ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಗೌಂಡಿ ಕೆಲಸ ಮಾಡುವವನ ಮಗಳು ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.ಹೌದು. ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ನಿವಾಸಿ ಸೆಂಟ್ರಿಂಗ್ (ಗೌಂಡಿ ಕೆಲಸ) ಮಾಡುತ್ತಿರುವ ಮಹ್ಮದರಫಿ ಇಟಗಿ ಎಂಬಾತನ ಮಗಳು ಸನಾ ಇಟಗಿ ಇತ್ತೀಚಿಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 592 ಅಂಕ ಗಳಿಸುವ ಮೂಲಕ (ಶೇ. 94.72) ಶಾಲೆಗೆ ಪ್ರಥಮ ಸ್ಥಾನದಲ್ಲಿ ಬಂದಿದ್ದಾಳೆ.
ಒಕ್ಕಲುತನ ಕುಟುಂಬದ ಹಿನ್ನೆಲೆಯಲ್ಲಿ ಗಣೇಶ ರಾಠೋಡ ಎಂಬ ವಿದ್ಯಾರ್ಥಿಯು 625ಕ್ಕೆ 589 ಅಂಕ ಪಡೆದುಕೊಂಡು (ಶೇ. 94.24) ಪ್ರತಿಶತ ಪಡೆಯುವ ಮೂಲಕ ಶಾಲೆಗೆ ದ್ವಿತೀಯ ಸ್ಥಾನದಲ್ಲಿ ಸಾಧನೆ ಮಾಡಿದ್ದಾನೆ.ಈ ಪ್ರೌಢಶಾಲೆಯಲ್ಲಿ ಒಟ್ಟು 183 ವಿದ್ಯಾರ್ಥಿಗಳ ಪೈಕಿ 149 ಉತ್ತೀರ್ಣರಾಗಿದ್ದು, ಒಟ್ಟು ಶಾಲೆಯ ಫಲಿತಾಂಶ ಶೇ. 81.4 ಪ್ರತಿಶತವಾಗಿದೆ.
ಡಿಸ್ಟಿಂಕ್ಷನ್ 6, ಪ್ರಥಮ ಶ್ರೇಣಿ 58, ದ್ವಿತೀಯ ಶ್ರೇಣಿ 38, ತೃತೀಯ ಶ್ರೇಣಿ 46 ವಿದ್ಯಾರ್ಥಿಗಳು ಪಾಸಾಗಿದ್ದು, 35 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ನಮ್ಮ ಶಾಲೆಯ ವಿದ್ಯಾರ್ಥಿನಿ ಸನಾ ಇಟಗಿ ಹಾಗೂ ಗಣೇಶ ರಾಠೋಡ ಉತ್ತಮ ಸಾಧನೆಗೈದಿದ್ದು, ಈ ಇಬ್ಬರು ಬಡ ಕುಟುಂಬದಿಂದ ಬಂದಿರುವ ಮಕ್ಕಳು ಇವರ ಮುಂದಿನ ಭವಿಷ್ಯ ಉಜ್ವಲಗೊಳ್ಳಲಿ ಎಂದು ಆಶಿಸುವೆ. ಕಳೆದ ವರ್ಷಕ್ಕಿಂತ ಈ ವರ್ಷದ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮವಾಗಿದ್ದು, ಶಿಕ್ಷಕರ ಪರಿಶ್ರಮದಿಂದ ಈ ಸಾಧನೆಯಾಗಿದೆ ಎಂದು ಉಪಪ್ರಾಂಶುಪಾಲ ಡಿ. ಸುರೇಶ ತಿಳಿಸಿದ್ದಾರೆ.
ನಾನು ಸುಮಾರು ಆರರಿಂದ ಎಂಟು ತಾಸುಗಳ ಕಾಲ ಅಭ್ಯಾಸ ಮಾಡುತ್ತಿದ್ದೆ, ಪರೀಕ್ಷಾ ಸಮಯದಲ್ಲಿ ಬೆಳಗ್ಗೆ 4 ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದೆ. ಶಿಕ್ಷಕರ ಮಾರ್ಗದರ್ಶನ ಹಾಗೂ ನಮ್ಮ ತಂದೆ ತಾಯಿಯವರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ವಿದ್ಯಾರ್ಥಿನಿ ಸನಾ ಇಟಗಿ ತಿಳಿಸಿದ್ದಾರೆ.