ಜೇನು ಕೃಷಿಯಿಂದ ಉತ್ತಮ ಲಾಭ

| Published : May 21 2025, 02:02 AM IST

ಸಾರಾಂಶ

ಹಿರಿಯೂರು ತಾಲೂಕಿನ ಬಬ್ಬೂರು ಸಮೀಪದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿಶ್ವ ಜೇನು ಕೃಷಿ ದಿನಾಚರಣೆ ಹಾಗೂ ಕಾರ್ಯಾಗಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ರೈತರು ಕೃಷಿಯಲ್ಲಿ ಜೇನು ಕೃಷಿ ಅನುಸರಿಸುವುದರಿಂದ ಸಾಕಷ್ಟು ಲಾಭವಾಗುವುದರ ಜತೆಗೆ ಉತ್ತಮ ಆದಾಯಗಳಿಸಬಹುದು. ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ವಿಫುಲ ಅವಕಾಶಗಳಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಚಂದನ ಮಧುವನ ಹಿರಿಯ ಜೇನು ಕೃಷಿಕ ಶಾಂತವೀರಯ್ಯ ಹೇಳಿದರು.

ತಾಲೂಕಿನ ಬಬ್ಬೂರು ಸಮೀಪದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮಂಗಳವಾರ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ, ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ, ಗ್ಲೋಬಲ್ ಗ್ರೀನ್ ಗ್ರೋಥ್, ಕೃಷಿ ಅರಣ್ಯ ರೈತರ ಹಾಗೂ ತಂತ್ರಜ್ಞರ ಸಂಸ್ಥೆ ನೇತೃತ್ವದಲ್ಲಿ ಆಯೋಜಿಸಿದ್ದ ವಿಶ್ವ ಜೇನು ಕೃಷಿ ದಿನಾಚರಣೆ ಹಾಗೂ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೇನುಕೃಷಿ ರಾಜ್ಯ ವ್ಯಾಪಿಯಾಗಿ ವಿಸ್ತರಿಸಲು ಸಾಕಷ್ಟು ಆನುದಾನ ಲಭ್ಯವಿದ್ದು ಅದರ ಬಳಕೆ ಮಾಡಿಕೊಳ್ಳಬೇಕು. ನಿರುದ್ಯೋಗಿ ಯುವಕರಿಗೆ ಜೇನು ಕೃಷಿಯು ಆಶಾದಾಯಕ ಅವಕಾಶವಾಗಿದೆ. ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳ ಜತೆಗೆ ಜೇನು ಸಾಕಾಣಿಕೆ ಮಾಡುವುದರಿಂದ ಕೃಷಿಯ ಉತ್ಪನ್ನವೂ ಹೆಚ್ಚಾಗುತ್ತದೆ. ಜತೆಗೆ ಆದಾಯ ಗಳಿಸಲು ಸಾಧ್ಯವಾಗುತ್ತದೆ. ರಾಜ್ಯದ ಕೃಷಿ ಆಧಾರಿತ ಕಾಲೇಜುಗಳಲ್ಲಿ ಜೇನು ಕೃಷಿಯ ತರಬೇತಿ ಹಾಗೂ ಕಾರ್ಯಾಗಾರ ಆಯೋಜಿಸುವುದರಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಕವಾಗುತ್ತದೆ ಎಂದರು.

ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎ.ಬಿ.ಪಾಟೀಲ್ ಮಾತನಾಡಿ, ಜೇನುಕೃಷಿ ಮಾನವ ಸಂಕುಲಕ್ಕೆ ಪ್ರಕೃತಿ ದತ್ತ ಕೊಡುಗೆ. ನಮ್ಮ ದೈನಂದಿನ ಜೀವನದಲ್ಲಿ ಜೇನಿನ ಬಳಕೆ ಮತ್ತು ಅದರ ಮಹ್ವತ ಹೆಚ್ಚಾಗುತ್ತಿದ್ದು ಜೇನು ಕೃಷಿಯ ಮಹತ್ವದ ಬಗ್ಗೆ ಪ್ರತಿಯೊಬ್ಬರು ತಿಳಿಯಬೇಕಿದೆ. ಪ್ರಸ್ತುತ ನಗರ ಪ್ರದೇಶಗಳಲ್ಲಿ ಜೇನು ಬೆಳೆವಣಿಗೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಕೃಷಿಯಲ್ಲಿ ಮಣ್ಣು ಆರೋಗ್ಯಕರವಾಗಿದ್ದರೆ ಉತ್ತಮ ಬೆಳೆ ಬೆಳೆಯಬಹುದು. ಇದರಿಂದ ಪೌಷ್ಠಿಕ ಅಹಾರ ಸಿಗುತ್ತದೆ. ಉತ್ತಮ ಆಹಾರ ಸೇವಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಕೃಷಿ ಅರಣ್ಯ ರೈತರ ಹಾಗೂ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ರಮೇಶ್ ಮಾತನಾಡಿದರು. ಈ ವೇಳೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಸುರೇಶ್ ಏಕಬೋಟೆ, ಜಿಜಿಜಿಸಿ ಸಿಎಂಡಿ ಪ್ರೊ.ಚಂದ್ರಶೇಖರ್ ಬಿರಾದರ್, ಚಿತ್ರದುರ್ಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಂಜುನಾಥ್, ರೈನ್‌ಫಾರೆಸ್ಟ್ ಆಲೈಯನ್ಸ್ ಡಾ.ಸುಬ್ಬಾರೆಡ್ಡಿ, ಬೀಹೂ ಉದ್ಯಮಿ ಅಪೂರ್ವ, ಹಿರಿಯ ವಿಜ್ಞಾನಿ ಡಾ.ಪವಿತ್ರ ನಾಯ್ಕ್, ಡಾ.ಓಂಕಾರಪ್ಪ, ಡಾ.ರಜನೀಕಾಂತ್, ಓ.ಕುಮಾರ್, ಡಾ.ಕೆಂಚರೆಡ್ಡಿ. ಪ್ರಮೋದ್ ಬಸವರಾಜ್ ಮುಂತಾದವರು ಹಾಜರಿದ್ದರು. ಇದೇ ವೇಳೆ ಕೃಷಿವನ ಮಾಸಪತ್ರಿಕೆ ಬಿಡುಗಡೆಗೊಳಿಸಲಾಯಿತು.