ತಾಲೂಕಿಗೆ ಸರಿಯಾಗಿ ಸರ್ಕಾರಿ ಬಸ್‌ಗಳು ಸಂಚರಿಸುತ್ತಿಲ್ಲ. ಬಸ್‌ಗಳ ಬಗ್ಗೆ ದೂರು ನೀಡಿದರೆ ಡಿಪೋ ಅಧಿಕಾರಿಗಳು ಸಹ ಸ್ಪಂದನೆ ಮಾಡುವುದಿಲ್ಲ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಇಂದಿರಾನಗರ ರಘು ಹಾಗೂ ಇತರ ಸದಸ್ಯರು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ತಾಲೂಕಿಗೆ ಸರಿಯಾಗಿ ಸರ್ಕಾರಿ ಬಸ್‌ಗಳು ಸಂಚರಿಸುತ್ತಿಲ್ಲ. ಬಸ್‌ಗಳ ಬಗ್ಗೆ ದೂರು ನೀಡಿದರೆ ಡಿಪೋ ಅಧಿಕಾರಿಗಳು ಸಹ ಸ್ಪಂದನೆ ಮಾಡುವುದಿಲ್ಲ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಇಂದಿರಾನಗರ ರಘು ಹಾಗೂ ಇತರ ಸದಸ್ಯರು ಆರೋಪಿಸಿದರು.

ತಾಪಂ ಸಾಮರ್ಥ್ಯಸೌಧದಲ್ಲಿ ಮಂಗಲೌಅಋತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಮಾತನಾಡಿ, ತರೀಕೆರೆಗೆ ಹೋಗುವ ಬಸ್ಸು ಕಳೆದ 3-4 ದಿನಗಳಿಂದ ಸಂಚರಿಸುತ್ತಿಲ್ಲ. ಬಸ್ ಸಂಚಾರದ ಬಗ್ಗೆ ದೂರು ಹೇಳಿದರೂ ಯಾವುದೇ ಪ್ರಯೋಜನವಿಲ್ಲ. ಡಿಪೋ ಅಧಿಕಾರಿಗಳಿಂದ ಯಾವುದೇ ಉಪಯೋಗವಿಲ್ಲ. ಮಲೆನಾಡಿನ ಜನರು ಮುಗ್ಧರೆಂದು ಹೀಗೆ ವರ್ತಿಸುತ್ತಿದ್ದಾರೆ. ಮಹಿಳಾ ಪ್ರಯಾಣಿಕರೊಂದಿಗೂ ಬಸ್ ನಿರ್ವಾಹಕರು ಸರಿಯಾಗಿ ವರ್ತಿಸುವುದಿಲ್ಲ. ಉಡಾಪೆಯಿಂದ ಮಾತನಾಡುತ್ತಾರೆ. ಸ್ಮಾರ್ಟ್ ಆಧಾರ್ ಕಾರ್ಡ್ ತಂದರೂ ಕೂಡ ಉದ್ದವಿರುವ ಆಧಾರ್ ಕಾರ್ಡೇ ಬೇಕು ಎನ್ನುತ್ತಾರೆ.

ಮೊಬೈಲ್‌ನಲ್ಲಿದ್ದರೂ ಆಧಾರ್ ಕಾರ್ಡ್ ಒಪ್ಪುವುದಿಲ್ಲ. ಒಟ್ಟಾರೆಯಾಗಿ ಸರ್ಕಾರಿ ಬಸ್ ಚಾಲಕರು, ನಿರ್ವಾಹಕರಿಂದಲೇ ಹೆಚ್ಚಿನ ಸಮಸ್ಯೆ ಆಗುತ್ತಿದೆ. ಇತ್ತ ಸಮಯಕ್ಕೆ ಸರಿಯಾಗಿ ಬಸ್‌ಗಳು ಸಂಚರಿಸದೇ ಇರುವುದೂ ಕೂಡ ಈ ಭಾಗದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಒಂದು ದಿನ ಬಸ್‌ ಬಂದರೆ ಒಂದು ವಾರ ಬರುವುದೇ ಇಲ್ಲ ಎಂದು ಆರೋಪಿಸಿದರು.

ಸದಸ್ಯೆ ಅಪೂರ್ವ ಮಾತನಾಡಿ, ಮಾನವೀಯತೆಗಾದರೂ ಮುತ್ತಿನಕೊಪ್ಪ ಆಸ್ಪತ್ರೆ ಮುಂಭಾಗದ ಬಸ್ ಸ್ಟಾಪ್‌ನಲ್ಲಿ ಸ್ಟಾಪ್ ಕೊಡುವುದಿಲ್ಲ. ರೋಗಿಗಳಿಗೆ ಸಮಸ್ಯೆ ಆಗುತ್ತಿದೆ ಎಂದರು. ಸದಸ್ಯ ಜಯರಾಂ ಮಾತನಾಡಿ, ಅಧಿಕಾರಿಗಳು ಕೇವಲ ಸಭೆಗೆ ಪ್ರಗತಿ ವರದಿ ಓದಲು ಬರುತ್ತಾರೆಯೇ ವಿನಃ ಸಮಿತಿ ಸದಸ್ಯರ ದೂರುಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸಲು ಬರುವುದಿಲ್ಲ. ಮನಸ್ಸಿಗೆ ಬಂದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇವಲ ಕಾಫಿ, ಬಿಸ್ಕತ್‌ಗಾಗಿ ಸಭೆಗೆ ಬರಬೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ಬೆಸಿಲ್ ಮಾತನಾಡಿ, ಶಿವಮೊಗ್ಗ ಡಿಪೋ ಅಧಿಕಾರಿಗಳು ನಾವು ಏನೇ ಸಮಸ್ಯೆಗಳನ್ನು ಹೇಳಿದರೂ ತಾಳ್ಮೆಯಿಂದ ಆಲಿಸುತ್ತಾರೆ. ಆದರೆ, ಯಾವ ಸಮಸ್ಯೆಯೂ ಬಗೆಹರಿಸುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಡಿಪೋ ಅಧಿಕಾರಿ ಕೆ.ಸಿ.ಮಂಜುನಾಥ್ ಮಾತನಾಡಿ, ಯಾವ ಬಸ್ ನಂಬರಿನ ನಿರ್ವಾಹಕರು ಪ್ರಯಾಣಿಕರೊಂದಿಗೆ ಉಡಾಫೆಯಾಗಿ ವರ್ತಿಸುತ್ತಾರೆ ಎಂದು ತಿಳಿಸಿದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದೆಂದರು.

ಸದಸ್ಯ ಟಿ.ಟಿ.ಇಸ್ಮಾಯಿಲ್ ಮಾತನಾಡಿ, ಶೃಂಗೇರಿ ಡಿಪೋ ಕಾಮಗಾರಿ ಎಲ್ಲಿಯವರೆಗೆ ಬಂದಿದೆ. ಯಾವಾಗ ಪ್ರಾರಂಭವಾಗಲಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಡಿಪೋ ಅಧಿಕಾರಿ ಕೆ.ಸಿ.ಮಂಜುನಾಥ್ ಮಾತನಾಡಿ, ಕಾಮಗಾರಿ ಪ್ರಗತಿಯಲ್ಲಿದೆ.3-4 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಆಹಾರ ಇಲಾಖೆ ಅಧಿಕಾರಿ ಗಣಪತಿ ಮಾತನಾಡಿ, ಬಿಪಿಎಲ್ ಮಾನದಂಡಕ್ಕಿಂತ ಆದಾಯ ಹೆಚ್ಚು ಹೊಂದಿರುವವರು, ಆದಾಯ ತೆರಿಗೆ ಪಾವತಿಸುತ್ತಿರುವವರು ಕೂಡಲೇ ತಮ್ಮ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಇಲಾಖೆಗೆ ಹಸ್ತಾಂತರಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಸಮಿತಿ ಅಧ್ಯಕ್ಷೆಯನ್ನು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷೆ ಕು.ಚಂದ್ರಮ್ಮ ವಹಿಸಿದ್ದರು. ಸದಸ್ಯರುಗಳಾದ ಇಂದಿರಾನಗರ ರಘು,ನಿತ್ಯಾನಂದ,ನಾಗರಾಜ್, ಜಯರಾಂ, ಟಿ.ಟಿ.ಇಸ್ಮಾಯಿಲ್, ಅರುಣ್‌ಕುಮಾರ್,ಬೇಸಿಲ್,ಹೂವಮ್ಮ,ಅಪೂರ್ವ, ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಇದ್ದರು.