ಸಾರಾಂಶ
ಆಯುರ್ವೇದ ಒಂದು ಪ್ರಾಚೀನ ಪದ್ಧತಿಯಾಗಿದ್ದು, ಇದರ ತತ್ವಗಳನ್ನು ಹೊಸ ತಂತ್ರಜ್ಞಾನ ಮತ್ತು ಸಂಶೋಧನೆಗಳಿಂದ ಹೊಸ ರೀತಿಯ ಚಿಕಿತ್ಸೆ ವಿಧಾನಗಳನ್ನು ಅಭಿವೃದ್ಧಿಪಡಿಸಬಹುದು.
ಕನ್ನಡಪ್ರಭ ವಾರ್ತೆ ಮೈಸೂರು
ಮಾಧ್ಯಮವು ಒಂದು ದೊಡ್ಡ ಶಕ್ತಿ ಆಗಿದ್ದು, ಇದನ್ನು ಬಳಸಿಕೊಂಡು ಆಯುರ್ವೇದವನ್ನು ಪ್ರತಿ ಮನೆ ಮನೆಗೂ ತಲುಪಿಸುವ ಅಗತ್ಯವಿದೆ ಎಂದು ಸಿಸಿಬಿ ಘಟಕದ ಎಸಿಪಿ ಎಸ್.ಎನ್. ಸಂದೇಶಕುಮಾರ್ ತಿಳಿಸಿದರು.ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಆಯುರ್ವೇದ ಒಂದು ಪ್ರಾಚೀನ ಪದ್ಧತಿಯಾಗಿದ್ದು, ಇದರ ತತ್ವಗಳನ್ನು ಹೊಸ ತಂತ್ರಜ್ಞಾನ ಮತ್ತು ಸಂಶೋಧನೆಗಳಿಂದ ಹೊಸ ರೀತಿಯ ಚಿಕಿತ್ಸೆ ವಿಧಾನಗಳನ್ನು ಅಭಿವೃದ್ಧಿಪಡಿಸಬಹುದು. ಈ ಮೂಲಕ ಆಯುರ್ವೇದವು ಹೆಚ್ಚು ಪರಿಣಾಮಕಾರಿಯಾಗಿ ಜಾಗತಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಿರುತ್ತದೆ ಹಾಗೂ ಆಯುರ್ವೇದವು ವಿಶ್ವ ವ್ಯಾಪಿಯಾಗುವ ಸಾಮರ್ಥ್ಯವಿದೆ ಎಂದು ಅವರು ಹೇಳಿದರು.ಇದೇ ವೇಳೆ ಆಸ್ಪತ್ರೆಯ ನಿವೃತ್ತ ಸ್ಥಾಯಿ ವೈದ್ಯಾಧಿಕಾರಿಗಳಾದ ಡಾ. ಮಧುಮತಿ, ಡಾ. ನಾಗರತ್ನಾ, ಡಾ. ಸುನಂದಾ, ಡಾ. ವಿಜಯಾ ಅವರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಸಂಶೋಧನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಕಿರು ಹೊತ್ತಿಗೆ ನೀಡಿ ಪ್ರೋತ್ಸಾಹಿಸಲಾಯಿತು. ಪ್ರಜ್ಞ ಕುಟೀರ ನಿರ್ದೇಶಕ ಡಾ.ಎನ್.ವಿ. ಕೃಷ್ಣಮೂರ್ತಿ, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಯಿ ವೈದ್ಯಾಧಿಕಾರಿ ಡಾ. ಶಶಿರೇಖಾ, ಪ್ರಾಂಶುಪಾಲ ಡಾ. ಗಜಾನನ ಹೆಗಡೆ ಮೊದಲಾದವರು ಇದ್ದರು.