ಸುವರ್ಣ ಸಂಭ್ರಮದಲ್ಲಿ ಸರ್ಕಾರಿ ಆರ್ಟ್‌ ಗ್ಯಾಲರಿ!

| Published : Apr 18 2025, 12:44 AM IST

ಸುವರ್ಣ ಸಂಭ್ರಮದಲ್ಲಿ ಸರ್ಕಾರಿ ಆರ್ಟ್‌ ಗ್ಯಾಲರಿ!
Share this Article
  • FB
  • TW
  • Linkdin
  • Email

ಸಾರಾಂಶ

ಈ ಗ್ಯಾಲರಿಗೆ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಇಡೀ ಕಲಾ ಶಾಲೆಯ ಆವರಣ ಹತ್ತಾರು ಚಿತ್ರಕಲೆಗಳಿಂದ ಕಂಗೊಳಿಸುತ್ತಿದೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ಆವರಣದ ಗೋಡೆಗಳಲ್ಲಿ ಸುಂದರವಾದ ಕಲಾಕೃತಿಗಳನ್ನು ಬಿಡಿಸಿದ್ದಾರೆ.

ಬಸವರಾಜ ಹಿರೇಮಠ ಧಾರವಾಡ

ಸ್ಥಳೀಯವಾಗಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು 1975ರಲ್ಲಿ ಶುರುವಾದ ಉತ್ತರ ಕರ್ನಾಟಕದ ಏಕೈಕ ಸರ್ಕಾರಿ ಚಿತ್ರಕಲಾ ಶಾಲೆ (ಸರ್ಕಾರಿ ಆರ್ಟ್ ಗ್ಯಾಲರಿ), ಇದೀಗ 50 ವರ್ಷಗಳ ಸುವರ್ಣ ಸಂಭ್ರಮ ಆಚರಿಸಲು ಸನ್ನದ್ಧವಾಗಿದೆ.

ಸರ್ಕಾರಿ ಆರ್ಟ್‌ ಗ್ಯಾಲರಿಗೂ ಮುಂಚೆ ಧಾರವಾಡದಲ್ಲಿ ಹಾಲಭಾವಿ ಸ್ಕೂಲ್‌ ಆಫ್‌ ಆರ್ಟ್‌ ಗ್ಯಾಲರಿಯ ಸಭಾಭವನ ಹಾಗೂ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿರುವ ಮಿಣಜಗಿ ಆರ್ಟ್‌ ಗ್ಯಾಲರಿಗಳಿದ್ದವು. ಆದಾಗ್ಯೂ ಸ್ಥಳೀಯ ಹಿರಿಯ ಕಲಾವಿದರ ಬೇಡಿಕೆಯ ಅನ್ವಯ 1975ರಲ್ಲಿ ಇದು ಆರಂಭವಾಗಿದ್ದು, ಇಷ್ಟು ವರ್ಷಗಳ ಕಾಲ ನೂರಾರು ಚಿತ್ರಕಲಾವಿದರ ಚಿತ್ರಗಳ ಪ್ರದರ್ಶನಕ್ಕೆ ಈ ಗ್ಯಾಲರಿ ವೇದಿಕೆಯಾಗಿದೆ.

ಸುಂದರ ಕಲಾಕೃತಿಗಳು:

ಈಗ ಈ ಗ್ಯಾಲರಿಗೆ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಇಡೀ ಕಲಾ ಶಾಲೆಯ ಆವರಣ ಹತ್ತಾರು ಚಿತ್ರಕಲೆಗಳಿಂದ ಕಂಗೊಳಿಸುತ್ತಿದೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ಆವರಣದ ಗೋಡೆಗಳಲ್ಲಿ ಸುಂದರವಾದ ಕಲಾಕೃತಿಗಳನ್ನು ಬಿಡಿಸಿದ್ದಾರೆ. ಪಿಯುಸಿ ನಂತರ ನಾಲ್ಕು ವರ್ಷಗಳ ಕಾಲ ಬ್ಯಾಚುಲರ್‌ ಆಫ್‌ ವಿಶುವಲ್‌ ಆರ್ಟ್‌ ಕೋರ್ಸ್‌ ಪೇಟಿಂಗ್‌ ಮೇಲೆ ನಡೆಯುತ್ತಿದ್ದು, 71 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಆರ್ಟ್ ಗ್ಯಾಲರಿಯ ಆವರಣ ಪ್ರವೇಶ ಮಾಡಿದರೆ ಒಳಾವರಣದ ಕಾಂಪೌಂಡ್ ಹಾಗೂ ಕಟ್ಟಡದ ಗೋಡೆಗಳ ಮೇಲೆ ವಿದ್ಯಾರ್ಥಿಗಳೇ ರಚಿಸಿದ ಭಾರತೀಯ ಸಾಂಪ್ರದಾಯಕ ಕಲೆಗಳು ಹಾಗೂ ಜಾನಪದ ಚಿತ್ರಗಳಿವೆ. ಇವು ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯ ಪ್ರತೀಕವಾಗಿವೆ. ಈ ಕಲಾಕೃತಿಗಳು ದೇಸಿ ಸಂಪ್ರದಾಯ, ಸ೦ಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುತ್ತಿವೆ. ವಿಶೇಷವಾಗಿ ಭಾರತೀಯ ದೇಶಿಯ, ಸಾಂಪ್ರದಾಯಿಕ ಕಲೆಗಳಾದ ಕಿರುರೂಪ ಚಿತ್ರಗಳು, ಬಿತ್ತಿ ಚಿತ್ರಗಳ, ಜನಪದ ಚಿತ್ರಗಳು ಹೀಗೆ ಮುಂತಾದ ಕಲಾಪ್ರಕಾರಗಳಾದ ಕಾಂಗ್ರಾ, ಬಸೋಲಿ, ಮೇವಾರ, ವಿಜಯನಗರ, ಅಮ್ಮಿನಭಾವಿ, ನವಲಗುಂದ, ರಾಗಮಾಲಾ, ರಾಜಸ್ಥಾನಿ, ಪಟ ಚಿತ್ರಗಳು, ಕಿನ್ನಾಳ, ಮೈಸೂರು, ಅಜಂತಾ, ಕೋಟಾ, ವಾರ್ಲಿ, ಮಧುಬನಿ, ಪಹಾಡಿ, ಬುಂದಿ, ಮುಂತಾದ ಕಲೆಗಳು ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿ ನಿಂತಿವೆ ಎಂದು ಸರ್ಕಾರಿ ಚಿತ್ರಕಲಾ ಕಾಲೇಜಿನ ಮುಖ್ಯಸ್ಥ ಡಾ. ಬಸವರಾಜ್ ಕುರಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

50 ವರ್ಷಕ್ಕೆ ವಿವಿಧ ಕಾರ್ಯಕ್ರಮಗಳು:

ಈ ಬಿತ್ತಿ ಚಿತ್ರಗಳನ್ನು ರಚಿಸಲು ಆರ್ಟ್ ಪಾಯಿಂಟ್ ಮಾಲೀಕರಾದ ವಿಠ್ಠಲ್ ಬಸಲಗುಂದಿ ಆರ್ಥಿಕ ಸಹಕಾರ ನೀಡಿದ್ದು, ರೋಟರಿ ಕ್ಲಬ್‌, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಸಹ ಗ್ಯಾಲರಿ ಅಭಿವೃದ್ಧಿಗೆ ಕೈ ಜೋಡಿಸಿದೆ. ಗ್ಯಾಲರಿ ಇನ್ನೂ ಸುಧಾರಿಸಬೇಕು ಹಾಗೂ ಅಭಿವೃದ್ಧಿಗಾಗಿ ಹಳೆಯ ವಿದ್ಯಾರ್ಥಿಗಳ ಸಂಪರ್ಕ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಏಕೈಕ ಸರ್ಕಾರಿ ಚಿತ್ರಕಲಾ ಶಾಲೆ ಇದಾಗಿದ್ದು, 50ನೇ ವರ್ಷದ ಸಂದರ್ಭದಲ್ಲಿ ಸ್ಮರಣ ಸಂಚಿಕೆ ತರಲು ತೀರ್ಮಾನಿಸಿದ್ದೇವೆ. ಶಿಲ್ಪಗಳ ಉದ್ಯಾನವನ ನಿರ್ಮಾಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯೋಜಿಸಿದ್ದೇವೆ. ಕಾಲೇಜು ಶಿಕ್ಷಣ ಇಲಾಖೆ ಮೂಲಕ ಇತ್ತೀಚೆಗೆ ಅನುದಾನ ಬರುತ್ತಿದೆ. ಈ ಮೊದಲು ಪ್ರವೇಶಾತಿ ಹಣ ಬಳಸಿಕೊಳ್ಳಲು ಅವಕಾಶ ಇರಲಿಲ್ಲ. ಇದೀಗ ಅದಕ್ಕೂ ಅವಕಾಶ ಸಿಕ್ಕಿದೆ ಎಂದರು.

ಸಂಗೀತ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿರುವ ಧಾರವಾಡ ಚಿತ್ರಕಲೆಯಲ್ಲೂ ಒಂದು ಹೆಜ್ಜೆ ಮುಂದಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಸರ್ಕಾರಿ ಆರ್ಟ ಗ್ಯಾಲರಿಗೆ 50 ವರ್ಷಗಳು ತುಂಬಿದ್ದು, ಬರೀ ಸ್ಥಳೀಯ ಕಲಾವಿದರು ಮಾತ್ರವಲ್ಲದೇ ರಾಷ್ಟ್ರ, ಅಂತಾರಾಷ್ಟ್ರೀಯ ಕಲಾವಿದರನ್ನು ಇಲ್ಲಿ ಸೆಳೆಯುವ ಪ್ರಯತ್ನ ಬರುವ ದಿನಗಳಲ್ಲಿ ನಡೆಯಲಿ ಎಂಬುದೇ ಕಲಾವಿದರ ಆಶಯ.

ಟೈಪಿಂಗ್‌ ಸೆಂಟರ್‌ ಆಗಿತ್ತು ಗ್ಯಾಲರಿ:

ಸ್ಥಳೀಯವಾಗಿ ಚಿತ್ರಕಲಾವಿದರಿಗೆ ತಮ್ಮ ಕೃತಿಗಳ ಪ್ರದರ್ಶನಕ್ಕೆ ವ್ಯವಸ್ಥಿತ ಆರ್ಟ್ ಗ್ಯಾಲರಿ ಕೊರತೆ ಹಿನ್ನೆಲೆಯಲ್ಲಿ ಹಿರಿಯ ಕಲಾವಿದರಾದ ಎಂ.ಆರ್‌. ಬಾಳಿಕಾಯಿ, ಆರ್ಯ ಆಚಾರ್ಯ, ಮಧು ದೇಸಾಯಿ, ಲೋಹಿತ ನಾಯ್ಕರ ಸೇರಿದಂತೆ ಹಲವು ಕಲಾವಿದರು ಆಗಿನ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದು ಈ ಗ್ಯಾಲರಿ ಶುರು ಮಾಡಿದರು. ಈಗಿನ ಗ್ಯಾಲರಿ ಸ್ಥಳದಲ್ಲಿ ಟೈಪಿಂಗ್‌ ಸೆಂಟರ್‌ ಇತ್ತು.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಹಿಳಾ ಕಲಾವಿದರ ಶಿಬಿರ ಈ ಗ್ಯಾಲರಿಯಲ್ಲಿ ಮಾಡಲಾಗಿದೆ, ಕಲಾಕೃತಿಗಳನ್ನು ಹರಾಜು ಹಾಕಿ ಬಂದ ಹಣವನ್ನು ಗ್ಯಾಲರಿ ಅಭಿವೃದ್ಧಿಗೆ ನೀಡಲಾಗಿತ್ತು ಎಂದು ಹಿರಿಯ ಚಿತ್ರಕಲಾವಿದ ಗಾಯಿತ್ರಿ ದೇಸಾಯಿ ತಿಳಿಸಿದರು.