ಉತ್ತಮ ಆರೋಗ್ಯ ಹೊಂದುವುದೇ ಸಾಧನೆ

| Published : Jan 13 2025, 12:46 AM IST

ಸಾರಾಂಶ

ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ಸಾಹಸವಾಗಿದೆ. ಈಗಿನ ಕಲುಷಿತವಾದ ವಾತಾವರಣ, ಕಲುಷಿತಗೊಂಡಿರುವ ನೀರು, ಕಲುಷಿತಗೊಂಡಿರುವ ಆಹಾರ ಪದಾರ್ಥಗಳ ಭರಾಟೆಯಲ್ಲಿ ಉತ್ತಮವಾದ ಆರೋಗ್ಯವನ್ನು ಹೊಂದುವುದೇ ಸಾಧನೆಯಾಗಿದೆ ಎಂದು ಶ್ರೀ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ಸಾಹಸವಾಗಿದೆ. ಈಗಿನ ಕಲುಷಿತವಾದ ವಾತಾವರಣ, ಕಲುಷಿತಗೊಂಡಿರುವ ನೀರು, ಕಲುಷಿತಗೊಂಡಿರುವ ಆಹಾರ ಪದಾರ್ಥಗಳ ಭರಾಟೆಯಲ್ಲಿ ಉತ್ತಮವಾದ ಆರೋಗ್ಯವನ್ನು ಹೊಂದುವುದೇ ಸಾಧನೆಯಾಗಿದೆ ಎಂದು ಶ್ರೀ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ತಾಲೂಕಿನ ಮಾಯಸಂದ್ರ ಟಿಬಿಯಲ್ಲಿರುವ ಚುಂಚಾದ್ರಿ ರೈತ ಸಂತೆ ಆವರಣದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಬಿ.ಭೈರಪ್ಪಾಜಿ ಪ್ರತಿಷ್ಠಾನದ ವತಿಯಿಂದ ಮಾಜಿ ಶಾಸಕರಾದ ದಿವಂಗತ ಬಿ.ಭೈರಪ್ಪಾಜಿಯವರ ೯೪ನೇ ವರ್ಷದ ಜನ್ಮದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆರೋಗ್ಯದ ಬಗ್ಗೆ ಯಾರೂ ತಾತ್ಸಾರ ಮಾಡಬಾರದು. ಯಾವುದೇ ಕ್ಷಣ ಮನುಷ್ಯರಿಗೆ ಸಾವು ಬರಬಹುದು. ಪ್ರತಿ ತಿಂಗಳಿಗೊಮ್ಮೆ ತಜ್ಞ ವೈದರನ್ನು ಭೇಟಿ ಮಾಡಿ ತಮ್ಮ ಆರೋಗ್ಯ ತಪಾಸಣೆಯನ್ನು ತಪ್ಪದೇ ಮಾಡಿಸಿಕೊಳ್ಳಬೇಕು ಎಂದು ಶ್ರೀ ಗಳು ಕಿವಿಮಾತು ಹೇಳಿದರು. ತಮ್ಮ ಮಠದ ವತಿಯಿಂದ ಬಿಜಿ ನಗರದಲ್ಲಿ ಇರುವ ಆಸ್ಪತ್ರೆ ಉನ್ನತ ದರ್ಜೆಗೆ ಏರಿದೆ. ನೂರಾರು ಕಾಯಿಲೆಗಳಿಗೆ ಪರಿಹಾರವನ್ನು ನೀಡುವ ವೈದ್ಯರ ತಂಡವಿದೆ. ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ಬಡವರಿಗಾಗೇ ತಮ್ಮ ಆಸ್ಪತ್ರೆ ಇದೆ. ಅತ್ಯಂತ ಕಡಿಮೆ ಹಣದಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆಯಲಿದೆ. ಜನರು ವಿವಿಧ ದುಶ್ಚಟಗಳಿಗೆ ಬಲಿಯಾಗಿರುವ ಕಾರಣ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಪ್ರಾರಂಭದ ಹಂತದಲ್ಲೇ ರೋಗಗಳ ಬಗ್ಗೆ ಜಾಗೃತಿ ಮೂಡಿ ಚಿಕಿತ್ಸೆ ಪಡೆದುಕೊಂಡರೆ ಕ್ಯಾನ್ಸರ್ ನ್ನು ಗುಣಪಡಿಸಬಹುದು. ಆರೋಗ್ಯದ ಬಗ್ಗೆ ಯಾರೂ ಸಂಕೋಚಪಟ್ಟುಕೊಳ್ಳದೇ ವೈದ್ಯರಲ್ಲಿ ಇರುವ ಎಲ್ಲಾ ಸಂಗತಿಗಳನ್ನು ತಿಳಿಸಿದಲ್ಲಿ ಸೂಕ್ತ ಪರಿಹಾರ ದೊರೆಯಲಿದೆ ಎಂದು ಶ್ರೀಗಳು ಹೇಳಿದರು.

ಯಾಂತ್ರಿಕ ಬದುಕಿಗೆ ಮೊರೆ ಹೋಗಿರುವ ಇಂದಿನ ಯುವ ಜನತೆ ತಮಗೆ ಜನ್ಮ ನೀಡಿದ, ಜೀವನ ಕಟ್ಟಿ ಕೊಟ್ಟಿರುವ ಹೆತ್ತ ತಂದೆ ತಾಯಿಯನ್ನೇ ಮರೆಯುವ ಸ್ಥಿತಿಗೆ ಬಂದಿದ್ದಾರೆ. ಕೇವಲ ದುಡ್ಡು ದುಡಿಯುವ ಸಲುವಾಗಿ ಸಂಬಂಧಗಳನ್ನು ದೂರವಾಗಿಸಿಕೊಂಡಿದ್ದಾರೆ. ವಯಸ್ಸಾಗುತ್ತಿದ್ದಂತೆ ತಮ್ಮ ಮಕ್ಕಳಿಂದ ತಾತ್ಸಾರಕ್ಕೆ ಒಳಗಾಗುವ ಸ್ಥಿತಿ ಬಂದಿದೆ. ಇದನ್ನು ಮನಗೊಂಡಿರುವ ಆದಿಚುಂಚನಗಿರಿ ಮಠವು ವಯಸ್ಕರ ಸಂಧ್ಯಾಕಾಲದಲ್ಲಿ ಉತ್ತಮ ಜೀವನ ನಡೆಸಲೆಂದು ವೃದ್ಧಾಶ್ರಮ ತೆರೆಯುವ ಬದಲು ವಾನಪ್ರಸ್ತಾಶ್ರಮ ಎಂಬ ಹೆಸರಿನಲ್ಲಿ ಸಕಲ ಸೌಲಭ್ಯಗಳು ಉಳ್ಳ ವಸತಿ ನಿಲಯವನ್ನು ತೆರೆದಿದೆ ಎಂದು ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು. ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆಗೂ ಅವಕಾಶ ಕಲ್ಪಿಸಲಾಗಿದೆ. ಅನಾದಿಕಾಲದಿಂದಲೂ ಸಾವಿರಾರು ರೋಗಗಳಿಗೆ ಮದ್ದು ನೀಡಿರುವ ಗಿಡಮೂಲಿಕೆಗಳ ಔಷಧಗಳ ಬಳಕೆಯಿಂದ ರೋಗಗಳು ಬಹು ಬೇಗನೇ ಗುಣವಾಗದಿದ್ದರೂ ಸಹ ಶಾಶ್ವತವಾಗಿ ನಿರ್ಮೂಲನೆ ಆಗುವುದು ಎಂದು ಅವರು ಹೇಳಿದರು. ಇದೇ ವೇಳೆ ಆದಿಚುಂಚನಗಿರಿ ಆಸ್ಪತ್ರೆ, ಶ್ರೀ ಕಾಲಭೈರವೈಶ್ವರಸ್ವಾಮಿ ಆಯುರ್ವೇದ ಆಸ್ಪತ್ರೆ, ಕರ್ನಾಟಕ ಕ್ಯಾನ್ಸರ್ ಸೊಸೈಟಿ, ತಿಪಟೂರಿನ ಶ್ರೀರಂಗ ಆಸ್ಪತ್ರೆ ಮತ್ತು ಕುಮಾರ್ ಆಸ್ಪತ್ರೆಯ ತಜ್ಞ ವೈದ್ಯರುಗಳು ಆಗಮಿಸಿ ಸಾವಿರಾರು ಜನರಿಗೆ ಆರೋಗ್ಯ ತಪಾಸಣೆ ನಡೆಸಿದರು. ಬಿ.ಭೈರಪ್ಪಾಜಿ ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಟಿ.ಗಂಗಾಧರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂಧರ್ಭದಲ್ಲಿ ಶ್ರೀ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ, ಮಾಜಿ ಶಾಸಕ ಮಸಾಲಾ ಜಯರಾಮ್, ಒಕ್ಕಲಿಗರ ಸಂಘದ ಅಧ್ಯಕ್ಷರಾದ ಪಿ.ಎಚ್.ಧನಪಾಲ್, ಬಿ.ಭೈರಪ್ಪಾಜಿಯವರ ಪುತ್ರ ಬೆಟ್ಟಸ್ವಾಮಿಗೌಡ, ಮುಖಂಡರಾದ ಕೆಂಪಯ್ಯ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್, ಚೌದ್ರಿ ರಂಗಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ರಂಗನಾಥ್, ಕೆಂಪಯ್ಯ, ಜವರೇಗೌಡ, ಮಾಯಸಂದ್ರ ಸ್ವಾಮಿ, ಡಾ.ಜಿ.ವಿ.ವಿವೇಚನ್, ಡಾ.ಶ್ರೀಧರ್, ನಿತೀಶ್, ಕುಶಾಲ್ ಕುಮಾರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.