ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳ್ಳತನ, ದರೋಡೆ ಹಾಗೂ ಸುಲಿಗೆ ಸೇರಿದಂತೆ ವಿವಿಧ 75 ಅಪರಾಧ ಕೃತ್ಯಗಳನ್ನು ಭೇದಿಸಿ 83 ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್‌, ಹೆಬ್ಬಾಳ, ಜೆ.ಸಿ. ನಗರ, ಸಂಜಯನಗರ, ಶ್ರೀರಾಮಪುರ, ಸುಬ್ರಹ್ಮಣ್ಯ ನಗರ, ಯಶವಂತಪುರ ಹಾಗೂ ನಂದಿನಿ ಲೇಔಟ್ ಸೇರಿದಂತೆ ಉತ್ತರ ವಿಭಾಗದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ನಗರ ವ್ಯಾಪ್ತಿ ವರದಿಯಾಗಿದ್ದ ಮನೆಗಳ್ಳತನ, ಸುಲಿಗೆ, ದರೋಡೆ ಸೇರಿದಂತೆ ಒಟ್ಟು 75 ಪ್ರಕರಣಗಳನ್ನು ಪತ್ತೆ ಹಚ್ಚಿ 83 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಈ ಆರೋಪಿಗಳಿಂದ 1.76 ಕೋಟಿ ರು. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಹೀಗೆ ವಶಪಡಿಸಿಕೊಂಡ ವಸ್ತುಗಳಲ್ಲಿ 1.8 ಕೆಜಿ ಚಿನ್ನಾಭರಣ, 4.58 ಗ್ರಾಂ ವಜ್ರ, 1.7 ಕೆಜಿ ಬೆಳ್ಳಿ, 54 ಬೈಕ್‌ಗಳು ಹಾಗೂ 67 ಮೊಬೈಲ್‌ಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.