ಸಾರಾಂಶ
ಬಳ್ಳಾರಿ: ಮುಂಗಾರು ಮಳೆ ಶುರು ಬೆನ್ನಲ್ಲೇ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜಾಗಿದ್ದಾರೆ. ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿರುವುದರಿಂದ ರೈತರಿಗೆ ಅನುಕೂಲವಾದಂತಾಗಿದೆ. ಜತೆಗೆ ಮುಂಗಾರು ಅವಧಿಪೂರ್ವ ಆಗಮಿಸುವ ಮುನ್ಸೂಚನೆ ದೊರೆತಿದೆ. ಹೀಗಾಗಿ ಮಳೆಯಾಶ್ರಿತ ಪ್ರದೇಶದ ಕೆಲವೆಡೆ ಬಿತ್ತನೆ ಕಾರ್ಯಕ್ಕೆ ಚಾಲನೆ ದೊರೆತಿದೆ. ಜೂ. 10ರ ಬಳಿಕ ಬಹುತೇಕ ಕಡೆ ಬಿತ್ತನೆ ಆರಂಭಗೊಳ್ಳಲಿದೆ.
ವಿವಿಧ ಬೆಳೆಗಳ ಬಿತ್ತನೆ ಬೀಜಗಳ ಖರೀದಿಗೆ ರೈತರು ನಗರದ ಖಾಸಗಿ ಅಂಗಡಿಗಳ ಮುಂದೆ ಮುಗಿ ಬೀಳುತ್ತಿದ್ದಾರೆ.ಮುಂಗಾರು ಬಿತ್ತನೆಗೆ ಬೇಕಾದ ಬಿತ್ತನೆ ಬೀಜಗಳನ್ನು ಪೂರೈಸಲು ಕೃಷಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ಐದು ತಾಲೂಕುಗಳಿಗೆ ಬೇಕಾದ ವಿವಿಧ ಬೆಳೆಗಳ ಒಟ್ಟು 11,766 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಮುಂಗಾರಿಗೆ ಒಟ್ಟು 1,08,102 ಮೆ. ಟನ್ ರಸಗೊಬ್ಬರ ಬೇಡಿಕೆಯಿದೆ. ಈ ಪೈಕಿ ಮೇ ಅಂತ್ಯದ ವರೆಗೆ 3031 ಮೆ. ಟನ್ ಬೇಡಿಕೆಯಲ್ಲಿ ಕೃಷಿ ಇಲಾಖೆ 40,228 ಮೆ. ಟನ್ ರಸಗೊಬ್ಬರ ದಾಸ್ತಾನಿದೆ. ಈ ಬಾರಿ ಬತ್ತ, ಮೆಕ್ಕೆಜೋಳ, ಶೇಂಗಾ, ತೊಗರಿ, ಜೋಳ ಬಿತ್ತನೆ ಬೀಜಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆಯಿದೆ. ಬೇಡಿಕೆಯನ್ವಯ ಬಿತ್ತನೆ ಬೀಜ ಸಂಗ್ರಹಿಸಿಕೊಳ್ಳಲಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ತಮಗೆ ಬೇಕಾದ ಕಂಪನಿಯ ಬಿತ್ತನೆ ಬೀಜಕ್ಕಾಗಿ ರೈತರು ಖಾಸಗಿ ಅಂಗಡಿಗಳ ಮೊರೆ ಹೋಗಿರುವುದು ಕಂಡು ಬಂದಿದೆ.
ವಾಡಿಕೆಗಿಂತ ಹೆಚ್ಚು ಮಳೆ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಇದು ರೈತಾಪಿಗಳಲ್ಲಿ ಸಂತಸ ಮೂಡಿಸಿದೆ. ಬಳ್ಳಾರಿ ತಾಲೂಕಿನಲ್ಲಿ 33.7 ಮಿಮೀ ವಾಡಿಕೆ ಮಳೆಗೆ 92.9 ಮಿಮೀ ಮಳೆಯಾಗಿದೆ. ಸಂಡೂರು ತಾಲೂಕಿನಲ್ಲಿ 43.8 ಮಿಮೀ ವಾಡಿಕೆಗೆ 69.9 ಮಿಮೀ ಮಳೆಯಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ 26.6 ಮಿಮೀ ವಾಡಿಕೆಯ ಮಳೆಗೆ 71.9 ಮಿಮೀ ಮಳೆಯಾಗಿದೆ.ಕುರುಗೋಡು ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆಯಾಗಿದ್ದು, ವಾಡಿಕೆಯ 25.5 ಮಿಮೀಗೆ 108.7 ಮಿಮೀ ಮಳೆಯಾಗಿದೆ. ಕಂಪ್ಲಿ ತಾಲೂಕಿನಲ್ಲಿ ವಾಡಿಕೆಯಂತೆ 23.9 ಮಿಮೀ ಮಳೆಯಾಗಬೇಕಿತ್ತು. 82.4 ಮಿಮೀ ಮಳೆಯಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಒಟ್ಟು ಜಿಲ್ಲೆಯಲ್ಲಿ 28.6 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಈ ಪೈಕಿ 82.4 ಮಿಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಬಿತ್ತನೆ ಬೀಜಕ್ಕೆ ಮುಗಿಬಿದ್ದ ಜನರು: ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಖಾಸಗಿ ಬಿತ್ತನೆ ಬೀಜ ಅಂಗಡಿಗಳ ಮುಂದೆ ನಿತ್ಯ ಮುಗಿ ಬೀಳುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಈ ಪೈಕಿ ಕರ್ನಾಟಕಾಂಧ್ರ ಗಡಿಯಲ್ಲಿರುವ ಆಂಧ್ರದ ನೂರಾರು ಗ್ರಾಮಗಳ ಜನರು ಬಳ್ಳಾರಿಗೆ ಬಿತ್ತನೆ ಬೀಜ ಖರೀದಿಗೆ ಬರುತ್ತಿದ್ದು, ಬೀಜ ಮಾರಾಟಗಾರರಿಗೆ ಭರ್ಜರಿ ವ್ಯಾಪಾರವಾಗುತ್ತಿದೆ. ಪ್ರಮುಖವಾಗಿ ತೊಗರಿ, ಶೇಂಗಾ, ಜೋಳ, ಹತ್ತಿ ಹಾಗೂ ಮೆಕ್ಕೆಜೋಳ ಬಿತ್ತನೆ ಬೀಜಕ್ಕೆ ಭಾರೀ ಬೇಡಿಕೆಯಿದೆ. ಆಂಧ್ರಪ್ರದೇಶದ ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಯ ರೈತರು ಬಳ್ಳಾರಿಗೆ ಪ್ರತಿವರ್ಷದಂತೆ ಈ ಬಾರಿಯೂ ಬಿತ್ತನೆ ಬೀಜಕ್ಕೆ ನಗರಕ್ಕೆ ಆಗಮಿಸಿದ್ದರು. ನಮ್ಮ ಹಳ್ಳಿಯಿಂದ ಕರ್ನೂಲ್ ಹಾಗೂ ಅನಂತಪುರ ಜಿಲ್ಲಾ ಕೇಂದ್ರಕ್ಕೆ ಹೋಗಲು ತುಂಬಾ ದೂರವಾಗುತ್ತದೆ. ಬಳ್ಳಾರಿಯಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳು ದೊರೆಯುವುದರಿಂದ ಪ್ರತಿವರ್ಷವೂ ಇಲ್ಲಿಯೇ ಖರೀದಿ ಮಾಡುತ್ತೇವೆ ಎಂದು ರೈತರು ''''ಕನ್ನಡಪ್ರಭ''''ಕ್ಕೆ ತಿಳಿಸಿದರು. ಈ ಬಾರಿ ಉತ್ತಮ ಮಳೆಯಾಗಿದ್ದು ಬಿತ್ತನೆ ಬೀಜ ಖರೀದಿಗೆ ಬಂದಿದ್ದೆವು. ಕೃಷಿ ಇಲಾಖೆಯಿಂದ ಬಿತ್ತನೆಬೀಜ ನೀಡುತ್ತಾರೆ. ಆದರೆ, ನಮಗೆ ಬೇಕಾದ ಕಂಪನಿಯ ಬೀಜಗಳು ದೊರೆಯುವುದಿಲ್ಲ. ಹೀಗಾಗಿ ಖಾಸಗಿ ಅಂಗಡಿಯಲ್ಲಿ ಖರೀದಿಸುತ್ತೇವೆ ಎಂದು ರೂಪನಗುಡಿ ಗ್ರಾಮದ ರೈತರಾದ ಈಡಿಗರ ಹನುಮಂತಪ್ಪ, ಮುಕ್ಕಣ್ಣ ಹಾಗೂ ರಾಜಾಸಾಬ್ ಹೇಳುತ್ತಾರೆ.