ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದರ ಜೊತೆಗೆ, ಸಾರ್ವಜನಿಕರ ಕುಂದುಕೊರತೆ ಆಲಿಸಿ ಇತ್ಯರ್ಥಪಡಿಸುವಲ್ಲಿ ಸರ್ಕಾರ ಪ್ರಜಾಸೇವಾ ಅಭಿಯಾನ/ಆಂದೋಲನ ಆರಂಭಿಸಿದ್ದು, ಈ ಅವಕಾಶವನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಕರೆ ನೀಡಿದ್ದಾರೆ.
ಮಡಿಕೇರಿ : ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದರ ಜೊತೆಗೆ, ಸಾರ್ವಜನಿಕರ ಕುಂದುಕೊರತೆ ಆಲಿಸಿ ಇತ್ಯರ್ಥಪಡಿಸುವಲ್ಲಿ ಸರ್ಕಾರ ಪ್ರಜಾಸೇವಾ ಅಭಿಯಾನ/ಆಂದೋಲನ ಆರಂಭಿಸಿದ್ದು, ಈ ಅವಕಾಶವನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಜಾಸೇವಾ ಇಲಾಖೆಗೆ ಶನಿವಾರ ವಿಜಯನಗರದ ಕೂಡ್ಲಗಿಯಲ್ಲಿ ಚಾಲನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿಯೂ ಪ್ರಜಾ ಸೇವಾ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. ಮೊದಲ ಮತ್ತು ಮೂರನೇ ಶನಿವಾರದಂದು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಶಾಸಕರ ನೇತೃತ್ವದಲ್ಲಿ ಆಯಾಯ ತಾಲೂಕು ಅಥವಾ ವಿಧಾನಸಭಾ ಕ್ಷೇತ್ರವಾರು ಪ್ರಜಾಸೇವಾ ಅಭಿಯಾನ ನಡೆಯಲಿದೆ. ಸಾರ್ವಜನಿಕರಿಗೆ ಸ್ಪಂದಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬಳಿಗೆ ಸರ್ಕಾರದ ಯೋಜನೆ, ಕಾರ್ಯಕ್ರಮಗಳು ತಲುಪಬೇಕು ಎಂಬುದು ಆಶಯವಾಗಿದೆ. ಹಾಗೆಯೇ ಸಾರ್ವಜನಿಕರ ಕುಂದುಕೊರತೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ನುಡಿದರು.
‘ಜನರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ. ಹಾಗಾಗಿ ಸಾರ್ವಜನಿಕರು ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳನ್ನು ಹುಡುಕಿಕೊಂಡು ಹೋಗಬಾರದು, ಜನರ ಬಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತೆರಳಿ ಸಮಸ್ಯೆ ಪರಿಹರಿಸುವುದು ಪ್ರಜಾ ಸೇವಾ ಆಂದೋಲನದ ಉದ್ದೇಶವಾಗಿದೆ ಎಂದರು.ಸರ್ಕಾರದ ಬಳಿ ಜನರು ಬರುವುದಲ್ಲ. ಜನರ ಬಳಿಗೆ ಸರ್ಕಾರ ತೆರಳುವುದು ಅತೀ ಮುಖ್ಯವಾಗಿದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಸ್ಪಂದಿಸುವುದು ಅತ್ಯಗತ್ಯವಾಗಿದೆ. ಜನರ ಬಳಿಗೆ ಆಡಳಿತ ಯಂತ್ರ ಕೊಂಡೊಯ್ಯುವಲ್ಲಿ ಸರ್ಕಾರ ಶ್ರಮಿಸಲಿದೆ ಎಂದರು. ಮಹಾತ್ಮ ಗಾಂಧೀಜಿಯವರ ಕನಸು ನನಸಾಗುವಲ್ಲಿ ಹಾಗೆಯೇ ಬಸವಣ್ಣ ಅವರ ಕಾಯಕವೇ ಕೈಲಾಸ ಎಂಬ ತತ್ವದಡಿ, ಅಂಬೇಡ್ಕರ್ ಅವರ ಸಮಾನತೆ ಅವಕಾಶಗಳು. ಹೀಗೆ ಎಲ್ಲಾವನ್ನು ಮನಗಂಡು ಸರ್ಕಾರ ಜನರ ಬಳಿಗೆ ಆಡಳಿತವನ್ನು ಕೊಂಡೊಯ್ಯುದು ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು ಆಗಿದೆ ಎಂದರು.
ಜನರಪರ ಕೆಲಸ: ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತದೆ. ಆದರೆ ಶಾಸಕಾಂಗ ಜೊತೆಗೆ ಕಾರ್ಯಾಂಗವು ಸಹ ಕೈಜೋಡಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ, ಆ ನಿಟ್ಟಿನಲ್ಲಿ ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗದ ಪಾತ್ರ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು.ಹಿಂದೆಯೂ ಸಹ ಜನಸಂಪರ್ಕ, ಜನಸ್ಪಂದನ ಹೆಸರಿನಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಭೆಗಳು ನಡೆಯುತ್ತಿದ್ದವು. ಆದರೆ ಕಾರ್ಯಾಂಗ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಎಂದರು.
ನ್ಯಾಯಾಲಯವು ಕುಟುಂಬದ ಆಸ್ತಿಯನ್ನು ರಾಜಿ ತೀರ್ಮಾನದಂತೆ ವಿಲೇವಾರಿ ಮಾಡಲು ಆದೇಶ ನೀಡಿದ್ದರೂ ಸಹ ಜಿಲ್ಲೆಯಲ್ಲಿ ಕೆಲಸ ಆಗದಿರುವುದು ಕಾರ್ಯಾಂಗದ ವಿಫಲತೆ ಎಂದು ಎ.ಎಸ್.ಪೊನ್ನಣ್ಣ ಅವರು ಕಿಡಿ ಕಾರಿದರು. ನ್ಯಾಯಾಲಯದ ಆದೇಶವಿದ್ದರೂ ಸಹ ಕೆಲಸ ಮಾಡದಿರುವುದು ಕಾರ್ಯಾಂಗ ಎಷ್ಟು ವಿಫಲವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಅಧಿಕಾರಿಗಳ ವಿರುದ್ದ ಚಾಟಿ ಬೀಸಿದರು. ಜಿಲ್ಲೆಯಲ್ಲಿ ಮಾನವ ಮತ್ತು ಆನೆ ಸಂಘರ್ಷ ನಿರಂತರವಾಗಿದೆ. ಆನೆ ತುಳಿತಕ್ಕೆ ಒಳಗಾದ ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸಿ ಗುಣಪಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತಾರೆ. ಅರಣ್ಯ ಇಲಾಖೆ ಮತ್ತು ಅಪೋಲೋ ಆಸ್ಪತ್ರೆ ನಡುವೆ ಒಪ್ಪಂದವಾಗಿದ್ದು, ಆ ಆಸ್ಪತ್ರೆಗೆ ದಾಖಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಿಂಜರಿಯುತ್ತಾರೆ. ಕಾರ್ಮಿಕರದ್ದು ಜೀವವಲ್ಲವೇ ಎಂದು ಎ.ಎಸ್.ಪೊನ್ನಣ್ಣ ಅವರು ಅಧಿಕಾರಿಗಳ ವಿರುದ್ದ ಸಿಟ್ಟಾದರು.ಜಿಲ್ಲೆಯ ಕೆಲವು ಹಾಡಿಗಳಿಗೆ ಇನ್ನೂ ಸಹ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ವಿದ್ಯುತ್ ಕಲ್ಪಿಸುವಂತೆ ಸೂಚಿಸಿದರೂ ಸಹ ವಿದ್ಯುತ್ ಒದಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಬಿಡುತ್ತಿಲ್ಲ. ಈ ರೀತಿ ಆದರೆ ಹಲವು ದಶಕಗಳಿಂದ ಕೊಡಗು ಜಿಲ್ಲೆಯಲ್ಲಿ ಬದುಕುತ್ತಿರುವವರ ಪಾಡೇನು ಎಂದರು.
ಶಾಸಕಾಂಗದ ಜೊತೆ ಕಾರ್ಯಾಂಗವು ಸಹ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಮಾತ್ರ ಜನರ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬಹುದು. ಅದು ಬಿಟ್ಟು ಶಾಸಕಾಂಗ ಮತ್ತು ಕಾರ್ಯಾಂಗವು ವಿರುದ್ಧ ದಿಕ್ಕಿನಲ್ಲಿ ಚಲಿಸಿದರೆ ತಳಮಟ್ಟದಲ್ಲಿ ಸಮಸ್ಯೆ ಬಗೆಹರಿಸುವುದಾದರೂ ಹೇಗೆ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಅವರು ಪ್ರಶ್ನಿಸಿದರು.ಸರ್ಕಾರ ಜನಸೇವಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಜನರ ಕಣ್ಣೇರು ಒರೆಸುವ ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗದ ಜೊತೆಯಾಗಿ ಕೆಲಸ ಮಾಡಬೇಕು. ಜನಪರ ಹಾಗೂ ಬಡವರ ಪರವಾಗಿ ಕೆಲಸ ಮಾಡಬೇಕು. ಸ್ವಲ್ಪವಾದರೂ ಸ್ವಾರ್ಥ ಬಿಟ್ಟು ಸಮಾಜಮುಖಿಯಾಗಿ ಯೋಚಿಸಬೇಕು ಎಂದರು. ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವಲ್ಲಿ ಮುಂದಾಗಬೇಕಿದೆ ಎಂದರು. ಕಂದಾಯ, ಅರಣ್ಯ ಮತ್ತಿತರ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಪರಿಹರಿಸುವಂತಾಗಬೇಕು ಎಂದರು. ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ರಸ್ತೆಗಳನ್ನು ಸರಿಪಡಿಸಬೇಕಿದೆ. ರಸ್ತೆ ಗುಂಡಿ ಮುಚ್ಚುವ ಕಾರ್ಯ ತುರ್ತಾಗಿ ಆಗಬೇಕಿದೆ ಎಂದರು.
‘ಜಿಲ್ಲೆಯಲ್ಲಿ ನಿವೇಶನ ಹಾಗೂ ವಸತಿ ರಹಿತ ಸಾಕಷ್ಟು ಕುಟುಂಬಗಳಿದ್ದು, ಇವರಿಗೆ ನಿವೇಶನ ಹಾಗೂ ವಸತಿ ಕಲ್ಪಿಸುವುದು ಪ್ರಥಮ ಆದ್ಯತೆಯಲ್ಲಿ ಆಗಬೇಕಿದೆ. ಲೈನ್‍ಮನೆಗಳಲ್ಲಿ ಹಾಗೂ ಆದಿವಾಸಿಗಳಿಗೆ ಸೂರು ಕಲ್ಪಿಸುವುದು ಅತೀ ಮುಖ್ಯವಾಗಿದೆ ಎಂದರು.ಜಿಲ್ಲೆಯಲ್ಲಿ ವಸತಿ ಹಾಗೂ ನಿವೇಶನ ರಹಿತರಿಗೆ ನಿವೇಶನ ಹಾಗೂ ವಸತಿ ಒದಗಿಸಲು ಉಪ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 20 ರಿಂದ 30 ಸಾವಿರ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಭರವಸೆ ನೀಡಿದ್ದಾರೆ. ಅದನ್ನು ಕಾರ್ಯಗತಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಡಾ.ಮಂತರ್ ಗೌಡ ಅವರು ಹೇಳಿದರು.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಶೀಲ್ದಾರರು, ತಾ.ಪಂ.ಇಒಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಸಭೆಯ ನಂತರ ಸಾರ್ವಜನಿಕರಿಂದ ಜಿಲ್ಲಾ ಉಸ್ತುವಾರಿ ಸಚಿವರು ಅಹವಾಲು ಸ್ವೀಕರಿಸಿದರು. ಸುಮಾರು 67 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 17 ಕ್ಕೂ ಹೆಚ್ಚು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಗೃಹ ಇಲಾಖೆಗೆ ಸಂಬಂಧಿಸಿದಂತೆ 5 ಕ್ಕೂ ಹೆಚ್ಚು ಅರ್ಜಿಗಳು, ಉಳಿದಂತೆ ಪೌರಾಡಳಿತ, ನಗರಾಭಿವೃದ್ಧಿ, ಸಮಗ್ರ ಗಿರಿಜನ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ ಮನವಿ ಸ್ವೀಕರಿಸಿ, ತಕ್ಷಣವೇ ಪರಿಹರಿಸಲಾಗುವುದು ಎಂದು ಸಚಿವರು ಹೇಳಿದರು. ಬಳಿಕ ಅಗ್ನಿ ಶಾಮಕ ಇಲಾಖಾ ವತಿಯಿಂದ ಸುರಕ್ಷತಾ ಕಿಟ್ ವಿತರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸುಕನ್ಯಾ ಸಮೃದ್ಧಿ ಯೋಜನೆಯ ಚೀಟಿ ವಿತರಿಸಿದರು. ಅಂತರ್ ಜಾತಿ ವಿವಾಹಿತರಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಿದರು.ಮಾಹಿತಿ ಮಳಿಗೆ: ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಜಾಸೇವಾ ಆಂದೋಲನಕ್ಕೆ ಚಾಲನೆಗೂ ಮೊದಲು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ವಿವಿಧ ಇಲಾಖೆಗಳಿಂದ ಏರ್ಪಡಿಸಲಾಗಿದ್ದ ಮಾಹಿತಿ ಮಳಿಗೆಯನ್ನು ಉದ್ಘಾಟಿಸಿದರು. ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ, ಶಾಸಕರಾದ ಡಾ.ಮಂತರ್ ಗೌಡ, ಇತರರು ಇದ್ದರು.
