ಕನ್ನಡಪ್ರಭ ವಾರ್ತೆ ವಿಜಯಪುರ

ಆಲಮಟ್ಟಿ ಜಲಾಶಯ ನಿರ್ಮಾಣದಲ್ಲಿ ನನ್ನ ಕೊಡುಗೆಯೂ ಇದೆ. ಕೃಷ್ಣಾ ನದಿ ನೀರನ್ನು ಕೊಡುವಲ್ಲಿ ಅಂದಿನ ಸರ್ಕಾರ ವಿಫಲವಾಗಿದ್ದವು. ನಾನು ಅಧಿಕಾರ ವಹಿಸಿಕೊಂಡ ಬಳಿಕ ಆಲಮಟ್ಟಿ ಆಣೆಕಟ್ಟೆಗೆ ಹಣಕಾಸು ಹೊಂದಾಣಿಕೆ ಮಾಡಿದೆ ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ನಗರದ ಸಿಂದಗಿ ಬೈಪಾಸ್ ರಸ್ತೆ ಬಳಿ ಶುಕ್ರವಾರ ನಡೆದ ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬ ಹಾಗೂ ಕಿತ್ತೂರು ಕರ್ನಾಟಕ ಬೃಹತ್ ಜನತಾ ಸಮಾವೇಶದಲ್ಲಿ ಅವರು ಮಾತನಾಡಿದರು. ಇಲ್ಲಿನ ಜನರಿಗೆ ನೀರು ಸಿಗಬೇಕು ಎನ್ನುವ ಕಾರಣಕ್ಕಾಗಿ ಕೆಲಸ ಮಾಡಿದೆ. ನಾನು ಇಲ್ಲಿ ಬಂದಿರೋದು ನನ್ನ ಮುಖ್ಯಮಂತ್ರಿ ಮಾಡಿ ಎನ್ನಲು ಅಲ್ಲ. ಮೊದಲು ಕೃಷ್ಣಾನದಿ ನೀರನ್ನು 50 ಸಾವಿರ ಎಕರೆಗೆ ಕೊಟ್ಟಿದ್ದರು. ₹200 ಕೋಟಿ ಸಾಲ ತಂದು ಸರ್ಕಾರದ ಅಧಿಕಾರಿಗಳ ಸಂಬಳ ಕೊಡುವ ಟೈಂನಲ್ಲಿ ನಾನು ಸಿಎಂ ಆದೆ ಎಂದರು.

ವಿಜಯಪುರದಲ್ಲಿ ಚುನಾವಣೆಯಲ್ಲಿ ಪಕ್ಷದ ಮುಖಂಡರು ಸೋತಿದ್ದರೂ ಎದೆಗುಂದಿಲ್ಲ. ನಾನು ಮತ್ತೆ ಸಿಎಂ ಆಗಲ್ಲ, ಪಿಎಂ ಸಹ ಆಗಲ್ಲ. ಇಲ್ಲಿನ ನಮ್ಮ ಹಿರಿಯರು ಭೀಕರ ಬರಗಾಲದಿಂದ ಗೋವಾ, ಮಹಾರಾಷ್ಟ್ರ ಗುಳೆ ಹೋಗುತ್ತಿದ್ದರು. 1973 ರಿಂದ ಈ ಭಾಗದ ಮೂಲೆ ಮೂಲೆಯಲ್ಲಿ ನಾನು ಸುತ್ತಿದ್ದೇನೆ. ನನಗೆ ಅಧಿಕಾರ ಕೊಡಿ ಎಂದು ಕೇಳಲು ಬಂದಿಲ್ಲ ಎಂದರು. ಇಂಡಿಯ ಪರಾಜಿತ ಅಭ್ಯರ್ಥಿ ಬಿ.ಡಿ.ಪಾಟೀಲನನ್ನು ಕರೆದು ನೀನು ಈ ಬಾರಿ ಗೆಲ್ತಿಯಾ ಎಂದರು. ಮಾಜಿ ಶಾಸಕ ದೇವಾನಂದ ಚವ್ಹಾಣ, ಅಪ್ಪುಗೌಡ ಮನಗೂಳಿ, ಬಾಗಲಕೋಟೆ ಮುಖಂಡರನ್ನ ಕರೆದು ಗೆಲ್ತೀರಿ ಎಂದು ಆಶೀರ್ವದಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳು ನಡೆಯಲು ದೇವೇಗೌಡರು ಕಾರಣ. ನಿಮ್ಮ ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಿಸಿದ ಕಾರಣ ಸಕ್ಕರೆ ಕಾರ್ಖಾನೆಗಳು ಶುರುವಾದವು. ನೀವು ಕೊಟ್ಟ ಅಧಿಕಾರದಿಂದ ದೇವೇಗೌಡರು ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ಬೆಂಬಲ ಇರಲಿ. ರಾಜ್ಯದಲ್ಲಿ ರಾಮರಾಜ್ಯ ಕಟ್ಟಲು ಸಹಕಾರ ನೀಡಿ. ನಿಂಬೆ, ದ್ರಾಕ್ಷಿ ಬೆಳೆಗಾರರಿಗೆ ಸರ್ಕಾರ ಸ್ಪಂದಿಸಲಿದೆ ಎಂದರು.


ಯಾವುದೇ ಸರ್ಕಾರಗಳು 50 ವರ್ಷಗಳಲ್ಲಿ ಈ ಭಾಗದ ನೀರಾವರಿ ಯೋಜನೆಗಳಿಗೆ ಹಣ ನೀಡಲಿಲ್ಲ. ದೇವೇಗೌಡರು ₹20 ಸಾವಿರ ಕೋಟಿ ಅನುದಾನವನ್ನು ಯೋಜನೆಗೆ ನೀಡಿದರು. ಇದನ್ನು ಉತ್ತರ ಕರ್ನಾಟಕ ಜನ ಮರೆಯುವ ಹಾಗಿಲ್ಲ ಎಂದರು.

ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ಮಾತನಾಡಿ, ದೇವೇಗೌಡರು ಆಲಮಟ್ಟಿ ನೀರಾವರಿಗೆ ಕೊಡುಗೆ ಕೊಡುವ ಮೂಲಕ 15 ಲಕ್ಷ ಎಕರೆ ನೀರಾವರಿ ಆಗಲು ಕಾರಣರಾಗಿದ್ದಾರೆ. 2013ರಲ್ಲಿ ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಆಡಳಿತ ಮಾಡಿದರು. ಪ್ರತಿವರ್ಷ ಕೃಷ್ಣೆಗೆ ₹10 ಸಾವಿರ ಕೋಟಿಯಂತೆ ಐದು ವರ್ಷಕ್ಕೆ ₹50 ಸಾವಿರ ಕೋಟಿ ಹಣವನ್ನು ಕೃಷ್ಣೆಗೆ ಕೊಡುತ್ತೇವೆ ಎಂದು ಸುಳ್ಳು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅವರು ಅಧಿಕಾರಕ್ಕೆ ಬರುವಾಗ ನೀಡಿದ್ದ ಭರವಸೆಗಳಲ್ಲಿ ಹತ್ತು ಭರವಸೆಗಳನ್ನೂ ಪೂರೈಸಲಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಪಕ್ಷದಿಂದ ಹೋರಾಟ

ಇದಕ್ಕೂ ಮೊದಲು ವೇದಿಕೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬರುವ ಸ್ಥಳೀಯ ಚುನಾವಣೆ, ವಿಧಾನಸಭೆ ಎಲೆಕ್ಷನ್ ಹಿನ್ನೆಲೆ ಜೆಡಿಎಸ್ ಪಕ್ಷದ ಬಲಬರ್ಧನೆಗೆ ಒತ್ತು ಕೊಡಲಿದ್ದೇವೆ, ಕಾರ್ಯಕರ್ತರು ಪಕ್ಷದೊಂದಿಗಿದ್ದಾರೆ. ಜನರಿಗೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ನಿಂದ ಹೋರಾಟ ಹಮ್ಮಿಕೊಳ್ಳಲಾಗುವುದು. ಕಿತ್ತೂರು ಕರ್ನಾಟಕ ಭಾಗದಲ್ಲಿ ಜೆಡಿಎಸ್ ಬಲವರ್ಧನೆ ಮಾಡಲಾಗುತ್ತಿದೆ. ಕಾರ್ಯಕರ್ತರನ್ನು ಒಟ್ಟುಗೂಡಿಸಿ ಪಕ್ಷವನ್ನು ಕಟ್ಟಲಾಗುವುದು. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ಬೆಂಬಲ‌ ಇದೆ, ನಮ್ಮದೆ ಕಾರ್ಯಕರ್ತರ ಪಡೆ ಇದೆ ಎಂದರು.

ದೇವೇಗೌಡರಿಗೆ ವಿಜಯಪುರ ಜಿಲ್ಲೆಯಲ್ಲಿ ಒಲವಿದೆ. ವಿಜಯಪುರ ಜಿಲ್ಲೆಯಲ್ಲಿ ದೇವೇಗೌಡರು ಮಾಡಿದ ನೀರಾವರಿ ಕಾರ್ಯಗಳನ್ನು ಜನರು ಮರೆತಿಲ್ಲ. ಯುಕೆಪಿ ಯೋಜನೆ ಜಾರಿಯಲ್ಲಿ ದೇವೇಗೌಡರ ಮಹತ್ವದ ಪಾತ್ರವಿದೆ. ಮುಂದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ಪಕ್ಷದ ಬಲವರ್ಧನೆ ಮಾಡುತ್ತೇವೆ. ನಾಯಕರು ಪಕ್ಷ ಬಿಟ್ಟಿರಬಹುದು ಕಾರ್ಯಕರ್ತರು ಪಕ್ಷವನ್ನು ಬಿಡಲ್ಲ, ಜನರ ಪರವಾಗಿ ಪಕ್ಷ ಬೀದಿಗಿಳಿಯಲಿದೆ ಎಂದರು.