ಸಾರಾಂಶ
ಹಾನಗಲ್ಲ: ಕೃಷಿ ಆಧಾರಿತ ನಮ್ಮ ನಾಡಿನಲ್ಲಿ ಹೈನುಗಾರಿಕೆಯೂ ಒಂದು ಉದ್ಯಮವಾಗಿ ಪ್ರಗತಿ ಕಂಡಲ್ಲಿ ರೈತರಿಗೆ ಉಪ ಉದ್ಯೋಗವಾಗಿ ಲಾಭ ತರಲು ಸಾಧ್ಯವಿದ್ದು, ಬದಲಾದ ಕಾಲಕ್ಕೆ ಉತ್ತಮ ತರಬೇತಿ ಪಡೆದು ಉತ್ತಮ ಹಾಲು ಉತ್ಪಾದನೆಗೆ ಮುಂದಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಸಂಯೋಜಕ ರಾಘವೇಂದ್ರ ಪಟಗಾರ ತಿಳಿಸಿದರು.ಹಾನಗಲ್ಲ ತಾಲೂಕಿನ ಶಿರಗೋಡು ವಲಯದ ಹನುಮನಕೊಪ್ಪ ಗ್ರಾಮದಲ್ಲಿ ಆಯೋಜಿಸಿದ ಹೈನುಗಾರಿಕೆ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಆಧಾರಿತ ಹತ್ತು ಹಲವು ಉದ್ಯೋಗಾವಕಾಶಗಳಿವೆ. ಅದರಲ್ಲಿ ಹೈನುಗಾರಿಕೆ ಅತ್ಯಂತ ಸಹಜ ಮತ್ತು ಕೃಷಿಯೊಂದಿಗೆ ಅತ್ಯಂತ ಹಿತಕರ ಸಂಬಂಧ ಹೊಂದಿದ ಲಾಭ ತರುವ ಉಪ ಉದ್ಯಮವಾಗಬಲ್ಲದು. ಸ್ವಾವಲಂಬಿ ಜೀವನಕ್ಕೆ ಇದು ಅತ್ಯಂತ ಸಹಕಾರಿಯಾದುದು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೂಲಕ ಹೈನುಗಾರಿಕೆ ಸೇರಿದಂತೆ ಕೃಷಿ ಉಪ ಉದ್ಯಮಗಳಿಗಾಗಿ ತರಬೇತಿ ಹಾಗೂ ಅಗತ್ಯ ಸಹಾಯ ಧನ ನಿಡುವ ಸೌಲಭ್ಯಗಳನ್ನು ಕೂಡ ನೀಡಲಾಗುತ್ತಿದೆ. ಎಲ್ಲ ಸಂದರ್ಭಗಳಲ್ಲಿ ರೈತ ಯುವಕರು ನಗರಕ್ಕೆ ಪಲಾಯನ ಮಾಡುವ ಬದಲು ಕೃಷಿಯೊಂದಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯ. ಕೃಷಿ ಶಾರೀರಿಕ ಶ್ರಮ ಉಳ್ಳದ್ದು. ಅದರೊಂದಿಗೆ ಅತ್ಯಂತ ತೃಪ್ತಿಯೊಂದಿಗೆ ಮಾಡುವ ಬದುಕು ಕಟ್ಟಿಕೊಳ್ಳುವ ಕಾರ್ಯ ಎಂದರು.ಕೆಎಂಎಫ್ ಹಾಲು ಒಕ್ಕೂಟದ ಪಶು ವೈದ್ಯ ಡಾ. ಬಸವರಾಜ ಶಾಬಣ್ಣನವರ ಕೃಷಿಕರಿಗೆ ತರಬೇತಿ ನೀಡಿ ಮಾತನಾಡಿ, ಹೈನುಗಾರಿಕೆಯನ್ನು ಸಾಂಪ್ರದಾಯಕ ಪದ್ಧತಿಯಲ್ಲಿ ನಿರ್ವಹಿಸಿ ಲಾಭ ಇಲ್ಲ ಎಂದು ಗೊಣಗುವುದಕ್ಕಿಂತ, ಹೊಸ ಪದ್ಧತಿಗಳನ್ನು ಆಧರಿಸಿ ಹೈನುಗಾರಿಕೆಗೆ ಮುಂದಾಗಬೇಕು. ಬದಲಾದ ಕಾಲಕ್ಕೆ ಹೊಸ ಸಂಶೋಧನೆಗಳು ಹೈನುಗಾರಿಕೆಗೆ ಸಹಕಾರಿ. ಅಂತಹ ಸುಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಹಸುಗಳ ಆಯ್ಕೆ, ಹಸಿರು ಆಹಾರ ನೀಡುವುದು, ಕೊಟ್ಟಿಗೆಗಳ ನಿರ್ವಹಣೆ, ಜಾನುವಾರುಗಳ ಆರೋಗ್ಯ ಸೇರಿದಂತೆ ವಿವಿಧ ತಂತ್ರಜ್ಞಾನವನ್ನೂ ಕೂಡ ಬಳಸಿಕೊಳ್ಳುವ ಅಗತ್ಯವಿದೆ. ಋತುಮಾನ ಆಧರಿಸಿ ಹಾಲು ಹೊಡುವ ಜಾನುವಾರುಗಳ ಆರೈಕೆಯೂ ಅತ್ಯಂತ ಮುಖ್ಯ. ಜಾನುವಾರುಗಳಿಗೆ ರೋಗ ಬಂದ ಮೇಲೆ ಆರೈಕೆಗೆ ಮುಂದಾಗುವ ಬದಲು ರೋಗ ಬರದಂತೆ ಕ್ರಮ ಕೈಗೊಳ್ಳುವುದು ಅತಿ ಮುಖ್ಯ. ಸರಕಾರ ಸಂಘ ಸಂಸ್ಥೆಗಳು ನೀಡುವ ಅನುದಾನ ಸೌಲಭ್ಯವನ್ನು ಬಳಸಿಕೊಂಡು ಉತ್ತಮ ಹೈನುಗಾರಿಕೆಗೆ ಮುಂದಾಗಿ. ಹೈನುಗಾರಿಕೆಯಲ್ಲಿ ಜಾನುವಾರುಗಳ ಆಯ್ಕೆ ಕೂಡ ಅತ್ಯಂತ ಮುಖ್ಯ. ಹೈನುಗಾರಿಕೆ ಈಗ ಲಾಭದಾಯಕ ಉದ್ಯಮವಾಗಿ ಬೆಳೆದಿದೆ. ಯುವಕರು ಹೆಚ್ಚು ಪಾಲು ಈ ಉದ್ಯಮದಲ್ಲಿ ಆಸಕ್ತಿ ತೋರಬೇಕು ಎಂದರು.ತರಬೇತಿಯಲ್ಲಿ ಒಕ್ಕೂಟದ ಅಧ್ಯಕ್ಷೆ ಪ್ರತಿಭಾ, ಬಸವರಾಜ ತೀರವಳ್ಳಿ, ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯ ಮಹಾಂತೇಶ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.