ಸಾರಾಂಶ
ಗೌರಿ ಗಣೇಶ ಹ ಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಗಲ್ಲಿ ಗಲ್ಲಿಯಲ್ಲೂ ಮೂಷಿಕ ವಾಹನನ ಪ್ರತಿಷ್ಠಾಪಿಸಲು ಪುರುಷರು ಸಜ್ಜಾಗಿದ್ದರೆ, ಅತ್ತ ಗೌರಿ ಹಬ್ಬ ಆಚರಿಸಲು ಮಹಿಳೆಯರು ಸಿದ್ಧರಾಗಿದ್ದಾರೆ.
ಮಲ್ಲಯ್ಯ ಪೋಲಂಪಲ್ಲಿ
ಶಹಾಪುರ : ಗೌರಿ ಗಣೇಶ ಹ ಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಗಲ್ಲಿ ಗಲ್ಲಿಯಲ್ಲೂ ಮೂಷಿಕ ವಾಹನನ ಪ್ರತಿಷ್ಠಾಪಿಸಲು ಪುರುಷರು ಸಜ್ಜಾಗಿದ್ದರೆ, ಅತ್ತ ಗೌರಿ ಹಬ್ಬ ಆಚರಿಸಲು ಮಹಿಳೆಯರು ಸಿದ್ಧರಾಗಿದ್ದಾರೆ.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಬ್ಬದ ತಯಾರಿ ಜೋರಾಗಿದ್ದು, ಕಳೆದ ವರ್ಷ ಇತರೆ ಹಬ್ಬಗಳಂತೆ ಗೌರಿ ಗಣೇಶ ಹಬ್ಬವು ಕೂಡ ಬರಗಾಲದ ಛಾಯೆಯಿಂದ ಮಂಕಾಗಿತ್ತು. ಆದರೆ, ಈ ಬಾರಿ ಮಳೆ, ಬೆಳೆ ಚೆನ್ನಾಗಿ ಆದ ಪರಿಣಾಮ ಅದ್ಧೂರಿಯಾಗಿ ಗಣೇಶೋತ್ಸವ ಆಚರಣೆಗೆ ಎಲ್ಲೆಡೆ ಸಿದ್ಧತೆ ಆರಂಭವಾಗಿದೆ. ಬೆಲೆ ಏರಿಕೆ ಬಿಸಿಯ ನಡುವೆ ಜನರಲ್ಲಿ ಬತ್ತದ ಉತ್ಸಾಹ ಕಂಡು ಬರುತ್ತಿದೆ.
ನಗರದ ಮಾರುತಿ ರಸ್ತೆ, ಕಿರಾಣ ಬಜಾರ್, ಬಸವೇಶ್ವರ ಸರ್ಕಲ್, ಹಳೆ ಬಸ್ ನಿಲ್ದಾಣ ರಸ್ತೆ ಬದಿಯಲ್ಲಿ ಹೂವು ಹಣ್ಣು ಗಣೇಶ್ ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಹಬ್ಬದ ಚಟುವಟಿಕೆಗಳು ಚುರುಕುಗೊಂಡಿವೆ. ವರ್ಷದಿಂದ ವರ್ಷಕ್ಕೆ ಗಣೇಶ ಹಬ್ಬ ಮೆರುಗು ಪಡೆಯುತ್ತಿದ್ದು, ಗ್ರಾಮೀಣ ಭಾಗಗಳಿಂದಲೂ ಯುವಕರು ನಗರಕ್ಕೆ ಆಗಮಿಸಿ ಅಲಂಕಾರಿಕ ವಸ್ತು ಖರೀದಿಸುವುದು ಕಂಡು ಬರುತ್ತಿದೆ. ನಗರದ ಪ್ರಮುಖ ಬೀದಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಗಣೇಶನ ಮೂರ್ತಿಗಳು ಜನರ ಗಮನ ಸೆಳೆಯುತ್ತಿವೆ.
ಬೆಲೆ ಏರಿಕೆ ಬಿಸಿ ತಟ್ಟಲಿದೆ: ಸಣ್ಣ ಗಣಪತಿ ಮೂರ್ತಿಗಳಿಗೆ 100-200 ರು.ಗಳು ಬೆಲೆ ಏರಿಕೆ ಕಂಡರೆ ದೊಡ್ಡ ದೊಡ್ಡ ಗಣೇಶ ಮೂರ್ತಿಗಳಿಗೆ 5 ರಿಂದ 10 ಸಾವಿರ ರು.ಗಳವರೆಗೆ ಏರಿಕೆಯಾಗಿದೆ. 10 ಸಾವಿರಕ್ಕೆ ಸಿಗುವ ಗಣೇಶನ ಮೂರ್ತಿ 15 ಸಾವಿರ ರು.ಗಳಿಗೆ ಸಿಗುತ್ತಿದೆ.
ಹೂವು, ಹಣ್ಣುಗಳ ದರ ವಿವರ: ಕನಕಾಂಬರ ಕೆಜಿಗೆ 3000, ಮಲ್ಲಿಗೆ ಕೆಜಿಗೆ 600, ಗುಲಾಬಿ ಕೆಜಿಗೆ 250, ಸೇವಂತಿಗೆ ಕೆಜಿಗೆ 180, ಸುಗಂಧರಾಜ ಕೆಜಿಗೆ 240, ಕಾಕಡ ಕೆಜಿಗೆ 240 ರು.ಗಳ ದರ ಇದೆ. ಅದರಂತೆ ಹಣ್ಣುಗಳ ದರವು ಸೇಬು ಕೆಜಿಗೆ 180 ರಿಂದ 200 ರು.ಗಳು ದಾಳಿಂಬೆ 30 ರಿಂದ 40 ರು.ಗಳಿಗೆ ಒಂದು, ಬಾಳೆ 1 ಡಜನ್ ಗೆ 60, ಪೇರಲ್ ಹಣ್ಣು ಕೆಜಿಗೆ 120, ಚಿಕ್ಕು ಹಣ್ಣು ಕೆಜಿಗೆ 120, ನಿಂಬೆಹಣ್ಣು ಒಂದಕ್ಕೆ 5 ರಿಂದ 10 ರು. ಇದೆ.
ಗಣೇಶ್ ವಿಗ್ರಹ ತಯಾರಿಕೆ: ನಗರಕ್ಕೆ ಗುಜರಾತ್ ರಾಜಸ್ಥಾನ ಸೇರಿದಂತೆ ಇತರ ರಾಜ್ಯದಿಂದ ಮೂರ್ತಿ ಮಾರಾಟಕ್ಕೆ ವ್ಯಾಪಾರಿಗಳು ಆಗಮಿಸಿ ಇಲ್ಲೇ ಮೂರ್ತಿ ತಯಾರಿಸಿ ಮಾರಾಟ ಮಾಡುತ್ತಾರೆ. ಇನ್ನು ಕೆಲವರು ಮಹಾರಾಷ್ಟ್ರದ ಸೋಲಾಪುರ, ಅಕ್ಕಲಕೋಟ, ಹುಸ್ಮಾನಬಾದ್ ಹಾಗೂ ಹೈದ್ರಾಬಾದ್ ದಿಂದ ತಂದು ಮಾರಾಟ ಮಾಡುತ್ತಾರೆ.
ಬೇಡಿಕೆಗೆ ತಕ್ಕಂತೆ ಗಣೇಶ್ ಮೂರ್ತಿ ತಯಾರಿಕೆ: ಪೂರ್ತಿ ತಯಾರಿಕೆಗೆ ಬೇಕಾಗುವ ಅಗತ್ಯ ಕಚ್ಚಾ ವಸ್ತುಗಳು ಬೆಲೆ ಗಗನಕ್ಕೆ ಏರಿರುವುದರಿಂದ, ಕಳೆದ ವರ್ಷಕ್ಕಿಂತ ಈ ವರ್ಷ ಬೇಡಿಕೆ ಕುಸಿದಿದೆ. ದೊಡ್ಡ ಗಾತ್ರದ ಗಣೇಶ್ ಗಿಂತ ಚಿಕ್ಕ ಗಾತ್ರದ ಗಣೇಶ್ ವಿಗ್ರಹಗಳನ್ನೆ ಮಾರಾಟಗಾರರು ತೆಗೆದುಕೊಂಡು ಹೋಗುತ್ತಿದ್ದಾರೆ. ಗಣೇಶ ಚತುರ್ಥಿ ಹತ್ತಿರವಾಗುತ್ತಿದ್ದಂತೆ ನಗರ ಸೇರಿದಂತೆ ತಾಲೂಕಿನಲ್ಲಿ ಅತ್ಯಂತ ಹಬ್ಬದ ಸಂಭ್ರಮಾಚರಿಸಲು ತಯಾರಿ ನಡೆದಿದ್ದು, ಗಣೇಶ ಮೂರ್ತಿಗೆ ಭರ್ಜರಿ ಬೇಡಿಕೆ ಶುರುವಾಗಿದೆ. ನಗರದ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪನೆಗೆ ಯುವಕರ ಗುಂಪು ಉತ್ಸಾಹದಿಂದ ತೊಡಗಿಸಿಕೊಂಡಿದ್ದು, ಹಬ್ಬದ ಚಟುವಟಿಕೆಗಳು ಚುರುಕುಗೊಂಡಿವೆ. ಗಣೇಶ್ ಮೂರ್ತಿ ಮುಂಗಡ ಬುಕ್ ಮಾಡುವುದು ಕಂಡು ಬರುತ್ತಿದೆ. ನಗರದ ಪ್ರಮುಖ ಬೀದಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಗಣೇಶನ ಮೂರ್ತಿಗಳು ಜನರ ಗಮನ ಸೆಳೆಯುತ್ತಿವೆ.
------
ಕೋಟ್ -1: ಮಹಾರಾಷ್ಟ್ರದ ಅಕ್ಕಲಕೋಟ, ಸೋಲಾಪುರ ಹಾಗೂ ಹುಸ್ಮಾನಬಾದ್ ದಿಂದ ಗಣೇಶ್ ಮೂರ್ತಿ ತರುತ್ತೇನೆ. 20 ವರ್ಷಗಳಿಂದ ಈ ಉದ್ಯೋಗ ಮಾಡುತ್ತಿದ್ದೇನೆ. ಆದರೆ, ಈ ವರ್ಷ ಗಣೇಶ್ ಮೂರ್ತಿ ಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದರಿಂದ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಗಣೇಶ್ ವಿಗ್ರಹಗಳನ್ನು ತರಿಸಲಾಗಿದೆ. ಬೆಲೆ ಏರಿಕೆ ಹಾಗೂ ಸರ್ಕಾರದ ಕಠಿಣ ನಿಯಮದಿಂದಾಗಿ ವ್ಯಾಪಾರ ಕುಂಠಿತವಾಗಿದೆ.
- ರಾಜಶೇಖರ್ ಯಾಳಗಿ, ಗಣೇಶ್ ಮೂರ್ತಿ ವ್ಯಾಪಾರಿ.
------
ಕೋಟ್ -2: ಕಳೆದ ವರ್ಷ ಮತ್ತು ಈ ವರ್ಷದ ಶ್ರಾವಣ ಮಾಸದ ಪೂಜೆಗೆ ಮತ್ತು ಗೌರಿ ಗಣೇಶ ಹಬ್ಬಕ್ಕೆ ಹೂಗಳ ಬೆಲೆ ಗಗನಕ್ಕೇರಿದೆ. ಹೂವು ತೆಗೆದುಕೊಳ್ಳುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬೇರೆ ಕಡೆಯಿಂದ ಹೂವು ತರಿಸುತ್ತೇವೆ. ಹೂವು ಮಾರಿ ಅವರಿಗೆ ಹಣ ಕಟ್ಟಲು ಕಷ್ಟವಾಗುತ್ತಿದೆ.
- ಅಮೃತಾ ಹೂಗಾರ, ಹೂವಿನ ವ್ಯಾಪಾರಿ.