ಸಾರಾಂಶ
ಚಾಮರಾಜನಗರ ತಾಲೂಕಿನ ಆಲೂರಿನಲ್ಲಿ ಶನಿವಾರ ಗೌರಮ್ಮ ಅವರಿಗೆ ಸಂಸದ ಸುನೀಲ್ ಬೋಸ್ ಅಂತಿಮ ನಮನ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದ ಮಾಜಿ ರಾಜ್ಯಪಾಲರಾದ ದಿ.ಬಿ.ರಾಚಯ್ಯ ಅವರ ಪತ್ನಿ ಗೌರಮ್ಮ ಅವರ ಅಂತ್ಯಕ್ರಿಯೆ ತಾಲೂಕಿನ ಆಲೂರು ಗ್ರಾಮದಲ್ಲಿ ಶನಿವಾರ ಅಂತಿಮ ವಿಧಿವಿಧಾನಗಳೊಂದಿಗೆ ನಡೆಯಿತು.ಆಲೂರು ಗ್ರಾಮದ ಹೊರವಲಯದಲ್ಲಿರುವ ಬಿ.ರಾಚಯ್ಯ ಅವರ ಸ್ಮಾರಕ ಭವನದ ಚಿರಶಾಂತಿಧಾಮದಲ್ಲಿರುವ ಪತಿ ಬಿ.ರಾಚಯ್ಯ ಅವರ ಸಮಾಧಿಯ ಸಮೀಪವೇ ಮತ್ತೊಂದು ಸಮಾಧಿ ನಿರ್ಮಿಸಿ ಶನಿವಾರ ಮಧ್ಯಾಹ್ನ ಗೌರಮ್ಮ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗೌರಮ್ಮ ಪುತ್ರರಾದ ಶಾಸಕ ಎ.ಆರ್.ಕೃಷ್ಣಮೂರ್ತಿ, ಎ.ಆರ್.ಬಾಲರಾಜು, ಸೊಸೆಯಂದಿರು, ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಸಂಬಂಧಿಕರು, ಗ್ರಾಮಸ್ಥರು, ಹಿತೈಷಿಗಳು ಕಂಬಿನಿ ಮಿಡಿದು ಅಂತಿಮ ದರ್ಶನ ಪಡೆದರು. ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದ ಗೌರಮ್ಮ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ರಾತ್ರಿ ಮೈಸೂರಿನಿಂದ ಆಲೂರು ಗ್ರಾಮಕ್ಕೆ ಆ್ಯಂಬುಲೆನ್ಸ್ ವಾಹನದ ಮೂಲಕ ತರಲಾಯಿತು. ಗ್ರಾಮದಲ್ಲಿರುವ ಅವರ ಮನೆಯ ಮುಂಭಾಗ ಗೌರಮ್ಮ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ರಾತ್ರಿ ಹಾಗೂ ಬೆಳಗ್ಗೆ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ಹಲವು ಕಡೆಗಳಿಂದ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳು, ಸಂಘಟನೆಗಳ ಮುಖಂಡರು, ಹೋರಾಟಗಾರರು, ಬಿ.ರಾಚಯ್ಯ ಕುಟುಂಬದ ಸಂಬಂಧಿಕರು ಆಗಮಿಸಿ ಪಾರ್ಥಿವ ಶರೀರದ ಮೇಲೆ ಹೂಹಾರ ಇರಿಸಿ ಗೌರವ ಸೂಚಿಸಿ ಅಂತಿಮ ದರ್ಶನ ಪಡೆದರು. ಬೆಳಗ್ಗೆ ೧೧ ಗಂಟೆ ವೇಳೆಯಲ್ಲಿ ಪಾರ್ಥಿವ ಶರೀರವನ್ನು ಗ್ರಾಮದ ಹೊರವಲಯದ ಬಿ.ರಾಚಯ್ಯ ಅವರ ಸ್ಮಾರಕ ಭವನದಲ್ಲಿರುವ ಚಿರಶಾಂತಿಧಾಮಕ್ಕೆ ಸಾಗಿಸಲಾಯಿತು. ಗೌರಮ್ಮ ಅವರ ಪುತ್ರ ಶಾಸಕ ಎ.ಆರ್.ಕೃಷ್ಣಮೂರ್ತಿ ಅಂತಿಮ ಕೈಂಕರ್ಯಗಳನ್ನು ನೆರವೇರಿಸಿದರು. ನಂತರ ಪಾರ್ಥಿವ ಶರೀರವನ್ನು ಸಮಾಧಿಯೊಳಗೆ ಇರಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಶುಕ್ರವಾರ ರಾತ್ರಿ ಸುತ್ತೂರಿನ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶಾಸಕರಾದ ದರ್ಶನ್ ಧ್ರುವನಾರಾಯಣ್ ಆಗಮಿಸಿ ಅಂತಿಮ ದರ್ಶನ ಪಡೆದರು. ಶನಿವಾರ ಬೆಳಗ್ಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್‌ಬೋಸ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶಪ್ರಸಾದ್, ಅನಿಲ್ ಚಿಕ್ಕಮಾಧು, ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ತಿಮ್ಮಯ್ಯ, ಮಾಜಿ ಶಾಸಕ ಎಸ್.ಬಾಲರಾಜ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ತಾಪಂ ಮಾಜಿ ಸದಸ್ಯ ಬಿ.ಕೆ.ರವಿಕುಮಾರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.