ಶಿಸ್ತುಬದ್ಧ ಜೀವನದಿಂದ ಸದೃಢ ಆರೋಗ್ಯ: ಡಾ.ಅಂಜನಪ್ಪ

| Published : Aug 12 2024, 12:47 AM IST

ಸಾರಾಂಶ

ಸಾಗರ ತಾಲೂಕು ಕಸಾಪ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕಿಮ್ಸ್ ಆಸ್ಪತ್ರೆ ಉಪಾಧ್ಯಕ್ಷ ಡಾ.ಆರ್.ಅಂಜನಪ್ಪ ಹಾಗೂ ವೈಚಾರಿಕ ಚಿಂತಕ ಡಾ. ಹುಲಿಕಲ್ ನಟರಾಜ್‌ರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭವಾರ್ತೆ ಸಾಗರ

ಸದೃಢ ಆರೋಗ್ಯವಿದ್ದಾಗ ಮಾತ್ರ ಸುಂದರ ಜೀವನ ರೂಪಿಸಿಕೊಳ್ಳಲು ಸಾಧ್ಯ. ಶಿಸ್ತುಬದ್ಧ ಜೀವನ ಅನೇಕ ಕಾಯಿಲೆಗಳು ನಮ್ಮ ದೇಹ ಪ್ರವೇಶ ಮಾಡುವುದನ್ನು ತಡೆಯುತ್ತದೆ ಎಂದು ಕಿಮ್ಸ್ ಆಸ್ಪತ್ರೆ ಉಪಾಧ್ಯಕ್ಷ ಡಾ.ಆರ್.ಅಂಜನಪ್ಪ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಆರೋಗ್ಯದಲ್ಲಿ ಆತಂಕವೇಕೆ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ನಮ್ಮ ಆರೋಗ್ಯದ ರಕ್ಷಣೆ ನಮ್ಮ ಕೈಯಲ್ಲಿಯೇ ಇದೆ ಎಂದು ಅಭಿಪ್ರಾಯಪಟ್ಟರು.

ಧಾವಂತದ ಬದುಕು ನಮ್ಮನ್ನು ಎತ್ತಲೋ ಕರೆದೊಯ್ಯುತ್ತಿದೆ. ಎಲ್ಲದ್ದಕ್ಕೂ ಸಮಯ ಕೊಡುವ ನಾವು ಆರೋಗ್ಯದ ವಿಷಯ ಬಂದಾಗ ನಿಷ್ಕಾಳಜಿ ವಹಿಸುತ್ತಿದ್ದೇವೆ. ದೈನಂದಿನ ಬದುಕಿನಲ್ಲಿ ಒಂದಷ್ಟು ಶಿಸ್ತು ಪಾಲನೆ ಮಾಡಬೇಕು. ಮಕ್ಕಳನ್ನು ಜಂಕ್‌ ಫುಡ್‌ನಿಂದ ಹೊರಗೆ ತಂದು ತರಕಾರಿ, ಹಣ್ಣು ಇನ್ನಿತರ ಪೌಷ್ಠಿಕಾಂಶವಿರುವ ಆಹಾರ ನೀಡುವ ಮೂಲಕ ಭವಿಷ್ಯದಲ್ಲಿ ಅವರನ್ನು ಸದೃಢಗೊಳಿಸಬೇಕು ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶ ಮಧುಮೇಹ ಕಾಯಿಲೆ ಕೇಂದ್ರವಾಗುತ್ತಿದೆ. ಮಧುಮೇಹ ಕಾಯಿಲೆ ಅಲ್ಲ. ಅದನ್ನು ನಿಯಂತ್ರಿಸುವ ಶಕ್ತಿ ನಮ್ಮಲ್ಲಿಯೆ ಇರುತ್ತದೆ. ನಿಯಮಿತ ಆಹಾರ, ವ್ಯಾಯಾಮ, ವಾಕಿಂಗ್ ರೂಢಿಸಿಕೊಂಡರೆ ಅನೇಕ ಕಾಯಿಲೆಗಳಿಂದ ದೂರವಿರಲು ಸಾಧ್ಯವಿದೆ ಎಂದು ಹೇಳಿದರು.

ಮನಸ್ಸೇ ಹೀಗೇಕೆ ವಿಷಯ ಕುರಿತು ವೈಚಾರಿಕ ಚಿಂತಕ ಡಾ.ಹುಲಿಕಲ್ ನಟರಾಜ್ ಮಾತನಾಡಿ, ಯಾವ ವ್ಯಕ್ತಿ ತನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುತ್ತಾನೋ ಆತ ಸುಂದರ ಬದುಕನ್ನು ನಡೆಸುತ್ತಾನೆ. ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ವಿಫಲರಾದ ನಾವು ದೆವ್ವ, ಭೂತ ಮಾಟಮಂತ್ರ ಇನ್ನಿತರ ಮೂಢನಂಬಿಕೆ ದಾಸರಾಗುತ್ತಿದ್ದೇವೆ. ಗ್ರಹಚಾರ ಕೆಟ್ಟಿದೆ ಎನ್ನುವುದಕ್ಕಿಂತ ಮನಸ್ಸು ಹತೋಟಿಯಲ್ಲಿ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಯಾರೂ ಸಿದ್ಧರಿಲ್ಲ ಎಂದು ಹೇಳಿದರು.

ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜಿ.ನಾಗೇಶ್ ಉಪಸ್ಥಿತರಿದ್ದರು. ಡಾ.ಪ್ರಸನ್ನ ಸ್ವಾಗತಿಸಿ, ಲೋಕೇಶಕುಮಾರ್ ವಂದಿಸಿ, ನಾರಾಯಣಮೂರ್ತಿ ನಿರೂಪಿಸಿದರು.