ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಹತ್ತಿರ ಹರಿಯುವ ವೇದಾವತಿ ಹಗರಿ ನದಿಯ ಮೇಲ್ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಜೀವಕಳೆ ಬಂದಿದೆ.ರಾಜ್ಯ ಹಾಗೂ ಸೀಮಾಂಧ್ರ ಪ್ರದೇಶದ ನದಿ ಪಾತ್ರದಲ್ಲಿ ಹಲವು ಕಡೆ ಕಳೆದ ಒಂದು ವಾರದಿಂದ ಭರ್ಜರಿ ಮಳೆಯಾಗಿರುವುದರಿಂದ ನದಿ ಉಕ್ಕಿ ಹರಿಯುತ್ತಿದೆ. ಫೆಬ್ರವರಿಯಿಂದ ಮೇ ವರೆಗೂ ನದಿಯ ಒಡಲು ಖಾಲಿಯಾಗಿದ್ದು, ನದಿ ಪಾತ್ರ ಗ್ರಾಮದ ಜನ ಜಾನುವಾರುಗಳಿಗೆ ನೀರಿನ ಅಭಾವ ಹೆಚ್ಚಾಗಿತ್ತು.
ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಇದರಿಂದಾಗಿ ಹಗರಿ ನದಿಯು ಉಕ್ಕಿ ಹರಿಯುತ್ತಿರುವುದರಿಂದ ನದಿ ಪ್ರಾಂತದ ಜನ ಜಾನುವಾರು, ರೈತರಿಗೆ ಸಂತ ಉಂಟು ಮಾಡಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಚುರುಕು ಹೆಚ್ಚಿಸಿಕೊಂಡಿದ್ದಾರೆ.ನದಿಯ ಮೇಲ್ಭಾಗದ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ. ತಗ್ಗು ಪ್ರದೇಶ ಜಮೀನುಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ. ರೈತರು ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ.
ಈ ವೇದವತಿ ಹಗರಿ ನದಿಯು ತಾಲೂಕಿನ ತಾಳೂರು, ಉಳ್ಳೂರು, ಉತ್ತನೂರು, ಮಾಟಸೂಗೂರು, ಕೂರಿಗನೂರು ಕೆ.ಬೆಳಗಲ್, ಮೈಲಾಪುರ, ಬಲಕುಂದಿ, ಮುದೇನೂರು, ಕೆ.ಸೂಗೂರು, ರಾರಾವಿ, ಕುಡುದರಹಾಳ, ಶ್ರೀಧರಗಡ್ಡೆ ಗ್ರಾಮದ ಮೂಲಕ ತುಂಗಭದ್ರಾ ನದಿಗೆ ಸೇರುತ್ತದೆ. ಬಲಕುಂದಿ ಮತ್ತು ಮುದೇನೂರು ಗ್ರಾಮಗಳ ಮಧ್ಯದಲ್ಲಿ ಬ್ರಿಜ್ ಕಂ ಬ್ಯಾರೆಜ್ ನಿರ್ಮಾಣ ಮಾಡಲಾಗಿದ್ದು, ಸದ್ಯ ತುಂಬಿ ಹರಿಯುತ್ತಿದೆ.ವೇದಾವತಿ ಹಗರಿ ನದಿಯು ಸುಮಾರು ಒಂದು ಲಕ್ಷ ಹೆಕ್ಟೇರ್ ಜಮೀನಿಗೆ ಕೃಷಿ ಚಟುವಟಿಕೆಗಳಿಗೆ ಹಾಗೂ ವನ್ಯಜೀವಿಗಳಿಗೆ, ಜನ ಜಾನುವಾರುಗಳಿಗೆ ಆಶ್ರಯವಾಗಿದೆ.
ಎರಡು ಮನೆ ಕುಸಿತ:
ಶನಿವಾರ ಸುರಿದ ಮಳೆಗೆ ತಾಲೂಕಿನ ಶಾನವಾಸಪುರ ಗ್ರಾಮದಲ್ಲಿ ಎರಡು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಆದರೆ ಯಾವುದೇ ಜೀವಹಾನಿಯಾಗಿಲ್ಲ.
ಶಾನವಾಸಪುರದಲ್ಲಿ ದೊಡ್ಡಫಕ್ಕೀರಪ್ಪ, ಹನುಮಂತಮ್ಮ ಎನ್ನುವವರಿಗೆ ಸೇರಿದ ಎರಡು ಮನೆಗಳು ಕುಸಿದಿವೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಭೇಟಿ ನೀಡಿ ಮಾಹಿತಿ ಪಡೆದು ತಾಲೂಕು ಕಚೇರಿಗೆ ವರದಿ ಸಲ್ಲಿಸಿದ್ದಾರೆ.ತಾಲೂಕಿನ ಕರೂರು ಭಾಗದಲ್ಲಿ 82.4 ಎಂಎಂ ಅತಿಹೆಚ್ಚು ಮಳೆಯಾಗಿದೆ. ಸಿರುಗುಪ್ಪ 4.5, ತೆಕ್ಕಲಕೋಟೆ 10.2, ಸಿರಿಗೇರಿ 14.4, ಹಚ್ಚೋಳ್ಳಿ 4.6, ರಾವಿಹಾಳ್4.2, ಕೆ ಬೆಳಗಲ್ಲು 81.2 ಎಂ ಎಂ ಮಳೆಯಾಗಿದೆ ಎಂದು ತಾಲೂಕು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಲೂಕಿನಲ್ಲಿ ಶನಿವಾರ ಸುರಿದ ಮಳೆಯಿಂದ ಎರಡು ಮನೆಗಳು ಬಿದ್ದಿವೆ ಎಂದು ತಹಸಿಲ್ದಾರ್ ಗೌಸಿಯಾಬೇಗಂ ತಿಳಿಸಿದ್ದಾರೆ.