ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕಿನಲ್ಲಿ ಸೋಮವಾರ ಸಂಜೆ ವೇಳೆಗೆ ಸುರಿದ ಮಳೆಗೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಮಧುಗಿರಿ ಪ್ಟಟಣದ ಜನತೆಗೆ ಕುಡಿಯುವ ನೀರು ಒದಗಿಸುವ ಚೋಳೇನಹಳ್ಳಿ ಕೆರೆಗೆ ಬೆಟ್ಟ- ಗುಡ್ಡಗಳಿಂದ ನೀರು ಹರಿದು ಬರುತ್ತಿದ್ದು, ಇದೇ ರೀತಿ ಮಳೆ ಸುರಿದರೆ ಕೋಡಿ ಬೀಳಲಿದ್ದು ಸುತ್ತಮುತ್ತಲಿನ ಹಳ್ಳಿಗಳ ರೈತರು ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಮಳೆ ವಿವರ: ಮಧುಗಿರಿ ಕಸಬಾ 41 ಮಿಮೀ, ಬಡವನಹಳ್ಳಿ 85 ಮಿಮೀ, ಬ್ಯಾಲ್ಯ 118 ಮಿಮೀ, ಮಿಡಿಗೇಶಿ 10ಮಿಮೀ, ಐ.ಡಿ.ಹಳ್ಳಿ 40ಮಿಮೀ ಮತ್ತು ಕೊಡಿಗೇನಹಳ್ಳಿ 55ಮಿಮೀ ಉತ್ತಮ ಮಳೆ ಬಿದ್ದಿದೆ. ಇದರಿಂದ ರೈತರು ಬಿತ್ತಿದ ಹಲವು ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿರುವ ಜೊತೆಗೆ ಒಣಗಿದ್ದ ಭೂಮಿ ತಂಪಾಗಿದೆ. ದೇವರಾಯನದುರ್ಗದಲ್ಲಿ ಜನ್ಮ ತಾಳುವ ಜಯಮಂಗಲಿ ನದಿಯು ಸೋಮವಾರ ರಾತ್ರಿ ಕೊರಟಗೆರೆ ತಾಲೂಕಿನಲ್ಲಿ ಅತ್ಯಧಿಕ ಮಳೆ ಸುರಿದ ಪರಿಣಾಮ ಮೈದುಂಬಿ ಹರಿಯುತ್ತಿದೆ. ಈ ಮಳೆಯಿಂದಾಗಿ ರಾತ್ರಿ ವೇಳೆ ನಗರ ಮತ್ತು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ತಾಲೂಕಿನ ವೀರೇನಹಳ್ಳಿ, ಕಾಳೇನಹಳ್ಳಿ ನಡುವಿನ ರಸ್ತೆ ಮತ್ತು ಹೊಲ,ತೋಟ, ಗದ್ದೆಗಳು ಜಲಾವೃತವಾಗಿವೆ. ಕಳೆದ ವರ್ಷ ಮಳೆ ಕೈ ಕೊಟ್ಟ ಪರಿಣಾಮ ರೈತರು ಬಿತ್ತಿದ ಎಲ್ಲ ಬೆಳೆಗಳು ಒಣಗಿ ದನ- ಕರುಗಳಿಗೂ ಕುಡಿಯುವ ನೀರು, ಮೇವಿನ ಕೊರತೆ ಉಂಟಾಗಿ ಕೃಷಿ ಚಟುವಟಿಕೆಗಳಿಗೆ ನೀರಿಲ್ಲದ ಕಾರಣ ರೈತರ ಬದುಕು ಮೂರಾಬಟ್ಟೆಯಾಗಿತ್ತು. ಈಗ ಉತ್ತಮ ಮಳೆ ಬೀಳುತ್ತಿರುವ ಕಾರಣ ರೈತರ ಮೊಗದಲ್ಲಿ ಸಂತಸದ ಹೊನಲು ಮೂಡಿದೆ.
ಮಧುಗಿರಿ ಸಮೀಪದ ಕಮ್ಮನಕೋಟೆ , ಮಾರಿಬೀಳು ಬಳಿ ಹರಿಯುವ ಮಧುಫಾಲ್ಸ್ ತುಂಬಿ ಹರಿಯುತ್ತಿದ್ದು, ಬೆಟ್ಟ- ಗುಡ್ಡಗಳ ಪ್ರದೇಶಗಳಲ್ಲಿರುವ ಬಹುತೇಕ ಎಲ್ಲ ಕೆರೆ, ಕಟ್ಟೆಗಳು ,ಗುಂಡಿಗಳು ತುಂಬಿವೆ. ಮಧುಗಿರಿ ಚೋಳೇನಹಳ್ಳಿ ಕೆರೆ ಕೋಡಿ ಬೀಳು ಹಂತಕ್ಕೆ ತಲುಪಿದೆ.