ಪೊಲೀಸರಿಗೆ ಸಿಹಿ ಸುದ್ದಿ: 28ಕ್ಕೆ ಹೊಸ ‘ಪಿ ಕ್ಯಾಪ್’

| Published : Oct 24 2025, 01:00 AM IST

ಸಾರಾಂಶ

ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ಗಳ ‘ಸ್ಲೋಚ್ ಕ್ಯಾಪ್‌’ಗೆ ಅಂತಿಮ ವಿದಾಯ ಹೇಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ಗಳ ‘ಸ್ಲೋಚ್ ಕ್ಯಾಪ್‌’ಗೆ ಅಂತಿಮ ವಿದಾಯ ಹೇಳಲು ಮುಹೂರ್ತ ನಿಗದಿಯಾಗಿದ್ದು, ಇದೇ ತಿಂಗಳ 28ರಂದು ಪೊಲೀಸರಿಗೆ ಹೊಸ ಪಿ ಕ್ಯಾಪ್ ಅನ್ನು ಸರ್ಕಾರ ವಿತರಿಸಲಿದೆ.

ವಿಧಾನಸೌಧ ಬ್ಯಾಕ್ವೆಂಟ್ ಹಾಲ್‌ನಲ್ಲಿ ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೊಸ ‘ಪಿ ಕ್ಯಾಪ್’ ಅನ್ನು ಸಾಂಕೇತಿಕವಾಗಿ ಕೆಲ ಪೊಲೀಸರಿಗೆ ವಿತರಿಸಲಿದ್ದಾರೆ. ಇದಕ್ಕಾಗಿ ಪ್ರತಿ ಜಿಲ್ಲೆ ಹಾಗೂ ಕಮಿಷನರೇಟ್‌ನಿಂದ ತಲಾ ಒಬ್ಬೊಬ್ಬ ಹೆಡ್ ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್‌ಗಳನ್ನು ಕಳುಹಿಸುವಂತೆ ಅಧಿಕಾರಿಗಳಿಗೆ ಡಿಜಿಪಿ ಡಾ। ಎಂ.ಸಲೀಂ ಸೂಚಿಸಿದ್ದಾರೆ.

ತೆಲಂಗಾಣದ ಕ್ಯಾಪ್ ಮಾದರಿಯಲ್ಲೇ ರಾಜ್ಯದ ಪೊಲೀಸರಿಗೆ ಹೊಸ ‘ಪಿ ಕ್ಯಾಪ್’ ವಿನ್ಯಾಸಗೊಳಿಸಲಾಗಿದೆ. ಆದರೆ ರಾಜ್ಯ ಪೊಲೀಸ್ ಲಾಂಛನ ಕ್ಯಾಪ್‌ನ ಮಧ್ಯೆ ಅಚ್ಚೊತ್ತಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳಿಗೆ ಹೊಸ ಪಿ ಕ್ಯಾಪ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮಿತಿಸಿದ್ದರು. ಅಲ್ಲದೆ, ಆ ದಿನ ಡಿಜಿಪಿ ಕಚೇರಿಯಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ಸೇರಿ ಐದು ರಾಜ್ಯಗಳ ಕ್ಯಾಪ್ ಅನ್ನು ಪ್ರದರ್ಶಿಸಲಾಗಿತ್ತು. ಇದರಲ್ಲಿ ತೆಲಂಗಾಣ ಮಾದರಿಯ ಕ್ಯಾಪ್ ಅನ್ನು ಮುಖ್ಯಮಂತ್ರಿಗಳು ಆಯ್ಕೆ ಮಾಡಿಕೊಂಡಿದ್ದರು.