ಸಾರಾಂಶ
ಕನ್ನಡಪ್ರಭವಾರ್ತೆ ತಿಪಟೂರು
ತೆಂಗು ತಿಪಟೂರು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಜನರ ಆಹಾರ, ಆರೋಗ್ಯ ಹಾಗೂ ಗ್ರಾಮೀಣ ಆರ್ಥಿಕತೆಯಲ್ಲಿ ತೆಂಗು ಮಹತ್ವದ ಪಾತ್ರ ವಹಿಸಿದ್ದು ತೆಂಗು ಬೆಳೆ ನಿರ್ವಹಣೆಗೆ ವೈಜ್ಞಾನಿಕ ಕ್ರಮ ಅನುಸರಿಸಿದರೆ ಉತ್ತಮ ಫಸಲು ಪಡೆಯಬಹುದು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ತಾಲೂಕಿನ ನೊಣವಿನಕೆರೆ ಹೋಬಳಿಯ ವಿ.ಮಲ್ಲೇನಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ನಿರ್ವಹಣೆ ಯೋಜನೆಯಡಿ ರೈತರಿಗೆ ವಿವಿಧ ಪರಿಕರಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆ, ಮಣ್ಣಿನ ಪೋಷಕಾಂಶಗಳ ಕೊರತೆ ಮುಂತಾದ ಸಮಸ್ಯೆಗಳಿಂದ ತೆಂಗು ಉತ್ಪಾದನೆಯಲ್ಲಿ ಕುಸಿತಕಂಡಿದೆ. ಹಾಗಾಗಿ ಬೆಳೆಯ ಸರಿಯಾದ ನಿರ್ವಹಣೆ ಮತ್ತು ಹೆಚ್ಚು ಉತ್ಪಾದನೆಗೆ ಸರ್ಕಾರದ ವತಿಯಿಂದ ಪೋಷಕಾಂಶಗಳ ನೀಡಲಾಗುತ್ತಿದ್ದು ಕಿಟ್‌ನಲ್ಲಿ ತೆಂಗಿನ ಮರಗಳಿಗೆ ಅಗತ್ಯವಿರುವ ಪ್ರಮುಖ ರಾಸಾಯನಿಕ ಗೊಬ್ಬರಗಳು, ಸೂಕ್ಷ್ಮ ಪೋಷಕಾಂಶಗಳು, ಬೆಳೆಯ ಬೆಳವಣಿಗೆಯ ಹಂತದಲ್ಲಿ ನೀಡಬೇಕಾದ ಪೂರಕ ದ್ರವ ಪೋಷಕಾಂಶಗಳ ಜೊತೆಗೆ ತೆಂಗು ಬೆಳೆಯ ಆರೈಕೆ ಸಂಬಂಧಿತ ಮಾರ್ಗಸೂಚಿಗಳು ನೀಡಲಾಗಿದೆ. ರೈತರು ತಮ್ಮ ತೋಟಗಳಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಿ ಉತ್ತಮ ಉತ್ಪಾದನೆ ಪಡೆಯಬೇಕು. ಈ ನಿಟ್ಟಿನಲ್ಲಿ ರೈತರಿಗೆ ನೆರವಾಗಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಆರ್. ಚಂದ್ರಶೇಖರ್ ಮಾತನಾಡಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ಯೋಜನೆಯ ಯೋಜನೆಯಲ್ಲಿ ನೀಡುತ್ತಿರುವ ಪರಿಕರಗಳನ್ನು ವ್ಯಯ ಮಾಡದೆ ತಮ್ಮ ತೋಟಗಳಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಹಸಿರೆಲೆ ಗೊಬ್ಬರ, ಸಾವಯವ ಗೊಬ್ಬರ ಬಳಸಬೇಕು. ಕಾಂಡ ರಸ ಸೋರುವ ರೋಗಕ್ಕೆ ಹೆಕ್ಸಾಕೋನಾಜೋಲ್ ಔಷಧಿಯನ್ನು ಪ್ರತಿ ಗಿಡಕ್ಕೆ ೫ ಮೀ.ಲಿ ನಂತೆ ಬೇರಿನ ಮುಖಾಂತರ ಉಪಚರಿಸಬೇಕು ಹಾಗೂ ವಿವಿಧ ಪರಿಕರಗಳನ್ನು ಬಳಸುವ ವಿಧಾನ ಹಾಗೂ ಅವುಗಳಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತೆಂಗು ಬೆಳೆಗಾರರಿಗೆ ಬೇವಿನ ಹಿಂಡಿ, ಟ್ರೈಕೋಡರ್ಮಾ, ಬೇವಿನ ಎಣ್ಣೆ, ಎಕ್ಸೋಜೋನಲ್, ಮೆಗ್ನೀಷಿಯಮ್, ಜಿಂಕ್, ಬೋರಾನ್, ಹಸಿರೆಲೆ ಗೊಬ್ಬರ ಮತ್ತು ಬೀಜಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ದಸರೀಘಟ್ಟ ಗ್ರಾ.ಪಂ ಅಧ್ಯಕ್ಷೆ ಜಯಂತಮ್ಮ, ರಂಗಾಪುರ ಗ್ರಾ.ಪಂ ಅಧ್ಯಕ್ಷ ವಿಶ್ವನಾಥ್, ಸದಸ್ಯ ಸಿದ್ದೇಶ್, ಅಧಿಕಾರಿಗಳಾದ ಎಂ. ಕರಣ್, ಎಸ್. ಅಜಿತ್‌ಕುಮಾರ್, ಟಿ.ಆರ್. ಶಮಂತ, ಡಾ.ಮಲ್ಲಿಕಾರ್ಜುನ ಹೆಬ್ಬಾಳ, ಅಶ್ವಿನಿಬಡ್ನಿ, ಸಿಬ್ಬಂದಿ ರತ್ನಮ, ಜೆ.ಟಿ. ಶ್ರೀನಿವಾಸಗೌಡ, ಸತೀಶ್ ರೈತರಾದ ಶಂಕರಮೂರ್ತಿ, ರಾಜಶೇಖರ್, ಮಲ್ಲಿಕಾರ್ಜುನ್, ಪ್ರಸನ್ನ, ಮನೋಹರ್, ಕುಮಾರ್, ಸೇರಿದಂತೆ ರಂಗಾಪುರ ದಸರೀಘಟ್ಟ ಹುಣಸೇಘಟ್ಟ ಗ್ರಾ.ಪಂ ವ್ಯಾಪ್ತಿಯ ನೂರಕ್ಕೂ ಹೆಚ್ಚು ತೆಂಗು ಬೆಳೆಗಾರರು ಹಾಜರಿದ್ದರು.