ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಿಣಿ, ಆರಿದ್ರಾ, ಪುನರ್ವಸು, ಹಿಂಗಾರು ಮಳೆಗಳಲ್ಲಿ ಮಗಿ, ಹುಬ್ಬಿ, ಉತ್ತರಿ ಮಳೆಗಳು ಸಂಪೂರ್ಣ ಸುರಿಯಲಿವೆ ಎಂಬುದು ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ವಾಣಿಯಾಗಿದೆ.ಈ ಭಾಗದ ಕೃಷಿಕರ ಮಠವೆಂದು ಖ್ಯಾತಿ ಪಡೆದಿರುವ ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ರಾತ್ರಿ ನಡೆದ ಕಡುಬಿನ ಕಾಳಗ (ಮಳೆ ಬೆಳೆ ಸೂಚನೆ)ದಲ್ಲಿ ಈ ಸೂಚನೆ ದೊರೆತಿದೆ. ಈ ವರ್ಷದ ಮುಂಗಾರಿನಲ್ಲಿ ರೋಹಿಣಿ ಉತ್ತಮ. ಆರಿದ್ರಾ ಸಂಪೂರ್ಣ, ಪುನರ್ವಸು, ಪುಷ್ಯಾ ಸಾಧಾರಣವಾಗಿ ಬೀಳಲಿವೆ. ಹಿಂಗಾರಿನಲ್ಲಿ ಮಗಿ ಉತ್ತಮ, ಉತ್ತರಿ ಸಂಪೂರ್ಣ, ಹುಬ್ಬಿ, ಚಿತ್ತಿ, ಸ್ವಾತಿ ಸಾಧಾರಣ ಸುರಿಯಲಿವೆ ಎಂದು ಶ್ರೀಮಠದ ಸೂಚನೆ ದೊರೆಯಿತು ಎಂದು ಮಠಾಧೀಶ ಗುರುಲಿಂಗಸ್ವಾಮಿಗಳು ನೆರೆದ ಭಕ್ತರಿಗೆ ತಿಳಿಸಿದರು.
ಜಾತ್ರೆಯ ನಿಮಿತ್ತ ನಡೆಯುವ ಕಡುಬಿನ ಕಾಳಗದಲ್ಲಿ (ಮಳೆ ಬೆಳೆ ಸೂಚನೆ) ಮಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸುತ್ತ ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ಜನರು ಮಳೆ ಸೂಚನೆಗಾಗಿ ಕುತೂಹಲದಿಂದ ಕಾಯ್ದು ನಿಂತಿದ್ದರು. ಮಳೆಬೆಳೆ ಕುರಿತಂತೆ ಮಠದ ಸೂಚನೆ ಪಡೆದ ರೈತರು ಪ್ರಸಕ್ತ ವರ್ಷದ ಸಾಧಕ-ಬಾಧಕಗಳ ಬಗ್ಗೆ ತಮ್ಮ ತಮ್ಮಲ್ಲಿಯೇ ವಿಚಾರ ವಿನಿಮಯ ಮಾಡಿಕೊಂಡರು.ಮಳೆ ಸೂಚನೆ (ಕಡುಬಿನ ಕಾಳಗ) ವೈಶಿಷ್ಟ್ಯ:
ಕಡುಬಿನ ಕಾಳಗದ ಮುಂಚೆ ನಡೆದ ಮಳೆರಾಜೇಂದ್ರಸ್ವಾಮಿಗಳ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ಸಾವಿರಾರು ಮಹಿಳೆಯರು ಆರತಿ ಹಾಗೂ ಪಂಚಬಿಂದಿಗೆಯೊಂದಿಗೆ ಪಾಲ್ಗೊಂಡಿದ್ದರು. ಗಂಗೆಯ ಪೂಜೆಗಾಗಿ ನಿರ್ಮಿಸಿರುವ ಹೊಂಡದವರೆಗೆ ನಡೆದ ಮೆರವಣಿಗೆಯಲ್ಲಿ ಸಾಗಿದ ಗ್ರಾಮಸ್ಥರು ಗಂಗೆಗೆ ಪೂಜೆ ಸಲ್ಲಿಸಿದ ಬಳಿಕ ಪಂಚ ಬಿಂದಿಗೆಗಳಲ್ಲಿ ಗಂಗೆ ತುಂಬಿ, ಮಳೆಸ್ವಾಮಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿ, ಮುತ್ತೈದೆಯರಿಗೆ ಉಡಿ ತುಂಬಿದ ನಂತರ ಪಂಚ ಬಿಂದಿಗೆಗಳಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ, ಬಳಿಕ ತುಂಬಲ್ಪಟ್ಟ ಪ್ರತಿ ಬಿಂದಿಯ ಮೇಲೆ ಎರಡೆರಡು ಮಳೆಗಳು ಹೆಸರನ್ನು ನಮೂದಿಸಲಾಗುತ್ತದೆ. ಪಂಚ ಬಿಂದಿಗೆ ಹೊತ್ತು ನಂತರ ಗಂಗಾ ಹೊಂಡದಿಂದ ಪುನಃ ಮೆರವಣಿಗೆಯಲ್ಲಿ ರಥೋತ್ಸವ ಇರುವ ಸ್ಥಳಕ್ಕೆ ಬರುತ್ತಾರೆ. ರಥೋತ್ಸವ ಪ್ರದಕ್ಷಿಣೆ ಹಾಕಿ ಪಂಚಬಿಂದಿಗೆ ಪೂಜೆ ಸಲ್ಲಿಸಿ ತರುವಾಯ ಮಳೆಬೆಳೆ ಸೂಚನೆ ನೀಡಲಾಗುತ್ತದೆ.
ಮಳೆಗಳ ಹೆಸರನ್ನು ಹೊಂದಿರುವ ಬಿಂದಿಗೆಗಳ ಬಸಿಯುವಿಕೆ (ಸೋರಿಕೆ) ಆಧಾರದ ಮೇಲೆ ಮಳೆ, ಬೆಳೆ ಸೂಚನೆ ಹೊರಬೀಳುತ್ತದೆ. ಸೋರಿಕೆ ಪ್ರಮಾಣದ ಮೇಲೆಯೇ ಯಾವ ಮಳೆ ಹೆಚ್ಚು ಸುರಿಯುತ್ತದೆ. ಯಾವುದು ಕಡಿಮೆಯಾಗುತ್ತದೆ ಎಂಬುವುದನ್ನು ಹೇಳಲಾಗುತ್ತದೆ. ವಿಶಿಷ್ಟ ಪರಂಪರೆ ಹೊಂದಿರುವುದರಿಂದ ಮಳೆರಾಜೇಂದ್ರ ಮಠದ ಕಡುಬಿನ ಕಾಳಗಕ್ಕೆ ರೈತ ಸಮುದಾಯ ಕುತೂಹಲದಿಂದ ಎದುರು ನೋಡುತ್ತದೆ.
ಗುರುವಾರ ರಾತ್ರಿ ಸಂಭ್ರಮದಿಂದ ನಡೆದ ಕಡುಬಿನ ಕಾಳಗದಲ್ಲಿ ಮಠಾಧೀಶರಾದ ಗುರುಲಿಂಗಸ್ವಾಮಿಗಳು ಹಾಗೂ ನವೀನಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ಹರಕೆಯ ಈಡೇರಿಕೆಗೆ ಸಂಕಲ್ಪ ಮಾಡಿದ ಮಾತಾ ಭಗಿನಿಯರಿಗೆ ಉಡಿ ತುಂಬುವ ಕಾರ್ಯ ಜರುಗಿತು. ಜಾತ್ರೆಯ ಬಾಬತ್ತುದಾರರಿಗೆ ಶ್ರೀಗಳು ಶಾಲು ನೀಡಿ ಗೌರವಿಸಿ ಸನ್ಮಾನಿಸಿದರು. ಗ್ರಾಮದ ಹಿರಿಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.