ಮಲೆಮಹದೇಶ್ವರ ಬೆಟ್ಟದಲ್ಲಿ ಗೋಪೂಜೆ

| Published : Jan 16 2025, 12:47 AM IST

ಸಾರಾಂಶ

ಹನೂರು ಮಲೆಮಹದೇಶ್ವರ ಬೆಟ್ಟದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಸುಗಳಿಗೆ ಸಾಲೂರು ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಪೂಜೆ ಜರುಗಿತು.

ಕನ್ನಡಪ್ರಭ ವಾರ್ತ ಹನೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಂಜಾನೆ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸನ್ನಿಧಾನದಲ್ಲಿ ಗೋಪೂಜೆ ಹಾಗೂ ಆಲಂಬಾಡಿ ಬಸವೇಶ್ವರನಿಗೆ ವಿಶೇಷ ಪೂಜೆ ಜರುಗಿತು.

ಮಲೆಮಹದೇಶ್ವರ ಬೆಟ್ಟದಲ್ಲಿ ಸ್ವಾಮಿಯ ಅಭಿಷೇಕದ ಸುಪ್ರಭಾತ ಸೇವೆಯಲ್ಲಿ ಶ್ರೀ ಕ್ಷೇತ್ರದ ಸಂಪ್ರದಾಯದಂತೆ ಆಲಂಬಾಡಿ ಬಸವೇಶ್ವರನಿಗೆ, ತಳಿರು-ತೋರಣಗಳಿಂದ ವಿದ್ಯುತ್‌ ದೀಪಗಳಿಂದ ಅಲಂಕರಿಸಿ, ಸಾಲೂರುಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ, ಬೇಡಗಂಪಣದ ಅರ್ಚಕರಿಂದ, ಚಿಕ್ಕ ಪಾಲು ದೊಡ್ಡಪಾಲು ತಂಬಡಿಗಳಿಂದ, ದೇವಸ್ಥಾನದ ಆಗಮಿಕರು, ಆಲಂಬಾಡಿ ಬಸವೇಶ್ವರನಿಗೆ ವಿಜೃಂಭಣೆಯಿಂದ ದೂಪ ದೀಪ ನೈವೇದ್ಯಗಳೊಂದಿಗೆ ಮಂಗಳವಾದ್ಯಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಮಹದೇಶ್ವರ ಸನ್ನಿಧಾನದಲ್ಲಿ ವಿವಿಧ ಪುಷ್ಪಗಳಿಂದ ಅಲಂಕಾರ ಹಾಗೂ ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು, ಮುಂಜಾನೆ 4 ಗಂಟೆಯಿಂದ 6 ಗಂಟೆಯ ನಡುವಿನ ಅವಧಿಯಲ್ಲಿ ಲಿಂಗರೂಪ ಮಹಾದೇಶ್ವರ ಸ್ವಾಮಿಗೆ ಅಭಿಷೇಕ ದೂಪ ದೀಪ ದಾರತಿ ವಿಶೇಷ ಪೂಜೆ ನೆರವೇರಿಸಲಾಯಿತು. ವರ್ಷವಿಡೀ ಜಮೀನುಗಳಲ್ಲಿ ರೈತರೊಂದಿಗೆ ಹೆಗಲು ಕೊಟ್ಟು ದುಡಿದ ರಾಸುಗಳ ಮೈ ತೊಳೆದು, ಸಿಂಗಾರ ಮಾಡಿ, ಕೊಂಬುಗಳಿಗೆ ಬಣ್ಣ ಬಳಿದು, ಹೂವಿನ ಹಾರ ಹಾಕಿ ಶೃಂಗಾರಗೊಳಿಸಿ, ಸಾಲೂರುಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ಸ್ವಾಮಿ ದರ್ಶನ ಪಡೆದರು. ಸಂಕ್ರಾಂತಿಯ ವಿಶೇಷವಾಗಿ ಶೇಂಗಾ ಕಡಲೆ, ಎಳ್ಳು ಬೆಲ್ಲ, ಕೊಬ್ಬರಿ, ಮಿಶ್ರಿತವಾಗಿ ನೀಡಲಾಯಿತು.

ಮಲೆಮಹದೇಶ್ವರ ಬೆಟ್ಟದಲ್ಲಿ ಧನುರ್ಮಾಸದ ವಿಶೇಷ ಪೂಜೆ ಸುಮಾರು 30 ದಿನಗಳಿಂದಲೂ ವಿಶೇಷವಾಗಿ ಸೂರ್ಯೋದಯಕ್ಕೂ ಮುನ್ನಾ ಮಹದೇಶ್ವರ ಸ್ವಾಮಿಗೆ ವಿಶೇಷ ಕಾಡಿನ ಖಾದ್ಯ ನೈವೇದ್ಯ, ಭಜನೆಯ ಮೂಲಕ ವಾಹನೋತ್ಸವ ಸೇವೆಗಳು ನಿರಂತರವಾಗಿ ನಡೆಯುವುದು. ಈ ಸಮಯದಲ್ಲಿ ಎಪ್ಪತ್ತೇಳು ಮಲೆ ತಪೋ ನಲೆಗಳಲ್ಲಿಯು ಸಹ ತವಸರೆ, ಕಂಬದಬೂಳಿ, ಇಂಡಿ ಬಸವೇಶ್ವರ, ಕಾರಯ್ಯ ಮತ್ತು ಬಿಲ್ಲಯ್ಯ, ಪಾದದರೆ, ಅನುಮಲೆ,ಜೇನುಮಲೈ, ಬಳೆ ಕಲ್ಲುಬಸವೇಶ್ವರ, ಕೊಡಗಲ್ಲು ಮಾದಪ್ಪ, ಜಡೇರುದ್ರ ಸ್ವಾಮಿ, ರಂಗಸ್ವಾಮಿಯ ಪರು ಸೇವೆಯನ್ನು ಪೂರ್ಣ ಮಾಡಿ ಕೊನೆಯಲ್ಲಿ 3 ದಿನಗಳ ಸುಗ್ಗಿಯ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುವ ಮೂಲಕ ಧನುರ್ಮಾಸ ಮುಕ್ತಾಯ ಜೊತೆ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ ಜರುಗಿತು.