ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರಆರೋಗ್ಯದ ಬಗ್ಗೆ ಕಾಳಜಿ, ದೈಹಿಕ ಚಟುವಟಿಕೆಗಳು ಹಾಗೂ ತಮ್ಮ ಶಿಸ್ತಿನ ಜೀವನಶೈಲಿಯಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ. ಸೀನಪ್ಪ ಹೇಳಿದರು.
ಜ್ಞಾನಕಾವೇರಿ ಆವರಣ ಚಿಕ್ಕಅಳುವಾರ ಇಲ್ಲಿನ ಮಾನವಿಕ ಸಂಕೀರ್ಣದ ಕಾವೇರಿ ಸಭಾಂಗಣದಲ್ಲಿ ಕೊಡಗು ವಿಶ್ವವಿದ್ಯಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಂಗಾಲ ವತಿಯಿಂದ ಹಮ್ಮಿಕೊಂಡಿದ್ದ ‘ಉಚಿತ ಆರೋಗ್ಯ ತಪಾಸಣೆ ಹಾಗೂ ಆಯುಷ್ಮಾನ್ ಕಾರ್ಡ್’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ತಮ್ಮ ಒತ್ತಡದ ಕೆಲಸದ ನಡುವೆ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸದ ಕಾರಣ ಒತ್ತಡ ಹೆಚ್ಚಾಗಿ ತೊಂದರೆ ಉಂಟಾಗುತ್ತಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ. ವೈದ್ಯರ ಸೂಕ್ತ ಮಾರ್ಗದರ್ಶನದ ಜೊತೆಗೆ ಸರಿಯಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಕಟ್ಟುನಿಟ್ಟಿನ ವ್ಯಾಯಾಮ ಹಾಗೂ ನಿರಂತರ ವೇಗ ನಡಿಗೆಯನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯದ ಜೀವನ ನಮ್ಮದಾಗುತ್ತದೆ. ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಮತ್ತು ಸಮುದಾಯದ ಆಸಕ್ತಿ, ಸ್ಥಳೀಯ ಆರೋಗ್ಯ ಇಲಾಖೆಯ ಜವಾಬ್ದಾರಿಯಿಂದ ಮಾತ್ರ ಆರೋಗ್ಯ ವಾತಾವರಣ ನಿರ್ಮಾಣ ಮಾಡುವುದಕ್ಕೆ ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಅಶೋಕ್, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಲಭ್ಯ. 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಪ್ರಾಥಮಿಕ ಮತ್ತು ಸಾಮಾನ್ಯ ದ್ವಿತೀಯ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತದೆ. ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದರೆ ರೆಫರಲ್ ನೀಡಲಾಗುತ್ತದೆ. ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಛಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದರು.
ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಬಿಪಿಎಲ್ ಪಡಿತರ ಕಾರ್ಡು ಹೊಂದಿರುವವರು ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ 5 ಲಕ್ಷ ರು.ಗಳವರೆಗೆ ಉಚಿತ ಚಿಕಿತ್ಸೆ ಲಭ್ಯ. ಎಪಿಎಲ್ ಕಾರ್ಡುದಾರರು ಆಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ.30ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರು. ಇರುತ್ತದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹಾಜರುಪಡಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.ಇದೇ ಸಂದರ್ಭ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವೃಂದದವರು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಸೌರಬ್, ಬಿಂದು, ಆರೋಗ್ಯ ಮಿತ್ರ ಅಧಿಕಾರಿ ಪ್ರತಿಭಾ, ಜಿಲ್ಲಾ ಈ ಆಸ್ಪತ್ರೆ ತಾಂತ್ರಿಕ ಸಂಯೋಜಕರಾದ ರಾಜೀವ್ ಭಾಗವಹಿಸಿದ್ದರು.