ಸರ್ಕಾರಿ ಬಸ್‌ ನೌಕರರ ಮುಷ್ಕರ: ಕ್ಷೀಣಿಸಿದ ಪ್ರಯಾಣಿಕರ ಸಂಖ್ಯೆ

| Published : Aug 06 2025, 01:15 AM IST

ಸರ್ಕಾರಿ ಬಸ್‌ ನೌಕರರ ಮುಷ್ಕರ: ಕ್ಷೀಣಿಸಿದ ಪ್ರಯಾಣಿಕರ ಸಂಖ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ವೇತನ ಹೆಚ್ಚಳ ಹಾಗೂ ಬಾಕಿ ವೇತನ ಪಾವತಿ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟು ಮಂಗಳವಾರ ಕೆಎಸ್‌ಆರ್‌ಟಿಸಿ ನೌಕರರು ಕರೆ ನೀಡಿದ ಮುಷ್ಕರಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಸಂಸ್ಥೆ ಸಿಬ್ಬಂದಿ ಬೆಂಬಲ ಸೂಚಿಸಿದ್ದರು.

- ಕೆಲವು ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ, ಗ್ರಾಮೀಣ ಭಾಗದ ಜನರಿಗೆ ತಟ್ಟಿದ ಪ್ರತಿಭಟನೆಯ ಬಿಸಿ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವೇತನ ಹೆಚ್ಚಳ ಹಾಗೂ ಬಾಕಿ ವೇತನ ಪಾವತಿ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟು ಮಂಗಳವಾರ ಕೆಎಸ್‌ಆರ್‌ಟಿಸಿ ನೌಕರರು ಕರೆ ನೀಡಿದ ಮುಷ್ಕರಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಸಂಸ್ಥೆ ಸಿಬ್ಬಂದಿ ಬೆಂಬಲ ಸೂಚಿಸಿದ್ದರು.

ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಶೃಂಗೇರಿ ಬಸ್‌ ನಿಲ್ದಾಣದಲ್ಲಿ ಬೆಳಿಗ್ಗೆಯಿಂದಲೇ ಸರ್ಕಾರಿ ಬಸ್‌ಗಳು ಡಿಪೋಗಳಿಂದ ನಿಲ್ದಾಣದೊಳಗೆ ಪ್ರವೇಶ ಮಾಡಲೇ ಇಲ್ಲ. ಆದ್ದರಿಂದ ಮುಷ್ಕರದ ಮೊದಲ ದಿನವೇ ಜನ ಜೀವನದ ಮೇಲೆ ಪರಿಣಾಮ ಬೀರಿತ್ತು.

38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿ ಹಾಗೂ 2024ರ ಜನವರಿಯಿಂದ ಹೊಸದಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಮಂಗಳವಾರ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ ಕಾರಣ ಸಂಸ್ಥೆಯ ನೌಕರರು ಎಂದಿನಂತೆ ಕೆಲಸಕ್ಕೆ ಹಾಜರಾಗಿರಲಿಲ್ಲ. ಬೆಳಿಗ್ಗೆ ಯಾವುದೇ ಬಸ್‌ ಡಿಪೋದಿಂದ ನಿಲ್ದಾಣಕ್ಕೆ ಬರಲಿಲ್ಲ.

ಮುಷ್ಕರದಿಂದ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿತ್ತು. ದೂರದ ಊರುಗಳಿಗೆ ತೆರಳಲು ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮೀಣ ಭಾಗಗಳಿಗೆ ತೆರಳಲು ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ವ್ಯವಸ್ಥೆ ಮಾಡಲಾಗಿತ್ತು.

ಇಂತಹ ಸಂದರ್ಭದಲ್ಲಿ ಚಾಲಕರು ಪ್ರಯಾಣಿಕರಿಂದ ಟಿಕೆಟ್‌ ದರಗಿಂತ ಹೆಚ್ಚಿನ ಹಣ ಪಡೆಯುವ ಸಾಧ್ಯತೆ ಇರುತ್ತದೆ. ಅದ್ದರಿಂದ ಹಾಲಿ ಚಾಲ್ತಿಯಲ್ಲಿರುವ ಕೆಎಸ್‌ಆರ್‌ಟಿಸಿ ದರಪಟ್ಟಿಯನ್ನು ಸಾರ್ವಜನಿಕವಾಗಿ ಕಾಣುವಂತೆ ಬಸ್‌ ನಿಲ್ದಾಣಗಳಲ್ಲಿ ಹಾಕಲಾಗಿತ್ತು. ನಿಗಧಿತ ದರಕ್ಕಿಂತ ಹೆಚ್ಚಿನ ಹಣ ಪಡೆಯಬಾರದೆಂದು ಸೂಚನೆ ನೀಡಲಾಗಿತ್ತು.ಕ್ಷೀಣಿಸಿದ ಪ್ರಯಾಣಿಕರು:

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಮಂಗಳವಾರ ಎಂದಿನಂತೆ ವಾತಾವರಣ ಇರಲಿಲ್ಲ. ಪ್ರಯಾಣಿಕರ ಸಂಖ್ಯೆ ತೀರ ಇಳಿಮುಖವಾಗಿತ್ತು. ಕೆಲವೇ ಮಂದಿ ಪ್ರಯಾಣಿಕರು ಕಂಡು ಬರುತ್ತಿದ್ದರು. ದೂರದ ಊರುಗಳು ಮಾತ್ರವಲ್ಲ, ಗ್ರಾಮೀಣ ಭಾಗದ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿತ್ತು. ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಗ್ರಾಮೀಣ ಭಾಗಕ್ಕೆ ಮ್ಯಾಕ್ಸಿ ಕ್ಯಾಬ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಹೆಚ್ಚಿನ ಮಾರ್ಗಗಳಲ್ಲಿ ಈ ಪರ್ಯಾಯ ವ್ಯವಸ್ಥೆಯೂ ಕೂಡ ಇರಲಿಲ್ಲ.

ಬಸ್‌ಗಳು ಇಲ್ಲದಿರುವುದರಿಂದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಕೆಲವು ವಿದ್ಯಾರ್ಥಿಗಳು ಶಾಲೆಗಳು ಬಂದಿದ್ದರು. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಮುಷ್ಕರ ಬಿಸಿ ಪ್ರಯಾಣಿಕರಿಗೆ ತಟ್ಟಿತ್ತು.

ಶೃಂಗೇರಿ, ಮೂಡಿಗೆರೆ ಹಾಗೂ ತರೀಕೆರೆಯಲ್ಲೂ ಇದೇ ವಾತಾವರಣ ಇತ್ತು. ಆದರೆ, ಕಡೂರಿನಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಪೊಲೀಸರ ಕಣ್ಗಾವಲಿನಲ್ಲಿ ಗ್ರಾಮೀಣ ಪ್ರದೇಶಕ್ಕೆ ಒಂದರ ನಂತರ ಮತ್ತೊಂದರಂತೆ ಮೂರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಿಡಲಾಯಿತು. ಸಂಸ್ಥೆ ನೌಕರರು ಪ್ರತಿಭಟನಾ ಮೆರವಣಿಗೆಯಾಗಲೀ, ಬಸ್‌ ನಿಲ್ದಾಣದೊಳಗೆ ಬಂದು ಖಾಸಗಿ ಬಸ್‌ ಮಾಲೀಕರ ಹಾಗೂ ನೌಕರರಿಗೆ ತಡೆಯೊಡ್ಡುವುದಾಗಲೀ ಮಾಡಲಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ಸರ್ಕಾರಿ ಬಸ್‌ ನೌಕರರು ಮುಷ್ಕರ ನಡೆಸಿದರು. ಪ್ರತಿಭಟನೆ ಹಿನ್ನಲೆಯಲ್ಲಿ ಬಸ್‌ ನಿಲ್ದಾಣಗಳಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

- ಬಾಕ್ಸ್‌ -ಜಿಲ್ಲೆಯ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದೊಳಗೆ ಖಾಸಗಿ ಬಸ್‌ಗಳನ್ನು ಬಿಡಲಾಗಿದೆ. ಬೆಳಿಗ್ಗೆ 4 ಗಂಟೆಯಿಂದಲೇ ಪೊಲೀಸ್‌ ಅಧಿಕಾರಿಗಳು ಬಸ್‌ ನಿಲ್ದಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಸ್ಥಳದಲ್ಲಿ ತಹಸೀಲ್ದಾರ್‌ ಹಾಗೂ ಗ್ರೇಡ್‌ - 2 ತಹಸೀಲ್ದಾರ್‌ರ ಇರುವ ವ್ಯವಸ್ಥೆ ಮಾಡಲಾಗಿದೆ. ಒಂದೇ ಮಾರ್ಗದಲ್ಲಿ ಹೆಚ್ಚು ಮಂದಿ ಪ್ರಯಾಣಿಕರು ಕಂಡು ಬಂದರೆ ಅಂತಹ ಮಾರ್ಗಗಳಲ್ಲಿ ಬಸ್‌ಗಳನ್ನು ಬಿಡಲಾಗುತ್ತಿದೆ. ಕೆಎಸ್ಆರ್‌ಟಿಸಿಯಲ್ಲಿ 75 ಜನ ಹೊರ ಗುತ್ತಿಗೆಯಲ್ಲಿ ನೇಮಕ ಗೊಂಡಿರುವ ಚಾಲಕರು ಇದ್ದಾರೆ. ತುರ್ತು ಅವಶ್ಯಕತೆ ಇದ್ದರೆ ಅವರನ್ನು ಬಳಸಿಕೊಳ್ಳಲಾಗುವುದು. - ನಾರಾಯಣರಡ್ಡಿ ಕನಕರಡ್ಡಿ

- ಅಪರ ಜಿಲ್ಲಾಧಿಕಾರಿ