ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಜೋಡಿ ಕೆರೆಗಳ ಅಭಿವೃದ್ಧಿ ಕಾಮಗಾರಿ ವೇಳೆ ಚನ್ನಮ್ಮ ವೃತ್ತದಲ್ಲಿ ಪುತ್ತಳಿ ನಿರ್ಮಾಣ ಸ್ಥಳದಲ್ಲಿ ಅಳವಡಿಸಿದ್ದ ಚನ್ನಮ್ಮ ಭಾವಚಿತ್ರದ ಬ್ಯಾನರ್ ತೆರವುಗೊಳಿಸಿದ ವಿಚಾರಕ್ಕೆ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿಯನ್ನು ಪುರಸಭೆ ಸದಸ್ಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.ಅಥಣಿ ಪುರಸಭೆಯ ಸಭಾಂಗಣದಲ್ಲಿ ಗುರುವಾರ ನಡೆದ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಘಟನೆ ನಡೆದಿದ್ದು, ಪಟ್ಟಣದ ಐತಿಹಾಸಿಕ ಜೋಡಿ ಕೆರೆಗಳ ಮಧ್ಯ ಭಾಗದ ಮತ್ತು ರಾಜ್ಯ ಹೆದ್ದಾರಿ ಪಕ್ಕದ ಸ್ಥಳದಲ್ಲಿ ಚನ್ನಮ್ಮ ಪುತ್ತಳಿ ನಿರ್ಮಾಣಕ್ಕೆ 2 ಗುಂಟೆ ಸ್ಥಳ ಕಾಯ್ದಿರಿಸಲಾಗಿದೆ. ಈಗ ಈ ರಸ್ತೆಗೆ ಹೆಸರಿಡಲು ಮಾತ್ರ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳುವ ಮೂಲಕ ದಾರಿ ತಪ್ಪಿಸುತ್ತಿದ್ದೀರಿ. ಉದ್ದೇಶಪೂರ್ವಕವಾಗಿಯೇ ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುತ್ತಿಲ್ಲ. ಸರ್ವಾಧಿಕಾರಿಯಂತೆ ನಿರ್ಣಯ ಕೈಕೊಳ್ಳುವುದಾದರೆ ಆಡಳಿತ ಸದಸ್ಯರು ನಾವೇನು ಮಾಡಬೇಕು ಎಂದು ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರು.
ಪುರಸಭೆ ಸದಸ್ಯ ಪ್ರಮೋದ ಬಿಳ್ಳೂರು ಮಾತನಾಡಿ, 2008ರಲ್ಲಿ ರಾಣಿಚನ್ನಮ್ಮ ವೃತ್ತ ನಿರ್ಮಿಸುವ ಬಗ್ಗೆ ಸದಸ್ಯರು ಠರಾವ್ ಪಾಸ್ ಮಾಡಿದ್ದಾರೆ. ಆದರೂ ನಮ್ಮ ದಾಖಲೆಗಳಲ್ಲಿಲ್ಲ ಎಂದು ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ಸಾಮಾನ್ಯಸಭೆಯಲ್ಲಿ ಮತ್ತೊಮ್ಮೆ ಅದೇ ಸ್ಥಳದಲ್ಲಿ ರಾಣಿ ಚನ್ನಮ್ಮಳ ಮೂರ್ತಿ ಪ್ರತಿಷ್ಠಾಪನೆಗೆ ಠರಾವ್ ಪಾಸ್ ಮಾಡಬೇಕು. ಬರುವ ಅಕ್ಟೋಬರ್ ತಿಂಗಳಲ್ಲಿ ರಾಣಿ ಚನ್ನಮ್ಮ ಜಯಂತಿಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ಅವರ ಮಾತಿಗೆ ಪುರಸಭೆ ಸದಸ್ಯರಾದ ರಾಮನಗೌಡ ಪಾಟೀಲ, ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ಸೈಯ್ಯದಮೀನ್ ಗದ್ಯಾಳ, ಮೃಣಾಲಿನಿ ದೇಶಪಾಂಡೆ, ರಾವಸಾಹೇಬ ಐಹೊಳೆ ಬೆಂಬಲ ಸೂಚಿಸಿದರು. ಅದೇ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಬೇಕು ಎಂದು ಅಗ್ರಹಿಸಿದರು.ಮುಖ್ಯಾಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಠರಾವ್ನ್ಯಾಯಾಲಯದಲ್ಲಿ ಪ್ರಕರಣವಿರುವ ವಸತಿ ಮತ್ತು ವಾಣಿಜ್ಯ ಉದ್ದೇಶದ ನಿವೇಶನಗಳ ಬಿಡುಗಡೆಗೆ ಮುಂದಾಗಿರುವ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ತಡಬಡಿಸಿದ ಪ್ರಸಂಗ ನಡೆಯಿತು. ಈ ವಿಷಯದಲ್ಲಿ ಮುಖ್ಯಾಧಿಕಾರಿ ತಪ್ಪು ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಸಾಮಾನ್ಯ ಸಭೆಯ ಗಮನಕ್ಕೆ ತರದೇ ವಾಣಿಜ್ಯ ಮತ್ತು ವಸತಿ ನಿವೇಶನಗಳನ್ನು ಬಿಡುಗಡೆಗೆ ಮಾಡಲು ಮುಂದಾದ ಮುಖ್ಯಾಧಿಕಾರಿ ಮೇಲೆ ಕ್ರಮ ಜರುಗಿಸಬೇಕು ಎಂದು ಠರಾವ್ ಪಾಸ್ ಮಾಡಿ ಶಾಸಕ ಲಕ್ಷ್ಮಣ ಸವದಿ ಸೇರಿ ಪೌರಾಡಳಿತ ಸಚಿವರಿಗೆ ಠರಾವ್ ಪ್ರತಿಯನ್ನು ಸ್ಪೀಡ್ ಪೋಸ್ಟ್ ಮೂಲಕ ರವಾನಿಸಿದರು.ಈಗಾಗಲೇ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಿರುವ ವಿಷಯ ಗಮನಕ್ಕಿದ್ದರೂ ಕಾನೂನು ಬಾಹಿರವಾಗಿ ಸಭೆಯಲ್ಲಿ ಒಪ್ಪಿಗೆ ಪಡೆದುಕೊಳ್ಳಲು ಈ ವಿಷಯವನ್ನು ಇಟ್ಟುಕೊಂಡಿದ್ದೀರಿ, ಯಾಕೆ ಸುಳ್ಳು ಹೇಳುತ್ತೀರಿ ಎಂದು ವಿಲೀನರಾಜ ಯಳಮಲ್ಲೇ ತರಾಟೆಗೆ ತೆಗೆದುಕೊಂಡರು. ಅವರ ಮಾತಿಗೆ ಧ್ವನಿಗೂಡಿಸಿದ ಹಲವರು ಮುಖ್ಯಾಧಿಕಾರಿ ವಿರುದ್ಧ ಕಾನೂನು ಕ್ರಮಕ್ಕೆ ಠರಾವ್ ಪಾಸ್ ಮಾಡಲು ಮುಂದಾದರು. ನಂತರ ಮುಖ್ಯಾಧಿಕಾರಿ ವಿರುದ್ಧದ ಠರಾವ್ ಪ್ರತಿ ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ಕಳಿಸಿದರು. ಈ ವೇಳೆ ಮುಖ್ಯಾಧಿಕಾರಿ ತಮ್ಮ ಹೇಳಿಕೆ ನೀಡಲು ಮುಂದಾದಾಗ ಸದಸ್ಯರು ಅಡ್ಡಿಪಡಿಸಿ ನಿಮ್ಮ ಹೇಳಿಕೆಯನ್ನು ಮೇಲಾಧಿಕಾರಿಗಳಿಗೆ ನೀಡಿ, ಸಭೆಯಲ್ಲಿ ಕೈಗೊಳ್ಳುವ ನಿರ್ಣಯವನ್ನು ನಾವು ಠರಾವ್ ಪಾಸ್ ಮಾಡುತ್ತೇವೆ ಎಂದರು.ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಮುಂತಾದವರು ಉಪಸ್ಥಿತರಿದ್ದರು.