ಹಲಗೂರು ವ್ಯಾಪ್ತಿಯಲ್ಲಿ ಉತ್ತಮ ಮಳೆ; ಹಳ್ಳ ಕೊಳ್ಳಗಳಲ್ಲಿ ಹರಿದ ನೀರು

| Published : Sep 30 2024, 01:31 AM IST

ಹಲಗೂರು ವ್ಯಾಪ್ತಿಯಲ್ಲಿ ಉತ್ತಮ ಮಳೆ; ಹಳ್ಳ ಕೊಳ್ಳಗಳಲ್ಲಿ ಹರಿದ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದಲ್ಲಿ ಶಿಂಷಾ- ಕಾವೇರಿ ನದಿ ಪಕ್ಕದಲ್ಲೆ ಇದ್ದರೂ ಕೃಷಿ ಚಟುವಟಿಕೆಗಳಿಗೆ ಮಾತ್ರ ನೀರಿಲ್ಲ. ಮಳೆಯಾಶ್ರಿತ ಪ್ರದೇಶವಾದ ಈ ಭಾಗದ ಹಲವು ಗ್ರಾಮಗಳಲ್ಲಿ ಮಳೆ ಇಲ್ಲದೇ ಅಂತರ್ಜಲ ಕುಸಿದು ಬೋರ್ ವೆಲ್ ನೀರು ಕೂಡ ಕಡಿಮೆಯಾಗಿತ್ತು. ಜನರು ಸೇರಿದಂತೆ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿಗೂ ತೊಂದರೆಯಾಗಿತ್ತು.

ಎಚ್.ಎನ್.ಪ್ರಸಾದ್

ಕನ್ನಡಪ್ರಭ ವಾರ್ತೆ ಹಲಗೂರು

ಬಹು ದಿನಗಳ ನಂತರ ಹಲಗೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಮಳೆಯಾಶ್ರಿತ ಪ್ರದೇಶವಾದ ಹಲಗೂರಿನಲ್ಲಿ ಹಲವು ದಿನಗಳಿಂದ ಮಳೆ ಇಲ್ಲದೇ ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು, ಕೃಷಿ ಚಟುವಟಿಕೆ ಕೈಗೊಳ್ಳಲು ನೀರಿಲ್ಲದೆ ರೈತರು ಪರದಾಡುತ್ತಿದ್ದರು.

ಶನಿವಾರ ರಾತ್ರಿ ಆರಂಭವಾದ ಮಳೆ ಬೆಳಗಿನ ಜಾವದವರೆಗೂ ಗುಡುಗು ಸಿಡಿಲಿನ ಜೊತೆ ಉತ್ತಮವಾಗಿ ಸುರಿದಿದೆ. ಇದರಿಂದ ಈ ಭಾಗದ ಹಲವು ಕೆರೆ ಕಟ್ಟೆಗಳು ಅರ್ಧದಷ್ಟು ಭಾಗ ತುಂಬಿವೆ. ಅಲ್ಲದೇ, ಸಮೀಪವೇ ಇರುವ ಭೀಮಾ ನದಿಯ ಚಿಕ್ಕತೊರೆಯಲ್ಲಿ ನೀರು ಹರಿದಿರುವುದು ರೈತರಿಗೆ ಖುಷಿ ತರಿಸಿದೆ.

ಈ ಭಾಗದಲ್ಲಿ ಶಿಂಷಾ- ಕಾವೇರಿ ನದಿ ಪಕ್ಕದಲ್ಲೆ ಇದ್ದರೂ ಕೃಷಿ ಚಟುವಟಿಕೆಗಳಿಗೆ ಮಾತ್ರ ನೀರಿಲ್ಲ. ಮಳೆಯಾಶ್ರಿತ ಪ್ರದೇಶವಾದ ಈ ಭಾಗದ ಹಲವು ಗ್ರಾಮಗಳಲ್ಲಿ ಮಳೆ ಇಲ್ಲದೇ ಅಂತರ್ಜಲ ಕುಸಿದು ಬೋರ್ ವೆಲ್ ನೀರು ಕೂಡ ಕಡಿಮೆಯಾಗಿತ್ತು. ಜನರು ಸೇರಿದಂತೆ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿಗೂ ತೊಂದರೆಯಾಗಿತ್ತು.

ಕೆಲವು ತಿಂಗಳ ಹಿಂದೆ ಅಲ್ಪಸ್ವಲ್ಪ ಮಳೆಯಾದಾಗ ಜಮೀನನ್ನು ಹಸನ ಮಾಡಿಕೊಂಡು ಧೈರ್ಯದಿಂದ ಹುರುಳಿ, ರಾಗಿ ಇತರ ಬೆಳೆಗಳನ್ನು ಹಾಕಿದ್ದರು. ಆದರೆ, ಮಳೆ ಇಲ್ಲದೆ ರೈತರು ಕಂಗಾಲಾಗಿದ್ದ ವೇಳೆ ಶನಿವಾರ ರಾತ್ರಿ ಸುರಿದ ಮಳೆ ಬಹುತೇಕ ಬೆಳೆಗಳಿಗೆ ಬೆಳೆಯಲು ಸಹಕಾರಿಯಾಗಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ಭೀಮನ ಕಿಂಡಿ ಬೆಟ್ಟಕ್ಕೆ ಉತ್ತಮವಾದ ಮಳೆಯಾದ ಪ್ರಯುಕ್ತ ಅಲ್ಲಿಂದ ಹರಿದು ಬರುವ ನೀರು ಹಲಗೂರು ಕೆರೆಗೆ ಬರುತ್ತದೆ. ಭೀಮನ ಕಿಂಡಿ ಬೆಟ್ಟದಿಂದ ಹಲಗೂರಿಗೆ ಬರುವ ಹಳ್ಳ ಕೊಳ್ಳಗಳು ಮಣ್ಣಿನಿಂದ ತುಂಬಿ ಮುಚ್ಚಿ ಹೋಗಿದೆ. ಇದನ್ನು ತೆರೆವುಗೊಳಿಸಿದರೆ ಸರಾಗವಾಗಿ ನೀರು ಹಲಗೂರು ಕೆರೆಗೆ ಹರಿದು ಸದಾ ತುಂಬಿರುತ್ತದೆ. ಕುಡಿಯುವ ನೀರಿಗೂ ತೊಂದರೆಯಾಗಲ್ಲ.

ಇದೇ ರೀತಿ ಹಲವು ಗ್ರಾಮಗಳು ಮಳೆಯಾಶ್ರಿತ ಪ್ರದೇಶಗಳಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಹಳ್ಳಕೊಳ್ಳಗಳಲ್ಲಿ ತುಂಬಿರುವ ಮಣ್ಣು ಹಾಗೂ ಕಸ ಕಡ್ಡಿಗಳನ್ನು ತೆರವುಗೊಳಿಸಿ ಕೆರೆ ಕಟ್ಟೆಗಳು ಮಳೆ ನೀರಿನಿಂದ ತುಂಬಿದರೆ ರೈತರಿಗೆ ಅನುಕೂಲವಾಗುವ ಜೊತೆಗೆ ಕುಡಿಯುವ ನೀರಿಗೂ ಸಹಕಾರಿಯಾಗಲಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಈ ಭಾಗದ ಜನರ ಒತ್ತಾಯವಾಗಿದೆ.

ಗ್ರಾಮದಲ್ಲಿ 120 ಕುಟುಂಬಗಳಿವೆ. ಮಳೆ ಆಶ್ರಯದಲ್ಲೆ ವ್ಯವಸಾಯ ಮಾಡಿ ಜೀವನ ನಡೆಸಬೇಕು. ಅವರೇಕಾಯಿ ಇಲ್ಲಿ ತುಂಬ ಹೆಸುರವಾಸಿ. ರೇಷ್ಮೆ ಹುಳು ಸಾಕಾಣೆ ರೈತರ ಆರ್ಥಿಕ ಸಮಸ್ಯೆ ನಿವಾರಣೆಗೆ ಸ್ವಲ್ಪ ಸಹಕಾರಿಯಾಗಿದೆ. ಆದರೆ, ನೀರಿನ ಕೊರತೆಯಿಂದ ರಾಗಿ ಇತರ ಬೆಳೆಗಳು ಬೆಳೆಯಲು ತುಂಬಾ ತೊಂದರೆಯಾಗಿದೆ. ಈ ಬಾರಿ ಉತ್ತಮ ಮಳೆಯಾಗಿ ಬೆಳೆ ರೈತರ ಕೈಸೇರಲಿ ಎಂದು ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.

-ಶಶಿ ಗ್ರಾಪಂ ಸದಸ್ಯರು, ಬಸವನಹಳ್ಳಿ

ಶನಿವಾರ ರಾತ್ರಿ ಈ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬಿರುಗಾಳಿ ಇಲ್ಲದ ಕಾರಣ ಯಾವುದೇ ಅನಾಹುತಗಳು ಸಂಭವಿಸಿಲ್ಲ. ವಿದ್ಯುತ್ ಸಮಸ್ಯೆಯೂ ಆಗಿಲ್ಲ. ಮಳೆಯಿಂದಾಗಿ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ.

-ಶಿವಲಿಂಗು, ಜೆಇ, ವಿದ್ಯುತ್ ಇಲಾಖೆ