ಅಣಬೆ ಬೇಸಾಯದಿಂದ ಉತ್ತಮ ಆದಾಯ: ಡಾ. ಎ.ಎಚ್. ಬಿರಾದಾರ

| Published : Jul 30 2025, 12:47 AM IST

ಸಾರಾಂಶ

ಕೇವಲ ಬೆಳೆಗಳನ್ನು ನಂಬಿಕೊಂಡರೆ ವರ್ಷಪೂರ್ತಿ ಆದಾಯವನ್ನು ಪಡೆಯಲು ಸಾಧ್ಯವಿಲ್ಲ. ಅತಿ ಕಡಿಮೆ ವೆಚ್ಚದಲ್ಲಿ 20ರಿಂದ 25 ದಿನಗಳಲ್ಲಿ ಆದಾಯ ಪಡೆಯುವ ಸುಲಭದ ಕೆಲಸ ಅಣಬೆ ಬೇಸಾಯ. ಕೃಷಿಯ ತ್ಯಾಜ್ಯವನ್ನು ಉಪಯೋಗಿಸಿಕೊಳ್ಳಲು ಅಣಬೆ ಬೇಸಾಯವನ್ನು ಮಾಡಬಹುದು.

ರಾಣಿಬೆನ್ನೂರು: ಉತ್ತಮ ಆದಾಯ ಪಡೆಯಲು ರೈತರು ಅಣಬೆ ಬೇಸಾಯದಂತಹ ಉಪಕಸುಬುಗಳನ್ನು ಕೈಗೊಳ್ಳಬೇಕು ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಎಚ್. ಬಿರಾದಾರ ತಿಳಿಸಿದರು.ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಣಬೆ ಬೇಸಾಯದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇವಲ ಬೆಳೆಗಳನ್ನು ನಂಬಿಕೊಂಡರೆ ವರ್ಷಪೂರ್ತಿ ಆದಾಯವನ್ನು ಪಡೆಯಲು ಸಾಧ್ಯವಿಲ್ಲ. ಅತಿ ಕಡಿಮೆ ವೆಚ್ಚದಲ್ಲಿ 20ರಿಂದ 25 ದಿನಗಳಲ್ಲಿ ಆದಾಯ ಪಡೆಯುವ ಸುಲಭದ ಕೆಲಸ ಅಣಬೆ ಬೇಸಾಯ. ಕೃಷಿಯ ತ್ಯಾಜ್ಯವನ್ನು ಉಪಯೋಗಿಸಿಕೊಳ್ಳಲು ಅಣಬೆ ಬೇಸಾಯವನ್ನು ಮಾಡಬಹುದು ಎಂದರು.

ಅಣಬೆಯು ಸಾಕಷ್ಟು ಆರೋಗ್ಯ ಉತ್ತಮ ಆರೋಗ್ಯಕ್ಕೆ ಬೇಕಾಗಿರುವ ಅಂಶಗಳನ್ನು ಹೊಂದಿದ್ದು, ಜಮೀನು ಇಲ್ಲದವರು ಕೂಡ ಬೆಳೆಯಬಹುದಾದ ಅಣಬೆಯನ್ನು ಎಲ್ಲರೂ ಬೆಳೆದು ತಾವು ತಿಂದು ನೆರೆಯವರಿಗೆ ನೀಡುವ ಮೂಲಕ ಅಣಬೆಗೆ ಹೆಚ್ಚು ಪ್ರಚಾರವನ್ನು ನೀಡಬೇಕು. ಮಹಿಳೆಯರು, ಗೃಹಿಣಿಯರು ಈ ಬೆಳೆಯನ್ನು ಕಡಿಮೆ ಜಾಗದಲ್ಲಿ ಬೆಳೆದು ಉತ್ತಮ ಆದಾಯವನ್ನು ಗಳಿಸಬಹುದು ಎಂದರು.

ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ನೂರ್‌ನವಾಜ್ ಎ. ಎಸ್., ಮಾತನಾಡಿ, ಅಣಬೆ ಬೇಸಾಯವು ರೈತರಿಗೆ ಹೆಚ್ಚಿನ ಆದಾಯವನ್ನು ತರಬಲ್ಲ ಉಪಕಸುಬು ಆಗಿದೆ. ಬಿಳಿಗೋಡು(ಆಗ್ಯಾರಿಕಸ್) ಹಾಲಅಣಬೆ, ಭತ್ತದ ಹುಲ್ಲಿನ ಅಣಬೆ ಮತ್ತು ಚಿಪ್ಪಣಬೆ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಚಿಪ್ಪಣಬೆಯನ್ನು ಸುಲಭವಾಗಿ ಮನೆಯಲ್ಲಿ ಬೆಳೆಯಬಹುದು. ಬೀಜ ಬಿತ್ತನೆ ಮಾಡಿದ 23ರಿಂದ 25 ದಿನಗಳಲ್ಲಿ ಮೊದಲಿನ ಕೊಯಿಲು ಮಾಡಬಹುದು ಎಂದರು.

ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಎಚ್.ಎಂ. ಮಾತನಾಡಿ, ಅಣಬೆ ಬೆಳೆಯು ಶುದ್ಧ ಸಸ್ಯಹಾರಿಯಾಗಿದ್ದು, ಎಲ್ಲರೂ ಅದನ್ನು ಸೇವಿಸಬೇಕು. ತಿನ್ನುವ ಅಣಬೆಗಳು ಇತರೆ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿರುತ್ತವೆ. ಅಣಬೆಗಳಲ್ಲಿ ಪ್ರೋಟಿನ್, ಜೀವಸತ್ವಗಳು ಹೆಚ್ಚಾಗಿದ್ದು ಸಸಾರಜನಕ, ಅನ್ನಾಂಗಗಳು ಮತ್ತು ಖನಿಜಗಳು ಹೇರಳವಾಗಿವೆ. ತಿನ್ನುವ ಅಣಬೆಗಳಲ್ಲಿ ಸಕ್ಕರೆ ಅಂಶ ಮತ್ತು ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಮಧುಮೇಹ ರೋಗಿಗಳಿಗೆ ಮತ್ತು ಹೃದಯ ಸಂಬಂಧ ರೋಗಿಗಳಿಗೆ ಉತ್ತಮ ಆಹಾರ ಎಂದರು.

ಗೃಹ ವಿಜ್ಞಾನ ವಿಷಯತಜ್ಞೆ ಡಾ. ಅಕ್ಷತಾ ರಾಮಣ್ಣನವರ ಮಾತನಾಡಿ, ತಾಜಾ ಅಣಬೆ ಮಾರಾಟವಾಗದೆ ಇದ್ದಲ್ಲಿ ಅಂತಹ ಅಣಬೆಗಳನ್ನು ಒಣಗಿಸಿ ಪುಡಿಯಾಗಿ ಪರಿವರ್ತನೆಗೊಳಿಸಬೇಕು. ಆ ಮೂಲಕ ಕಡಿಮೆ ಉಷ್ಣಾಂಶದಲ್ಲಿ ಶೇಖರಿಸಿ ಬಳಸುವ ತಂತ್ರಜ್ಞಾನ ಮತ್ತು ಅಣಬೆಯಿಂದ ತಯಾರಿಸಬಹುದಾದ ಆಹಾರ ಪದಾರ್ಥಗಳ ಬಗ್ಗೆ ತಿಳಿಸಿದರು.

ಅಣಬೆ ಬೇಸಾಯ ತೊಡಗಿಸಿಕೊಂಡಿರುವ ರೈತರು ಅಣಬೆ ಬೇಸಾಯದಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಅಣಬೆ ಬೀಜ, ಸಂಗ್ರಹಣೆ, ಮಾರುಕಟ್ಟೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿಯನ್ನು ತಿಳಿಸಿದರು.ಕೃಷಿ ವಿಜ್ಞಾನ ಕೇಂದ್ರ ಸಿಬ್ಬಂದಿ, 40ಕ್ಕೂ ಹೆಚ್ಚು ಆಸಕ್ತ ರೈತರು, ರೈತ ಮಹಿಳೆಯರು, ನಗರವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.