ಸಾರಾಂಶ
ನರೇಗಾ ಕೂಲಿ ಕಾಮಿಕರು ಪ್ರಯಾಣಿಸುತ್ತಿದ್ದ ಗೂಡ್ಸ್ ವಾಹನ ಸಂಗಮ ಸಕ್ಕರೆ ಕಾರ್ಖಾನೆ ಬಳಿ ಪಲ್ಟಿಯಾಗಿ 33 ಕಾರ್ಮಿಕರು ಗಾಯಗೊಂಡಿದ್ದು, ವಾಹನಕ್ಕೆ ಅಡ್ಡಬಂದಿದ್ದ ದ್ವಿಚಕ್ರವಾಹನ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಯಮಕನಮರಡಿ
ನರೇಗಾ ಕೂಲಿ ಕಾಮಿಕರು ಪ್ರಯಾಣಿಸುತ್ತಿದ್ದ ಗೂಡ್ಸ್ ವಾಹನ ಸಂಗಮ ಸಕ್ಕರೆ ಕಾರ್ಖಾನೆ ಬಳಿ ಪಲ್ಟಿಯಾಗಿ 33 ಕಾರ್ಮಿಕರು ಗಾಯಗೊಂಡಿದ್ದು, ವಾಹನಕ್ಕೆ ಅಡ್ಡಬಂದಿದ್ದ ದ್ವಿಚಕ್ರವಾಹನ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ಮಾಜಿ ಯೋಧ ಅಡಿವೆಪ್ಪ ಬಸವಣ್ಣಿ ಅಂಕಲಿ (42) ಮೃತಪಟ್ಟವರು.
ಅಪಘಾತ ಆಗಿದ್ದು ಹೇಗೆ?: ಯಮಕನಮರಡಿ ಗ್ರಾಮ ಪಂಚಾಯಿತಿಯ ಮನರೇಗಾ ಕೂಲಿ ಕಾಮಿಕರು ಕೆಲಸಕ್ಕಾಗಿ ಗೂಡ್ಸ್ ವಾಹನದಲ್ಲಿ ಹಿಡಕಲ್ ಡ್ಯಾಮ್‌ಗೆ ತೆರಳುತ್ತಿದ್ದಾಗ ಹಿಡಕಲ್ ಡ್ಯಾಮ್ ರಸ್ತೆಯ ಸಂಗಮ ಸಕ್ಕರೆ ಕಾರ್ಖಾನೆ (ಹೊಸೂರ ಕ್ರಾಸ್) ಬಳಿ ಬುಲೆಟ್ ವಾಹನ ಅಡ್ಡಬಂದಿದೆ. ಅದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಕಾರ್ಮಿಕರಿದ್ದ ವಾಹನ ರಸ್ತೆ ಬದಿಗೆ ಉರುಳಿಬಿದ್ದಿದೆ. ಮಾತ್ರವಲ್ಲ ಬುಲೆಟ್ ವಾಹನಕ್ಕೂ ಡಿಕ್ಕಿ ಹೊಡೆದಿದೆ. ಗೂಡ್ಸ್ ವಾಹನದಲ್ಲಿದ್ದ ಸುಮಾರು 33 ಜನ ಕಾರ್ಮಿಕರು ಗಾಯಗೊಂಡರು. ಜತೆಗೆ ಬೈಕ್ ಸವಾರ ಕೂಡ ತೀವ್ರವಾಗಿ ಗಾಯಗೊಂಡರು.ಆಗ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಇವರಲ್ಲಿ ಐದು ಜನ ಕಾರ್ಮಿಕರು ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಬುಲೆಟ್ ಸವಾರ ಗಂಭೀರ ಗಾಯಗೊಂಡಿದ್ದು, ತಕ್ಷಣ ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬುಲೆಟ್ ಸವಾರ ಅಡಿವೆಪ್ಪ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಯಮಕನಮರಡಿ ಪಿಎಸ್‌ಐ ಎಸ್.ಕೆ. ಮನ್ನಿಕೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.