ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸೂಕ್ತ ಮಾರ್ಗದರ್ಶನ, ಪರಿಶ್ರಮ, ಸಾಧಿಸುವ ಛಲವಿದ್ದು, ಪದವಿ ಹಂತದಲ್ಲಿಯೇ ನಾಗರಿಕ ಸೇವಾ ಪರೀಕ್ಷೆಗಳ ತಯಾರಿ ನಡೆಸಿದರೆ ಐಎಎಸ್, ಐಪಿಎಸ್, ಐಎಫ್‌ಎಸ್, ಇನ್ನಿತರೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು ಎಂದು ಇನ್‌ಸೈಟ್ ಐಎಎಸ್ ಅಕಾಡೆಮಿ ಸಂಸ್ಥಾಪಕ ವಿನಯ್‌ಕುಮಾರ್ ಜಿ. ಬಿ. ತಿಳಿಸಿದರು.ತುಮಕೂರು ವಿವಿಯಲ್ಲಿ ಹಿಂದುಳಿದ ವರ್ಗಗಳ ಕೋಶ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಶದ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ನಾಗರಿಕ ಸೇವಾ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ಸುದೀರ್ಘ ಓದು, ಬರವಣಿಗೆ, ಸಂವಹನ ಕೌಶಲ್ಯ, ಅನ್ವಯಿಕ ಜ್ಞಾನ, ಪ್ರಚಲಿತ ವಿದ್ಯಮಾನದ ಜ್ಞಾನವಿದ್ದು ಪರೀಕ್ಷಾ ಆಧಾರಿಕ ತರಬೇತಿ ಪಡೆದರೆ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು. ರಾಜ್ಯದ ಕಲ್ಯಾಣವಾಗಬೇಕಾದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎಂದು ಹೇಳಿದರು.ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಬಡತನ ಈ ಸಮಯಕ್ಕಷ್ಟೇ ಸೀಮಿತವಾಗಬೇಕು. ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿ ನಿರುದ್ಯೋಗ ಸಮಸ್ಯೆ ಮತ್ತು ಬಡತನ ನಿರ್ಮೂಲನೆ ಮಾಡಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಶಿಕ್ಷಣ, ಕೌಶಲ್ಯ, ಮೌಲ್ಯ, ಸಾಮಾಜಿಕ ಜವಾಬ್ದಾರಿಗಳನ್ನು ಕಲಿಸುವುದು ನಮ್ಮ ವಿಶ್ವವಿದ್ಯಾನಿಲಯದ ಗುರಿಯಾಗಿದೆ ಎಂದರು.ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ., ಹಿಂದುಳಿದ ವರ್ಗಗಳ ಕೋಶದ ನಿರ್ದೇಶಕಪ್ರೊ.ಪರಶುರಾಮ ಕೆ.ಜಿ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಶದ ಸಂಯೋಜಕಡಾ.ಮುನಿರಾಜು ಎಂ.ಉಪಸ್ಥಿತರಿದ್ದರು.