ಸಾರಾಂಶ
ಹಾವೇರಿ ಜಿಲ್ಲಾದ್ಯಂತ ಶುಕ್ರವಾರ ಮಧ್ಯಾಹ್ನದಿಂದ ಸಂಜೆವರೆಗೂ ಉತ್ತಮ ಮಳೆ ಸುರಿದಿದ್ದು, ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಹರ್ಷ ಮೂಡಿಸಿತು.
ಹಾವೇರಿ: ಜಿಲ್ಲಾದ್ಯಂತ ಶುಕ್ರವಾರ ಮಧ್ಯಾಹ್ನದಿಂದ ಸಂಜೆವರೆಗೂ ಉತ್ತಮ ಮಳೆ ಸುರಿದಿದ್ದು, ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಹರ್ಷ ಮೂಡಿಸಿತು.
ಎರಡು ದಿನಗಳಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ಮಳೆಯಾಗುತ್ತಿದ್ದು, ಶುಕ್ರವಾರ ಜಿಲ್ಲಾದ್ಯಂತ ವಿಸ್ತರಿಸಿದೆ. ಮಧ್ಯಾಹ್ನವೇ ಹಾವೇರಿ ನಗರ, ರಾಣಿಬೆನ್ನೂರು, ಸವಣೂರು ತಾಲೂಕುಗಳಲ್ಲಿ ಎರಡು ಗಂಟೆಗೂ ಹೆಚ್ಚುಕಾಲ ಮಳೆ ಸುರಿಯಿತು. ಹಾವೇರಿ ನಗರದಲ್ಲಿ ಮಳೆ ನೀರು ರಸ್ತೆ ಮೇಲೆ ನಿಂತು ರಸ್ತೆಗಳು ಜಲಾವೃತಗೊಂಡವು. ನಗರದ ಅಲ್ಲಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆಯೇ ಹರಿದಿದೆ. ಇನ್ನು ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ನಗರದ ಕಾಗಿನೆಲೆ ಕ್ರಾಸ್ ಸಮೀಪ, ಹೊಸ ಎಸ್‌ಪಿ ಕಚೇರಿ ಮುಂಭಾಗದ ಪಿ.ಬಿ.ರೋಡ್ ಹಾಗೂ ಬಸ್ ನಿಲ್ದಾಣ ಸಮೀಪದದ ಹಾನಗಲ್ಲ ರೋಡ್‌ನ ಮೇಲೆ ಮಳೆ ನೀರು ಹಳ್ಳದಂತೆ ಹರಿಯತೊಡಗಿತು. ಜಿಲ್ಲೆಯ ರಾಣಿಬೆನ್ನೂರ, ಹಾನಗಲ್ಲ, ಶಿಗ್ಗಾಂವಿ, ಸವಣೂರು, ಹಿರೇಕೆರೂರು, ಬ್ಯಾಡಗಿ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ಎರಡು ವಾರದ ಹಿಂದೆ ಸುರಿದ ಮಳೆಗೆ ಜಿಲ್ಲೆಯಲ್ಲಿ ಶೇಂಗಾ, ಸೋಯಾಬೀನ್, ಮೆಕ್ಕೆಜೋಳ ಬಿತ್ತನೆ ಮಾಡಿಕೊಂಡಿರುವ ರೈತರು ಮಳೆಗಾಗಿ ಎದುರು ನೋಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಮಳೆ ಮಾಯವಾದ್ದರಿಂದ ರೈತರು ಆತಂಕಗೊಂಡಿದ್ದರು. ಆದರೆ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾದ್ದು, ಬಿತ್ತನೆ ಮಾಡಿದ್ದ ರೈತರ ಆತಂಕ ದೂರವಾಗಿದೆ. ಮಳೆಗಾಗಿ ಕಾಯುತ್ತಿದ್ದ ಜಿಲ್ಲೆಯ ಕೆಲವು ರೈತರು ಉತ್ತಮ ಮಳೆಯಾಗಿದ್ದರಿಂದ ಬಿತ್ತನೆಗೆ ಸಿದ್ಧತೆ ಸಜ್ಜಾಗುತ್ತಿದ್ದಾರೆ.