ಸಾಗರ ಜಿಲ್ಲೆಗೆ ಒತ್ತಾಯಿಸಿ ಸಿಎಂರಿಗೆ ಗೋಪಾಲಕೃಷ್ಣ ಬೇಳೂರು ಪತ್ರ

| Published : Sep 08 2025, 01:00 AM IST

ಸಾರಾಂಶ

ಸಾಗರ ಜಿಲ್ಲೆಯಾಗಿ ಪರಿವರ್ತನೆ ಮಾಡುವಂತೆ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ

ಸಾಗರ ಜಿಲ್ಲೆಯಾಗಿ ಪರಿವರ್ತನೆ ಮಾಡುವಂತೆ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಸಾಗರಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಕೆಳದಿ ಅರಸರು ೨೬೫ಕ್ಕೂ ಹೆಚ್ಚು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ಕಂದಾಯ ಪದ್ದತಿ ಶಿಸ್ತನ್ನು ಶಿವಪ್ಪನಾಯಕ ಜಾರಿಗೆ ತಂದರೆ, ಇಪ್ಪತ್ತೊಂದಕ್ಕೂ ಹೆಚ್ಚು ವರ್ಷಗಳ ಕಾಲ ಮಹಿಳೆಯೊಬ್ಬರು ಆಡಳಿತ ನೀಡಿದ ಕೀರ್ತಿ ಕೆಳದಿ ರಾಣಿ ಚೆನ್ನಮ್ಮಾಜಿಗೆ ಸಲ್ಲುತ್ತದೆ. ಜೊತೆಗೆ ಮರಾಠ ದೊರೆ ಶಿವಾಜಿ ಪುತ್ರ ರಾಜಾರಾಮನಿಗೆ ಆಶ್ರಯ ನೀಡಿದ ಕೀರ್ತಿ ಸಹ ರಾಣಿ ಚೆನ್ನಮ್ಮಾಜಿಯದ್ದಾಗಿದೆ. ಕ್ರಾಂತಿಕಾರಕ ಕಾಗೋಡು ಸತ್ಯಾಗ್ರಹದ ಮೂಲಕ ದೇಶದ ಗಮನ ಸೆಳೆದದ್ದು ಸಾಗರ ತಾಲೂಕಿನ ಹೆಗ್ಗಳಿಕೆಯಾಗಿದೆ.

ವಿಶ್ವವಿಖ್ಯಾತ ಜೋಗ ಜಲಪಾತ, ಲಿಂಗನಮಕ್ಕಿ ಆಣೆಕಟ್ಟು, ಸಿಗಂದೂರು ಚೌಡೇಶ್ವರಿ, ವರದಹಳ್ಳಿ, ಕೆಳದಿ ಇಕ್ಕೇರಿ ಸೇರಿದಂತೆ ಐತಿಹಾಸಿಕ ಮತ್ತು ಧಾರ್ಮಿಕ, ಪ್ರೇಕ್ಷಣಿಯ ಸ್ಥಳಗಳು ಸಾಗರದ ಕೀರ್ತಿಯನ್ನು ಹೆಚ್ಚಿಸಿದೆ. ವರದಾ, ಶರಾವತಿ ನದಿಗಳು ಹಾದು ಹೋಗಿರುವ ಸಾಗರ ತಾಲೂಕು ಅಡಕೆ ಬೆಳೆಯ ಮೂಲಕ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಭತ್ತ, ತೆಂಗು, ಜೋಳ, ಬಾಳೆ, ಶುಂಠಿಯೂ ವಾಣಿಜ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದೆ.

ಭೌಗೋಳಿಕವಾಗಿ ಸಾಗರ ವಿಸ್ತಾರವಾಗಿದೆ. ಹೊಸನಗರ, ಸೊರಬ, ಶಿಕಾರಿಪುರ ತಾಲೂಕುಗಳನ್ನೊಳಗೊಂಡ ಉಪವಿಭಾಗೀಯ ಕೇಂದ್ರ ಸಾಗರ ಎನ್ನುವುದು ದಾಖಲಾರ್ಹ ಸಂಗತಿ. ಈ ಎಲ್ಲ ತಾಲೂಕುಗಳು ಸಾಗರಕ್ಕೆ ೩೦ ರಿಂದ ೩೫ ಕಿ.ಮೀ.ನೊಳಗೆ ಕ್ರಮಿಸಬಹುದು. ಶಿವಮೊಗ್ಗ ಜಿಲ್ಲಾ ಕೇಂದ್ರ ತಲುಪಲು ೭೦ರಿಂದ ೮೦ ಕಿ.ಮೀ. ಹೋಗಬೇಕಾಗುತ್ತದೆ. ೩ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಾಗರದಲ್ಲಿ ೩ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಮೈಸೂರು, ಬೆಂಗಳೂರಿಗೆ ರೈಲ್ವೆ ಸಂಪರ್ಕ ಹೊಂದಿದೆ. ಸುಸಜ್ಜಿತ ಆಸ್ಪತ್ರೆ, ಜಿಲ್ಲಾ ಸತ್ರ ನ್ಯಾಯಾಲಯ, ತಾಯಿಮಗು ಆಸ್ಪತ್ರೆ, ಪ್ರಥಮ ದರ್ಜೆ ಕಾಲೇಜು, ಪದವಿಪೂರ್ವ ಕಾಲೇಜು ಎಲ್ಲವನ್ನೂ ಹೊಂದಿದೆ. ಈ ಹಿನ್ನೆಲೆಯಲ್ಲಿ ಸಾಗರ, ಸೊರಬ, ಸಿದ್ದಾಪುರ, ಹೊಸನಗರ, ಶಿಕಾರಿಪುರ ಸೇರಿ ೫ ತಾಲೂಕುಗಳನ್ನು ಒಳಗೊಂಡು ಕೇಂದ್ರ ಸ್ಥಾನದಲ್ಲಿರುವ ಸಾಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡಲು ಬೇಳೂರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.