಿವೃದ್ಧಿ ಸಮಿತಿಗಳ ಮೂಲ ಸೌಕರ್ಯ ಮತ್ತು ಉತ್ತಮ ಆಡಳಿತ ಉಪಸಮಿತಿಯ ಪದಾಧಿಕಾರಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಗ್ರಾಮಗಳಲ್ಲಿನ ರಸ್ತೆ, ಚರಂಡಿ, ಕುಡಿಯುವ ನೀರು, ಬಸ್ ನಿಲ್ದಾಣ, ಬೀದಿದೀಪ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವನ್ನು ಸಮುದಾಯ ಗಮನಿಸಬೇಕು. ಕಳಪೆ ಕಾಮಗಾರಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಗ್ರಾಮಸಭೆ ಮತ್ತು ಪೂರ್ವಭಾವಿ ಸಭೆಗಳ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಗ್ರಾಮ ಅಭಿವೃದ್ಧಿ ಸಮಿತಿಗಳ ಪದಾಧಿಕಾರಿಗಳ ಜವಾಬ್ದಾರಿಗಳು, ವಿವಿಧ ಸರ್ಕಾರಿ ಇಲಾಖೆಗಳ ಪಾತ್ರ, ಚುನಾಯಿತ ಪ್ರತಿನಿಧಿಗಳ ಸಹಕಾರ, ಸರ್ಕಾರದ ಗ್ಯಾರಂಟಿ ಯೋಜನೆಗಳು, ಒಂದು ವರ್ಷದ ಅಭಿವೃದ್ಧಿ ಕ್ರಿಯಾಯೋಜನೆ ಹಾಗೂ ಐದು ವರ್ಷದ ದೂರದೃಷ್ಟಿ ಯೋಜನೆ ರೂಪಿಸುವ ಕುರಿತು ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಲೊಯೋಲ ವಿಕಾಸ ಕೇಂದ್ರದ ಸಹ ನಿರ್ದೇಶಕ ಸುಮಿತ್ ಮಾತನಾಡಿ, ತರಬೇತಿಯ ಜ್ಞಾನವನ್ನು ಗ್ರಾಮಗಳ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಂಜುನಾಥ ತಳವಾರ, ರವಿ ಲಮಾಣಿ, ಜನ್ನುಬಾಯಿ ಜಾನು ಗಾವಡೆ, ಸಾವಿತ್ರಿ ಸಿಂಧೆ, ಯಲ್ಲಮ್ಮ ಡೋಣಿ, ಭಿಮಪ್ಪ ನಾಯಕ ಉಪಸ್ಥಿತದ್ದರು.ಮಲ್ಲಮ್ಮ ನೀರಲಗಿ ನಿರೂಪಿಸಿ, ಸ್ವಾಗತಿಸಿದರು. ರವಿ ಲಮಾಣಿ ಸಂವಿಧಾನದ ಪ್ರಸ್ತಾವನೆ ವಾಚಿಸಿದರು. ತೇಜಸ್ವಿನಿ ಛಾಯಾಚಿತ್ರ ನಿರ್ವಹಿಸಿದರು. ನಕಲುಬಾಯಿ ಕೊಕರೆ ನೋಂದಣಿ ಕಾರ್ಯ ನಿರ್ವಹಿಸಿದರು. ಲಕ್ಷ್ಮಣ ಮುಳೆ ವಂದಿಸಿದರು.