ಗುಡ್‌ ಬೈ 2023, ವೆಲ್‌ ಕಮ್‌ 2024

| Published : Jan 01 2024, 01:15 AM IST

ಸಾರಾಂಶ

ಹೊಸ ವರ್ಷವನ್ನು ಶಿವಮೊಗ್ಗ ಜಿಲ್ಲೆ ಜನತೆ ಸಂಭ್ರಮದಿಂದ ಬರಮಾಡಿಕೊಂಡಿದ್ದು, ವರ್ಷಪೂರ್ತಿ ಬೇಸರ-ಕಾತರ, ನೋವು-ನಲುವಿನ ಜೊತೆ ಸಾಗಿದ ಜನರು ಭಾನುವಾರ ಇವೆಲ್ಲದಕ್ಕೂ ಸಣ್ಣ ವಿರಾಮ ಕೊಟ್ಟು, ಒಂದೊಳ್ಳೆಯ ಪಾರ್ಟಿಗೆ ಸಿದ್ಧವಾಗಿದ್ದರು. ಹೊಸ ವರ್ಷವನ್ನು ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಕಳೆದರೆ, ಅನೇಕರು ಕೆಲಸದ ಜೊತೆ ಹೊಸ ವರ್ಷವನ್ನು ಸಂಭ್ರಮಿಸಿದರು. ಇನ್ನೊಂದಿಷ್ಟು ಮಂದಿ ಪಾರ್ಟಿ ಮೂಡ್‌ಗೆ ಜಾರಿದ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹೊಸ ವರ್ಷವನ್ನು ಶಿವಮೊಗ್ಗ ಜಿಲ್ಲೆ ಜನತೆ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ವರ್ಷಪೂರ್ತಿ ಬೇಸರ-ಕಾತರ, ನೋವು-ನಲುವಿನ ಜೊತೆ ಸಾಗಿದ ಜನರು ಭಾನುವಾರ ಇವೆಲ್ಲದಕ್ಕೂ ಸಣ್ಣ ವಿರಾಮ ಕೊಟ್ಟು, ಒಂದೊಳ್ಳೆಯ ಪಾರ್ಟಿಗೆ ಸಿದ್ಧವಾಗಿದ್ದರು.

ಹೊಸ ವರ್ಷವನ್ನು ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಕಳೆದರೆ, ಅನೇಕರು ಕೆಲಸದ ಜೊತೆ ಹೊಸ ವರ್ಷವನ್ನು ಸಂಭ್ರಮಿಸಿದರು. ಇನ್ನೊಂದಿಷ್ಟು ಮಂದಿ ಪಾರ್ಟಿ ಮೂಡ್‌ಗೆ ಜಾರಿದ್ದರು.

ಕೇಕ್ ಖರೀದಿಗೆ ಯುವಜನತೆ ಮುಗಿಬಿದ್ದಿದ್ದು, ವರ್ಷದ ಮೊದಲ ದಿನ ಶಾಲಾ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕೆಲವರು ಮೋಜು ಮಸ್ತಿಗೆ ಗುಂಡು ತುಂಡು ಮೊರೆ ಹೋಗಿದ್ದರು. ಬಹುತೇಕರು ಮನೆಯಲ್ಲಿ ಸಿಹಿ ಮಾಡಿ ಖುಷಿಪಟ್ಟರು. ವಯೋವೃದ್ಧರ ಪಡೆ ಭಜನೆ, ದೇವರ ನಾಮದ ಮೂಲಕ ಹೊಸ ವರ್ಷದ ಆಚರಿಸಿದರು.

ಶಿವಮೊಗ್ಗ ನಗರದಲ್ಲಿ ಹೊಸವರ್ಷ ಸಂಭ್ರಮಾಚರಣೆ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಹೊಸ ವರ್ಷದ ವಿಶೇಷ ಕೇಕ್‌ಗಳನ್ನು ತಯಾರಿ ಮಾಡಿ ಪ್ರದರ್ಶನಕ್ಕೆ ಇಡಲಾಗಿತ್ತು. ಹೊಸ ವರ್ಷಾಚರಣೆ ಶಿವಮೊಗ್ಗದಲ್ಲಿ ಹಲವಾರು ಕಡೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶಿವಮೊಗ್ಗ ಕಂಟ್ರಿ ಕ್ಲಬ್, ಮಲೆನಾಡು ಶೈರ್ ಮತ್ತು ರಾಯಲ್ ಆರ್ಕಿಡ್‌ನಲ್ಲಿ ಹೊಸವರ್ಷ ಸಂಭ್ರಮಾಚರಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಕಂಟ್ರಿ ಕ್ಲಬ್ ನಲ್ಲಿ ಕುಟುಂಬ ಸದಸ್ಯರ ಜೊತೆ ಜಾಮಾಹಿಸಿದ್ದ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡರು. ಇಲ್ಲಿ ಒಬ್ಬರಿಗೆ 1250 ರು., ಮಕ್ಕಳಿಗೆ 850 ರು.ನಿಗದಿ ಪಡಿಸಲಾಗಿದೆ. ಮಂಗಳೂರಿನಿಂದ ಡಿಜೆ ವ್ಯವಸ್ಥೆ ಮಾಡಿಸಲಾಗಿತ್ತು.

ಹೊಸ ವರ್ಷದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಜನ ಸಾಗರವೇ ಸೇರಿತ್ತು. ವೀಕೆಂಡ್ ಹೊತ್ತಲ್ಲೆ ನ್ಯೂ ಇಯರ್ ಆಚರಣೆ ಇದ್ದಿದ್ದರಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಭಾರಿ ಸಂಖ್ಯೆಯ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸಿದ್ದರು.

ವರ್ಷದ ಮೊದಲ ದಿನ ತೀರ್ಥ ಕ್ಷೇತ್ರ ದರ್ಶನಕ್ಕೆಂದು ಹಲವರು ಆಗಮಿಸಿದ್ದರು. ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತಕ್ಕೆ ಜನ ಸಾಗರವೇ ಹರಿದು ಬಂದಿತ್ತು. ಹೊಸ ವರ್ಷದ ಮುನ್ನಾ ದಿನ ಜೋಗ ಸಮೀಪ ರೆಸಾರ್ಟ್, ಹೊಟೇಲ್ ಗಳಲ್ಲಿ ತಂಗಿದ್ದ ಪ್ರವಾಸಿಗರು ತಂಗಿದ್ದರು. ಭಾನುವಾರ ಜೋಗ ಜಲಪಾತಕ್ಕೆ ದಾಂಗುಡಿ ಇಟ್ಟಿದ್ದರು.

ಸಿಗಂದೂರು ದೇವಿ ದರ್ಶನ:

ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ದರ್ಶನಕ್ಕೆ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಭಾನುವಾರ ರಜೆ ದಿನವಾಗಿದ್ದರಿಂದ ಭಕ್ತ ಸಾಗರವೆ ಹರಿದು ಬಂದಿತ್ತು. ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮಕ್ಕು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಕಾಡಿನ ನಡುವೆ ಇರುವ ಸಫಾರಿ, ವಿವಿಧ ಬಗೆಯ ಪ್ರಾಣಿ, ಪಕ್ಷಿಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಭೇಟಿ ನೀಡಿದ್ದರು. ಶಿಕಾರಿಪುರದಲ್ಲಿ ಸಂಭ್ರಮಾಚರಣೆ ಜೋರು:

2024ರ ನೂತನ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಶಿಕಾರಿಪುರದಲ್ಲಿ ಸಾರ್ವಜನಿಕರು ವಿವಿಧ ಕೇಕ್ ಸ್ಟಾಲ್ ವ್ಯಾಪಾರಸ್ಥರು ಭರ್ಜರಿ ಸಿದ್ದತೆಯನ್ನು ಕೈಗೊಂಡಿದ್ದರು. ಪಟ್ಟಣದ ಬಸ್ ನಿಲ್ದಾಣದ ಸುತ್ತಮುತ್ತಲಿನ ಕೇಕ್ ಸ್ಟಾಲ್ ಮಾಲೀಕರು ವಿವಿಧ ರೀತಿಯ ಹೊಚ್ಚ ಹೊಸ ನಮೂನೆಯ ಬಣ್ಣಬಣ್ಣದ ಕೇಕ್ ತಯಾರಿಸಿಟ್ಟಿದ್ದು ಕೆಲ ಸ್ಟಾಲ್ ಗಳಲ್ಲಿ ಪ್ರದರ್ಶನ ನಡೆಯಿತು. ತಡರಾತ್ರಿಯೂ ಗ್ರಾಹಕರು ಕೇಕ್‌ ಖರೀದಿಸಿದ್ದು, ರಸ್ತೆಯಲ್ಲಿ ಬೈಕ್ ನಲ್ಲಿ ಮೂರು ನಾಲ್ಕು ಜನ ಕುಳಿತು ಕೊಂಡೊಯ್ಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕದಂಬ ಫ್ರೆಂಡ್ಸ್ ಕ್ಲಬ್ ವತಿಯಿಂದ ಪಟ್ಟಣದ ದಿ.ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಹೆಸರಾಂತ ಕಲಾವಿದರಿಂದ ನೃತ್ಯ, ಸಂಗೀತ, ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪೌರ ವಿಹಾರ,ಮರ್ಚೆಂಟ್ಸ್ ಮತ್ತಿತರ ಕ್ಲಬ್ ಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿತ್ತು. ವಿವಿಧ ನಮೂನೆಯ ಸಸ್ಯಹಾರಿ ಹಾಗೂ ಮಾಂಸಾಹಾರಿ ಬೋಜನ ಸವಿದು ಕುಣಿದು ಕುಪ್ಪಳಿಸಿದರು.

ಸಾಗರದಲ್ಲೂ ವರ್ಷಾಚರಣೆ:

ಹೊಸ ವರ್ಷವನ್ನು ಸ್ವಾಗತಿಸಲು ಸಾಗರದಲ್ಲಿಯೂ ಭರದ ಸಿದ್ಧತೆಗಳು ನಡೆದಿದೆ. ಸಾರ್ವತ್ರಿಕವಾಗಿ ಪ್ರಮುಖ ರಸ್ತೆಗಳಲ್ಲಿ ಹೊಸ ವರ್ಷಾಚರಣೆ ಇಲ್ಲದಿದ್ದರೂ ಪಟ್ಟಣದ ವಿವಿಧ ಹೋಟೆಲ್‍ಗಳು ಸಜ್ಜುಗೊಂಡಿದ್ದವು. ಪಟ್ಟಣದ ಗ್ರೀನ್ ಎಂಬೆಸಿ ಹೋಟೆಲ್‍ನಲ್ಲಿ ರಾತ್ರಿ 8 ಗಂಟೆಯಿಂದಲೆ ಹಾಡು, ನೃತ್ಯ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅನ್‍ಮೋಲ್ ಹೋಟೆಲ್‍ನಲ್ಲಿಯೂ ಹೊಸವರ್ಷದ ಪಾರ್ಟಿಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಉಳಿದಂತೆ ಪಟ್ಟಣದ ಬಹುತೇಕ ಬೇಕರಿ, ಸಿಹಿತಿನಿಸುಗಳ ಅಂಗಡಿಗಳು ಗ್ರಾಹಕರಿಂದ ತುಂಬಿಹೋಗಿತ್ತು. ಜನರು ಕೇಕ್, ಸಿಹಿತಿನಿಗಳ ಖರೀದಿಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪಟ್ಟಣದ ಜೈಹಿಂದ್ ಬೇಕರಿ ಮಾಲಿಕರು ಪ್ರತಿವರ್ಷದಂತೆ ಈ ವರ್ಷವೂ ಕೇಕ್ ಗಳ ಪ್ರದರ್ಶನ ಮಾಡಿದರು. ಪಟ್ಟಣದ ಸಂತ ಜೋಸೆಫರ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಒಟ್ಟಾರೆಯಾಗಿ ಸಾಗರದಲ್ಲಿ ಹೊಸವರ್ಷಾಚರಣೆ ಸಂಭ್ರಮ ಜೋರಾಗಿತ್ತು.

- - - -31ಎಸ್‌ಎಂಜಿಕೆಪಿ04:

ಶಿವಮೊಗ್ಗ ನಗರದ ಜ್ಯೂಯಲ್‌ ರಾಕ್‌ ರಸ್ತೆಯ ಕೇಕ್‌ ಕಾರ್ನರ್‌ನಲ್ಲಿ ಕೇಕ್‌ ಖರೀದಿಸುತ್ತಿರುವ ಜನ.