ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: ಜಿಲ್ಲಾದ್ಯಂತ ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ನಿರೀಕ್ಷೆಗಿಂತಲೂ ಉತ್ತಮ ಮಳೆಯಾಗುತ್ತಿದೆ. ರೈತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ.ರೈತರು ಭೂಮಿಯನ್ನು ಉಳುಮೆ ಮಾಡಿ, ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಕೃಷಿ ಇಲಾಖೆಯೂ ಅಗತ್ಯತೆಯನ್ನು ಪೂರೈಕೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕಳೆದ ವಾರದಿಂದ ಇಲ್ಲಿಯವರೆಗೂ ಜಿಲ್ಲಾದ್ಯಂತ ಸರಾಸರಿ 9 ಮಿಲಿಮೀಟರ್ ಮಳೆಯಾಗಬೇಕಾಗಿತ್ತು. ಆದರೆ, 24 ಮಿಲಿಮೀಟರ್ ಮಳೆಯಾಗಿದೆ. ನಿರೀಕ್ಷೆಗಿಂತಲೂ ಅಧಿಕವಾಗಿಯೇ ಮಳೆಯಾಗಿದೆ. ಸರಾಸರಿ ಮಳೆಯ ಪ್ರಮಾಣ ನಿರೀಕ್ಷೆ ಮೀರಿ ಇದ್ದರೂ ಮಳೆ ಎಲ್ಲ ಭಾಗಗಳಲ್ಲಿ ಆಗಿಲ್ಲ. ಕೆಲವೇ ಭಾಗಗಳಲ್ಲಿ ಮಳೆ ಸುರಿದಿದೆ.ಜಿಲ್ಲಾದ್ಯಂತ ಗುರುವಾರ ತಡರಾತ್ರಿ ಮತ್ತು ಶುಕ್ರವಾರ ಬೆಳಗಿನ ಜಾವ ಸೇರಿ 24 ಗಂಟೆಗಳಲ್ಲಿ ಸರಾಸರಿ 21 ಮಿಲಿಮೀಟರ್ ಮಳೆಯಾಗಬೇಕಾಗಿದ್ದರೂ ಆಗಿರುವುದು 16 ಮಿಲಿಮೀಟರ್ ಮಳೆ ಮಾತ್ರ. ಹೀಗಾಗಿ, ಕಳೆದ 24 ಗಂಟೆಯಲ್ಲಿ ಶೇ. 23ರಷ್ಟು ಮಳೆ ಕೊರತೆಯಾಗಿದೆ. ಅಳವಂಡಿ ಭಾಗದಲ್ಲಿ 40 ಮಿಮೀ, ಹನುಮಸಾಗರ, ಯಲಬುರ್ಗಾದಲ್ಲಿ ತಲಾ 25 ಮಿಮೀ, ಕುಕನೂರು ವ್ಯಾಪ್ತಿಯಲ್ಲಿ 31 ಮಿಮೀ ಮಳೆ ಕಳೆದ 24 ಗಂಟೆಗಳಲ್ಲಿ ಆಗಿದೆ. ಕನಕಗಿರಿ ಹಾಗೂ ಕೆಲವೊಂದು ಭಾಗದಲ್ಲಿ ಕೇವಲ 6 ಮಿಮೀ ಮಳೆಯಾಗಿದೆ.
3,08,000 ಹೆಕ್ಟೇರ್ ಬಿತ್ತನೆ ಗುರಿ:ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ 3,08,000 ಹೆಕ್ಟೇರ್ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಇದುವರೆಗೂ ಎಲ್ಲಿಯೂ ಬಿತ್ತನೆಯಾಗಿಲ್ಲ. ಮೇ ಅಂತ್ಯಕ್ಕೆ ಅಥವಾ ಜೂನ್ ಮೊದಲ ವಾರದಲ್ಲಿ ಬಿತ್ತನೆ ಪ್ರಾರಂಭವಾಗಲಿದೆ. ರೈತರು ಈಗ ಮಳೆಯಿಂದಾಗಿರುವ ಹಸಿಯನ್ನು ಭೂಮಿಯನ್ನು ಹದ ಮಾಡಲು ಉಳುಮೆ ಮಾಡಿಕೊಳ್ಳುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ 61 ಸಾವಿರ ಹೆಕ್ಟೇರ್ ಬತ್ತ ಬಿತ್ತನೆ ಮಾಡಲಾಗುತ್ತದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಜುಲೈ ತಿಂಗಳಲ್ಲಿ ಈ ಬಿತ್ತನೆ ಕಾರ್ಯ ಆಗುತ್ತದೆ.2,010 ಹೆಕ್ಟೇರ್ ಜೋಳ, 99,957 ಹೆಕ್ಟೇರ್ ಮೆಕ್ಕೆಜೋಳ, 64,347 ಹೆಕ್ಟೇರ್ ಸಜ್ಜೆ, 23,000 ಹೆಕ್ಟೇರ್ ದ್ವಿದಳ ಧಾನ್ಯ, 18 ಸಾವಿರ ಹೆಕ್ಟೇರ್ ತೊಗರಿ, 15 ಸಾವಿರ ಹೆಕ್ಟೇರ್ ಹೆಸರು, 24 ಸಾವಿರ ಹೆಕ್ಟೇರ್ ಎಣ್ಣೆಕಾಳು ಬಿತ್ತನೆ ಸೇರಿದಂತೆ ವಿವಿಧ ಬೆಳೆಗಳನ್ನು ಒಳಗೊಂಡು 3,08,000 ಹೆಕ್ಟೇರ್ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ.
ರಸಗೊಬ್ಬರ ದಾಸ್ತಾನು: ಜಿಲ್ಲಾದ್ಯಂತ ಪ್ರಸಕ್ತ ಮುಂಗಾರು ಹಂಗಾಮಿಗೆ ಬೇಕಾಗುವ ರಸಗೊಬ್ಬರವನ್ನು ಸಹ ಹಂತ ಹಂತವಾಗಿ ದಾಸ್ತಾನು ಮಾಡಲಾಗುತ್ತದೆ. ಸದ್ಯ ಮೇ 16ಕ್ಕೆ 54,236 ಟನ್ ರಸಗೊಬ್ಬರ ದಾಸ್ತಾನು ಇದೆ. ಕಳೆದ ವರ್ಷದ ಶಿಲ್ಕು ಸೇರಿದಂತೆ ಈ ವರ್ಷ ಇದುವರೆಗೂ ಬಂದಿರುವ ರಸಗೊಬ್ಬರದ ಲೆಕ್ಕಾಚಾರ ಇದು. ಮೇ ತಿಂಗಳಲ್ಲಿ 16,149 ಟನ್ ಬೇಡಿಕೆ ಇದ್ದು, ಅದಕ್ಕಿಂತ ಅಧಿಕವೇ ರಸಗೊಬ್ಬರ ಸಂಗ್ರಹ ಮಾಡಿಕೊಳ್ಳಲಾಗಿದೆ.ಬಿತ್ತನೆ ಬೀಜ ಬೇಡಿಕೆ: ಜಿಲ್ಲಾದ್ಯಂತ ಪ್ರಸಕ್ತ ವರ್ಷ ಮುಂಗಾರು ಹಂಗಾಮಿಗೆ ಬೇಕಾಗಬಹುದಾದ ಬೀಜದ ಲೆಕ್ಕಾಚಾರವನ್ನು ಹಾಕಿಕೊಂಡು, ಸಂಗ್ರಹಿಸಿಕೊಟ್ಟುಕೊಳ್ಳುವ ಗುರಿಯನ್ನು ಸಹ ಹಾಕಿಕೊಳ್ಳಲಾಗಿದೆ. ಜಿಲ್ಲಾದ್ಯಂತ 41,671 ಕ್ವಿಂಟಲ್ ಬೇಡಿಕೆ ನಿರೀಕ್ಷೆ ಮಾಡಲಾಗಿದೆ. ಈಗ ಸದ್ಯ ರಾಜ್ಯ ಬೀಜ ನಿಗಮ ಮತ್ತು ರಾಷ್ಟ್ರೀಯ ಬೀಜ ನಿಗಮದಲ್ಲಿ ಸುಮಾರು 8,625 ಕ್ವಿಂಟಲ್ ಬೀಜ ಸಂಗ್ರಹವಿದೆ.ಮುಂಗಾರು ಹಂಗಾಮಿನ ಸಿದ್ಧತೆ ಜೋರಾಗಿ ನಡೆದಿದೆ. ಮಳೆಯೂ ಸಕಾಲಕ್ಕೆ ಬರುತ್ತಿದೆ. ಹೀಗಾಗಿ, ಅಗತ್ಯ ಬೀಜ ಮತ್ತು ರಸಗೊಬ್ಬರ ದಾಸ್ತಾನು ಸಹ ಮಾಡಿಕೊಳ್ಳಲಾಗುತ್ತದೆ ಎಂದು ಕೊಪ್ಪಳ ಕೃಷಿ ಇಲಾಖೆ ಜೆಡಿ ರುದ್ರೇಶಪ್ಪ ಹೇಳುತ್ತಾರೆ. ಸುರಿದ ಮಳೆ, ತುಂಬಿಹರಿದ ಹಳ್ಳಕೊಳ್ಳಗಳು
ಕೊಪ್ಪಳ ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗಿದ್ದು, ಕಳೆದ ರಾತ್ರಿಯೂ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಆದರೆ, ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಸುತ್ತಮುತ್ತ ಭಾರಿ ಮಳೆ ಸುರಿದಿದ್ದರಿಂದ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಲಕ್ಷ್ಮೀಕ್ಯಾಂಪ್ ಮತ್ತು ಗುಂಡೂರು ಗ್ರಾಮದ ಹಳ್ಳ ತುಂಬಿ ಹರಿಯಲಾರಂಭಿಸಿತ್ತು. ಇನ್ನೇನು ಬ್ರಿಡ್ಜ್ ಮೇಲೆ ಹರಿದಿದ್ದರೆ ಸಂಪರ್ಕವೇ ಕಡಿತವಾಗುತ್ತಿತ್ತು. ಹಳ್ಳ ತುಂಬಿ ಹರಿಯುವುದನ್ನು ಕಂಡು ಜನರು ಸಂತೋಷಪಟ್ಟರು.