ಸಾರಾಂಶ
ಬಜಾಲ್‌ನ ಪಳ್ಳಕೆರೆ ಎಂಬಲ್ಲಿ ಬೃಹತ್ ತಡೆಗೋಡೆಯೊಂದು ಪಕ್ಕದ ಮನೆಗೆ ಕುಸಿಯುವ ಭೀತಿ ಎದುರಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಉತ್ತಮ ಮಳೆಯಾಗಿದೆ. ದಿನವಿಡಿ ಆಗಾಗ ಮಳೆ ಸುರಿಯುತ್ತಲೇ ಇತ್ತು. ಇನ್ನೆರಡು ದಿನ (ಜು.1,2) ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಹಳದಿ ಅಲರ್ಟ್ ನೀಡಲಾಗಿದೆ.ಭಾನುವಾರ ಮುಂಜಾನೆ ಮಂಗಳೂರು ಸೇರಿದಂತೆ ಹಲವೆಡೆ ಗಾಳಿ ಸಹಿತ ಭಾರೀ ಮಳೆ ಸುರಿದಿತ್ತು. ಬಳಿಕವೂ ಜಿಟಿ ಜಿಟಿ ಮಳೆ ಆಗಾಗ ಸುರಿಯುತ್ತಿತ್ತು. ಮಧ್ಯಾಹ್ನ ವೇಳೆಗೆ ಕೊಂಚ ವಿರಾಮ ನೀಡಿದ್ದು, ಸಂಜೆ ಬಳಿಕ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದೆ.4 ಕುಟುಂಬ ಸ್ಥಳಾಂತರ: ನಗರದ ಪಂಜಿಮೊಗರು ಭಾಗದಲ್ಲಿ ಸಂಭವನೀಯ ಗುಡ್ಡ ಕುಸಿತದ ಅಪಾಯ ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿನ ನಾಲ್ಕು ಮನೆಯವರ ಮನವೊಲಿಸಿ ಸ್ಥಳಾಂತರಿಸಲಾಗಿದ್ದು, ಅವರಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ.ಬಜಾಲ್‌ನ ಪಳ್ಳಕೆರೆ ಎಂಬಲ್ಲಿ ಬೃಹತ್ ತಡೆಗೋಡೆಯೊಂದು ಪಕ್ಕದ ಮನೆಗೆ ಕುಸಿಯುವ ಭೀತಿ ಎದುರಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಸೂಕ್ತ ಕ್ರಮ ಕೈಗೊಂಡಿದ್ದಾರೆ.ದ.ಕ. ಜಿಲ್ಲೆಯಲ್ಲಿ ಈ ಮಳೆಗಾಲದಲ್ಲಿ ಇದುವರೆಗೆ 9 ಸಾವು ಸಂಭವಿಸಿದ್ದರೆ, 10 ಮಂದಿ ಗಾಯಗೊಂಡಿದ್ದಾರೆ. 202 ಮನೆಗಳು ಭಾಗಶಃ, 39 ಮನೆಗಳು ಗಂಭೀರ, 8 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಒಟ್ಟು ಆರು ಜಾನುವಾರುಗಳು ಮೃತಪಟ್ಟಿವೆ. ಭಾನುವಾರ ಒಟ್ಟು 42 ಮಂದಿಯನ್ನು ಕಾಳಜಿ ಕೇಂದ್ರದಲ್ಲಿ ಇರಿಸಲಾಗಿದೆ.ಮಳೆಗೆ ಮನೆಯ ಮಾಡು ಭಾಗಶಃ ಕುಸಿತ
ಮೂಲ್ಕಿ: ಮೂಲ್ಕಿ ತಾಲೂಕಿನಲ್ಲಿ ಶನಿವಾರ ರಾತ್ರಿ ಭಾರಿ ಮಳೆಯಾಗಿದ್ದು ಬಿರುಸಿನ ಮಳೆಗೆ ಮೂಲ್ಕಿ ತಾಲೂಕಿನ ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವತ್ತಾರು ದೇಂದಡ್ಕ ಎಂಬಲ್ಲಿ ಗಿರಿಜಾ ಮುಖಾರ್ತಿ ಎಂಬವರ ಮನೆಯ ಹಂಚಿನ ಮಾಡು ಕುಸಿದು ಮನೆಗೆ ಭಾಗಶಃ ಹಾನಿ ಆಗಿದೆ.