ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಶಿವಮೊಗ್ಗ ಜಿಲ್ಲೆಯು ಶೇ. 87.69 ಫಲಿತಾಂಶ ಪಡೆದಿದ್ದು, ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚು ಫಲಿತಾಂಶ ಪಡೆಯುವ ಮೂಲಕ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಜಿ.ಪಂ ಸಿಇಒ ಎನ್‌.ಹೇಮಂತ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಶಿವಮೊಗ್ಗ ಜಿಲ್ಲೆಯು ಶೇ. 87.69 ಫಲಿತಾಂಶ ಪಡೆದಿದ್ದು, ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚು ಫಲಿತಾಂಶ ಪಡೆಯುವ ಮೂಲಕ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಜಿ.ಪಂ ಸಿಇಒ ಎನ್‌.ಹೇಮಂತ್‌ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ.79.91 ಫಲಿತಾಂಶ ಬಂದಿದ್ದು, ಈ ಸಾಲಿನಲ್ಲಿ ಶೇ.87.62 ಫಲಿತಾಂಶ ಪಡೆಯಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 17532 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15361 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 10,123 ಬಾಲಕಿಯರಲ್ಲಿ 9432 ಅಂದರೆ ಶೇ.93 ಬಾಲಕಿಯರು ಪಾಸಾಗಿದ್ದಾರೆ. ಪರೀಕ್ಷೆ ಬರೆದ 7409 ಬಾಲಕರಲ್ಲಿ 5929 ಬಾಲಕರು ಅಂದರೆ ಶೇ.81 ಬಾಲಕರು ಪಾಸಾಗಿದ್ದಾರೆ ಎಂದರು.

ಕಲಾ ವಿಭಾಗದಲ್ಲಿ 3637ರಲ್ಲಿ 2701, ವಾಣಿಜ್ಯ ವಿಭಾಗದಲ್ಲಿ 5865ರ ಪೈಕಿ 5139, ವಿಜ್ಞಾನ ವಿಭಾಗದಲ್ಲಿ 8030ರಲ್ಲಿ 7521 ಪಾಸಾಗಿದ್ದಾರೆ. ನಗರ ಭಾಗದಲ್ಲಿ ಪರೀಕ್ಷೆಗೆ ಹಾಜರಾದ 10084 ವಿದ್ಯಾರ್ಥಿಗಳಲ್ಲಿ 8721 ಹಾಗೂ ಗ್ರಾಮೀಣ ಭಾಗದಲ್ಲಿ ಪರೀಕ್ಷೆಗೆ ಹಾಜರಾದ 7448 ವಿದ್ಯಾರ್ಥಿಗಳಲ್ಲಿ 6640 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಫಲಿತಾಂಶ ವಿವರ: ಜಿಲ್ಲೆಯಲ್ಲಿ ಉನ್ನತ ಶ್ರೇಣಿ 4622, ಪ್ರಥಮ ದರ್ಜೆ 8308, ದ್ವಿತೀಯ ದರ್ಜೆ 1841 ಮತ್ತು 639 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ತಾಲೂಕುವಾರು ತೀರ್ಥಹಳ್ಳಿ ತಾಲೂಕು ಉನ್ನತಶ್ರೇಣಿ 381, ಪ್ರಥಮ ದರ್ಜೆ 519, ದ್ವಿತೀಯ ದರ್ಜೆ 121, ಪಾಸು 26, ಶೇ. 93.73 ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಹೊಸನಗರ ಉನ್ನತ ಶ್ರೇಣಿ 177, ಪ್ರಥಮ ದರ್ಜೆ 469, ದ್ವಿತೀಯ ದರ್ಜೆ 103, ಪಾಸು 22 ಶೇ.93 ದ್ವಿತೀಯ ಸ್ಥಾನ. ಶಿವಮೊಗ್ಗ ಉನ್ನತ ಶ್ರೇಣಿ 2541, ಪ್ರಥಮ ದರ್ಜೆ 3379, ದ್ವಿತೀಯ ದರ್ಜೆ 522, ಪಾಸು 198, ಶೇ.91.28 ಮೂರನೇ ಸ್ಥಾನ. ಭದ್ರಾವತಿ ಉನ್ನತ ಶ್ರೇಣಿ 433, ಪ್ರಥಮ ದರ್ಜೆ 1046, ದ್ವಿತೀಯ ದರ್ಜೆ 292, ಪಾಸು 128 ಶೇ.84.55 ಫಲಿತಾಂಶ ಲಭಿಸಿದೆ. ಸಾಗರ ಉನ್ನತ ಶ್ರೇಣಿ 362, ಪ್ರಥಮ ದರ್ಜೆ 1070, ದ್ವಿತೀಯ ದರ್ಜೆ 307, 97 ಪಾಸು, ಶೇ.83.99 ಫಲಿತಾಂಶ. ಸೊರಬ ಉನ್ನತ ಶ್ರೇಣಿ 147, ಪ್ರಥಮ ದರ್ಜೆ 759, ದ್ವಿತೀಯ ದರ್ಜೆ 256, ಪಾಸು 66, ಶೇ 83.14 ಫಲಿತಾಂಶ. ಶಿಕಾರಿಪುರ ಉನ್ನತ ಶ್ರೇಣಿ 581, ಪ್ರಥಮ ದರ್ಜೆ 1066, ದ್ವಿತೀಯ ದರ್ಜೆ 240, ಪಾಸು 102 ಸೇರಿ ಶೇ.81.75 ಫಲಿತಾಂಶ ಲಭಿಸಿದೆ.

ಸರ್ಕಾರಿ ಶಾಲೆಗಳಲ್ಲಿ ಉನ್ನತ ಶ್ರೇಣಿ 895, ಪ್ರಥಮ ದರ್ಜೆ 3551, ದ್ವಿತೀಯ ದರ್ಜೆ 1179, ಪಾಸು 421, ಶೇ.81.01 ಫಲಿತಾಂಶ ಲಭಿಸಿದೆ. ಅನುದಾನಿತ ಶಾಲೆಗಳಲ್ಲಿ ಉನ್ನತ ಶ್ರೇಣಿ 547, ಪ್ರಥಮ ದರ್ಜೆ 1398, ದ್ವಿತೀಯ ದರ್ಜೆ 348, ಪಾಸು 169, ಶೇ.86.69 ಫಲಿತಾಂಶ ಲಭಿಸಿದೆ. ಅನುದಾನಿತ ರಹಿತ ಶಾಲೆಗಳಲ್ಲಿ ಉನ್ನತ ಶ್ರೇಣಿ 2971, ಪ್ರಥಮ ದರ್ಜೆ 3238, ದ್ವಿತೀಯ ದರ್ಜೆ 310, ಪಾಸು 49, ಶೇ.96.74 ಫಲಿತಾಂಶ ಲಭಿಸಿದೆ. ವಸತಿ ಶಾಲೆಗಳಲ್ಲಿ ಉನ್ನತ ಶ್ರೇಣಿ 209, ಪ್ರಥಮ ದರ್ಜೆ 121, ದ್ವಿತೀಯ ದರ್ಜೆ 4 ಸೇರಿ ಶೇ.99.11 ಫಲಿತಾಂಶ ಲಭಿಸಿದೆ. ಮುಂದಿನ ವರ್ಷ ಶೇ.90ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಶೇ.100 ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜುಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ಡಿಡಿಪಿಯು ಚಂದ್ರಪ್ಪ ಎಸ್‌.ಗುಂಡುಪಲ್ಲಿ ಉಪಸ್ಥಿತರಿದ್ದರು.

ಡೊನೇಷನ್ ಹಾವಳಿ ತಪ್ಪಿಸಲು ಕ್ರಮ: ಶಿವಮೊಗ್ಗ: ಖಾಸಗಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ಪ್ರವೇಶಕ್ಕೆ ಸರ್ಕಾರದ ನಿಯಮದಂತೆ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಹಾಗೂ ಡೊನೇಷನ್ ಪಡೆಯುವ ಆಡಳಿತ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಸಿಇಒ ಎನ್‌.ಹೇಮಂತ್ ತಿಳಿಸಿದ್ದಾರೆ.

ಡೊನೇಷನ್‌ ಹಾವಳಿ ಎಲ್ಲೆಡೆ ಹೆಚ್ಚಾಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಅವರು, ಶೀಘ್ರವೇ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಿ ಸರ್ಕಾರದ ನಿಯಮ ಪಾಲಿಸುವಂತೆ ಸೂಚಿಸಲಾಗುವುದು ಎಂದರು.

ಒಂದನೇ ತರಗತಿ ಹಾಗೂ ಪ್ರಥಮ ಪಿಯುಸಿ ಪ್ರವೇಶಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಡೊನೇಷನ್ ಪಡೆಯುವ ಮೂಲಕ ಪೋಷಕರ ಸುಲಿಗೆ ಮಾಡುತ್ತಿರುವುದು ಹಾಗೂ ಕಟ್ಟಡ ನಿದಿ ಹೆಸರಿನಲ್ಲಿ ಅನಗತ್ಯ ಡೊನೇಷನ್ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ಲೆಕ್ಕಪತ್ರಗಳ ಪರಿಶೀಲನೆ ಮಾಡುವಂತೆ ಡಿಡಿಪಿಯುಗೆ ಅವರಿಗೆ ಸೂಚನೆ ನೀಡಿದರು.

ಇದಲ್ಲದೆ ಪರವಾನಿಗೆ ಪಡೆಯದೆ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳ ಬಗ್ಗೆ ಕ್ರಮ ಕೈಗೊಳ್ಳಲು ಹಾಗೂ ಮೂಲಭೂತ ಸೌಲಭ್ಯ ಇಲ್ಲದೆ ಕೋಚಿಂಗ್ ಸೆಂಟರ್ ನಡೆಸುವವರಿಗೆ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.

ಡ್ರಾಪ್‌ಔಟ್: ಪಿಯುಸಿ ನಂತರ ಶಿಕ್ಷಣ ಮುಂದುವರೆಸದೆ ಮನೆಯಲ್ಲೇ ಉಳಿಯುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಶಿಕ್ಷಣದತ್ತ ಕರೆತರಲು ಪ್ರಯತ್ನಿಸಲಾಗುವುದು. ಹಾಸ್ಟೆಲ್ ಸೇರಿದಂತೆ ಕೆಲ ಸೌಲಭ್ಯಗಳಿಲ್ಲದೆ ಶಿಕ್ಷಣದಿಂದ ದೂರ ಉಳಿದವರಿಗೆ ಸರ್ಕಾರದಿಂದ ಆಗುವ ಅಗತ್ಯ ಅನುಕೂಲ ಮಾಡಿಕೊಟ್ಟು ಶಿಕ್ಷಣದಲ್ಲಿ ಮುಂದುವರೆಯುವಂತೆ ನೋಡಿಕೊಳ್ಳಲು ವಿಶೇಷ ಗಮನ ಹರಿಸುವುದಾಗಿ ತಿಳಿಸಿದರು.

ಪಲಿತಾಂಶ ಹೆಚ್ಚಳಕ್ಕೆ ಕ್ರಮ: ಜಿಲ್ಲೆಯ ದ್ವಿತೀಯ ಪಿಯುಸಿ ಪಲಿತಾಂಶ ಶೇ.87 ಬಂದಿದ್ದು, ಮುಂದಿನ ವರ್ಷ ಇದನ್ನು ಶೇ.90ರ ಗಡಿ ದಾಟಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕೋಚಿಂಗ್ ಹಾಗೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾದ ವಿಷಯಕ್ಕೆ ಒತ್ತು ನೀಡಿ ಅಭ್ಯಾಸ ಮಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.