ಸಾರಾಂಶ
ಗುಡೇಕೋಟೆ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಹತ್ತಾರು ವೀಳ್ಯದೆಲೆ ತೋಟಗಳು ಧರೆಗುರುಳಿದ್ದು ರೈತರಿಗೆ ಅಪಾರ ಹಾನಿಯಾಗಿದೆ.
ಕನ್ನಡಪ್ರಭ ವಾರ್ತೆ ಕೂಡ್ಲಿಗಿ
ತಾಲೂಕಿನಾದ್ಯಾಂತ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಬಿರುಗಾಳಿ ಸಹಿತ ಮಳೆಗೆ ರೇಷ್ಮೆ ಮನೆ, ವೀಳ್ಯದೆಲೆ ತೋಟಕ್ಕೆ ಹಾನಿಯಾಗಿದ್ದು, ಗುಡೇಕೋಟೆ ಹೋಬಳಿಯ ಎಕ್ಕಗೊಂದಿ, ಹುರುಳಿಹಾಳ್ ಗ್ರಾಮದಲ್ಲಿ ವೀಳ್ಯದೆಲೆ ತೋಟಗಳು ಮತ್ತು ಎರಡು ರೇಷ್ಮೆಮನೆಗಳು ನೆಲಕಚ್ಚಿವೆ. ಅಲ್ಲದೆ ಗುಡೇಕೋಟೆ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಹತ್ತಾರು ವೀಳ್ಯದೆಲೆ ತೋಟಗಳು ಧರೆಗುರುಳಿದ್ದು ರೈತರಿಗೆ ಅಪಾರ ಹಾನಿಯಾಗಿದೆ.ಏಕ್ಕೆಗೊಂದಿ ಗ್ರಾಮದ ರೈತರಾದ ಎರ್ರಿಸ್ವಾಮಿ, ಗಂಗಣ್ಣ ಎಂಬುವರು, ನಡುಲಳ್ಳಿ ಓಬಮ್ಮ, ತಮ್ಮ ಜಮೀನಿನಲ್ಲಿ ರೇಷ್ಮೆ ಹುಳುಗಳು ಸಾಕಣೆಗೆಂದು ನಿರ್ಮಿಸಿದ್ದ ರೇಷ್ಮೆ ಮನೆಗಳು ಬಿರುಗಾಳಿ ಸಹಿತ ಮಳೆಗೆ ಮುರಿದು ಬಿದ್ದಿವೆ. ಇದರಿಂದ ರೈತರು ಲಕ್ಷಾಂತರ ನಷ್ಟವಾಗಿದೆ.
ಹುರುಳಿಹಾಳ್ ಗ್ರಾಮದಲ್ಲಿ ಮೂರು ವೀಳ್ಯದೆಲೆ ತೋಟ, ಎರಡು ಪಪ್ಪಾಯಿ ತೋಟ ಹಾಗೂ ಎಕ್ಕೆಗೊಂದಿ ಗ್ರಾಮದಲ್ಲಿ ಎರಡು ವೀಳ್ಯದೆಲೆ ತೋಟ ಹಾಗೂ ಎರಡು ರೇಷ್ಮೆ ಮನೆ ಉರುಳಿ ಬಿದ್ದು ಆಪಾರ ನಷ್ಟ ಉಂಟಾಗಿದೆ. ಕಾನಾಹೊಸಹಳ್ಳಿ ಹೋಬಳಿಯ ಹಿರೇಕುಂಬಳಗುಂಟೆ, ಹುಲಿಕೆರೆ, ಬಿ.ಟಿ. ಗುದ್ದಿ, ಕಾನಾಮಡುಗು, ಆಲೂರು ಸೇರಿದಂತೆ ಇತರೆ ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದ್ದು, ಕಾನಾಹೊಸಹಳ್ಳಿ ಕೆರೆಗೆ ಸ್ವಲ್ಪ ಪ್ರಮಾಣದ ನೀರು ಹರಿದು ಬಂದಿದೆ. ಹುಲಿಕೆರೆ ಗ್ರಾಮದ ಸೊನ್ನಮರಡಿ ವೀರಭದ್ರಸ್ವಾಮಿ ದೇವಸ್ಥಾನದ ಹತ್ತಿರ ಹೊಸದಾಗಿ ನಿರ್ಮಿಸಿರುವ ದೊಡ್ಡ ಚೆಕ್ ಡ್ಯಾಂ ಮೊದಲ ಬಾರಿಗೆ ತುಂಬಿದ್ದು ಸುತ್ತಮುತ್ತಲಿನ ರೈತರಿಗೆ ಸಂತಸ ತಂದಿದೆ