75 ವರ್ಷಗಳ ನಂತರ ಕುಗ್ರಾಮಗಳಿಗೆ ಸರ್ಕಾರಿ ಬಸ್

| Published : Feb 06 2024, 01:33 AM IST

ಸಾರಾಂಶ

ಮಧುಗಿರಿ ಏಕಶಿಲಾ ಬೆಟ್ಟದ ಹಿಂಭಾಗದಲ್ಲಿರುವ ಸುಮಾರು ನಾಲ್ಕೈದು ಹಳ್ಳಿಗಳಿಗೆ ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಬಸ್‌ ಸೌಲಭ್ಯವೇ ಇರಲಿಲ್ಲ,ಪಟ್ಟಣದಿಂದ ಕೂಪ್ಪಚಾರಿ, ರೊಪ್ಪ ಮಾರ್ಗವಾಗಿ ಹಾವೆಕಟ್ಟೆ,ಕಮ್ನನಕೋಟೆ,ಗುಡಿರೊಪ್ಪ ಹಾಗೂ ಹರಿಹರರೊಪ್ಪ ಗ್ರಾಮಸ್ಥರಿಗೆ ಸಚಿವ ಕೆ.ಎನ್‌.ರಾಜಣ್ಣ ಮತ್ತು ಪುತ್ರ, ಎಂಎಲ್ಸಿ ಆರ್‌.ರಾಜೇಂದ್ರ ಬಸ್‌ ಸೌಲಭ್ಯ ಭಾಗ್ಯ ಕಲ್ಪಿಸಿದ್ದು, ಈ ಗ್ರಾಮಗಳ ಜನರು ,ವಿದ್ಯಾರ್ಥಿಗಳು ಬಸ್‌ ಆಗಮನ ಕಂಡು ಸಂಭ್ರಮಪಟ್ಟರು.

ಬಸ್ ಕಂಡು ಗ್ರಾಮದ ಜನರು, ವಿದ್ಯಾರ್ಥಿಗಳ ಹರ್ಷೋದ್ಘಾರ ಕಾರಣೀಭೂತ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಎಮ್ಎಲ್ಸಿ ರಾಜೇಂದ್ರರಿಗೆ ಧನ್ಯವಾದ ಅರ್ಪಿಸಿದ ಗ್ರಾಮಸ್ಥರು

ಕನ್ನಡಪ್ರಭ ವಾರ್ತೆ ಮಧುಗಿರಿ

ಮಧುಗಿರಿ ಕಸಬಾ, ಕೆ.ಸಿ.ರೊಪ್ಪ ಗ್ರಾಮದ ಮಾರ್ಗವಾಗಿ ಸ್ವಾತಂತ್ರ್ಯ ನಂತರ ಪ್ರಪ್ರಥಮ ಬಾರಿಗೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮತ್ತು ಎಂಎಲ್ಸಿ ಆರ್‌.ರಾಜೇಂದ್ರರ ಕಾಳಜಿಯಿಂದ ಸೋಮವಾರ ರಾಜ್ಯ ರಸ್ತೆ ಸಾರಿಗೆ ಬಸ್‌ ಸಂಚಾರ ಸೇವೆ ಪ್ರಾರಂಭವಾಗಿದ್ದು, ಎಂಎಲ್‌ಸಿ ಆರ್‌.ರಾಜೇಂದ್ರ, ಕೆ.ಸಿ.ರೊಪ್ಪ ಗ್ರಾಮದಲ್ಲಿ ಬಸ್‌ ಸಂಚರಿಸಲು ಚಾಲನೆ ನೀಡಿದರು.

ಮಧುಗಿರಿ ಏಕಶಿಲಾ ಬೆಟ್ಟದ ಹಿಂಭಾಗದಲ್ಲಿರುವ ಸುಮಾರು ನಾಲ್ಕೈದು ಹಳ್ಳಿಗಳಿಗೆ ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಬಸ್‌ ಸೌಲಭ್ಯವೇ ಇರಲಿಲ್ಲ,ಪಟ್ಟಣದಿಂದ ಕೂಪ್ಪಚಾರಿ, ರೊಪ್ಪ ಮಾರ್ಗವಾಗಿ ಹಾವೆಕಟ್ಟೆ,ಕಮ್ನನಕೋಟೆ,ಗುಡಿರೊಪ್ಪ ಹಾಗೂ ಹರಿಹರರೊಪ್ಪ ಗ್ರಾಮಸ್ಥರಿಗೆ ಸಚಿವ ಕೆ.ಎನ್‌.ರಾಜಣ್ಣ ಮತ್ತು ಪುತ್ರ, ಎಂಎಲ್ಸಿ ಆರ್‌.ರಾಜೇಂದ್ರ ಬಸ್‌ ಸೌಲಭ್ಯ ಭಾಗ್ಯ ಕಲ್ಪಿಸಿದ್ದು, ಈ ಗ್ರಾಮಗಳ ಜನರು ,ವಿದ್ಯಾರ್ಥಿಗಳು ಬಸ್‌ ಆಗಮನ ಕಂಡು ಸಂಭ್ರಮಪಟ್ಟರು.

ಈ ಗ್ರಾಮಗಳು ಬೆಟ್ಟದ ಹಿಂಬದಿಯಿರುವ ಗುಡ್ಡಗಾಡು ಅರಣ್ಯ ಪ್ರದೇಶಗಳ ನಡುವೆ ಇದ್ದು, ಇಲ್ಲಿಯ ಜನರು ಬೇಸಾಯ ನಂಬಿ ಜೀವನ ನಡೆಸುತ್ತಾರೆ. ಇದಲ್ಲದೆ ಈ ಬೆಟ್ಟ, ಗುಡ್ಡಗಳ ನಡುವೆ ಕಾಡುಪ್ರಾಣಿಗಳ ಭಯದ ವಾತವರಣದಲ್ಲಿಯೇ ಜೀವನ ನಡೆಸುತ್ತಾರೆ. ಜೀನೋಪಾಯಕ್ಕಾಗಿ ಬೇಸಾಯದ ಜೊತೆಗೆ ಪಟ್ಟಣಕ್ಕೆ ಹಾಲು,ಮೊಸರು,ತುಪ್ಪ,ಸೌಧೆ ತಂದು ಮಾರಿ,ಜೀವನ ಸಾಗಿಸುತ್ತಾರೆ.ಪಟ್ಟಣಕ್ಕೆ ಬಂದರೆ 5 ಗಂಟೆಯೊಳಗೆ ಗೂಡು ಸೇರಬೇಕಿತ್ತು.ಕಾಡು ಪ್ರಾಣಿಗಳ ಭಯದಲ್ಲಿ ಬದುಕುವ ಭವಣೆ ಇವರದ್ದಾಗಿದ್ದು, ಇಂತಹ ದು:ಸ್ಥಿತಿಯನ್ನು ಕಂಡ ನಮ್ಮ ಹೆಮ್ಮೆಯ ಸಹಕಾರ ಸಚಿವರು ಮತ್ತು ಪುತ್ರ ರಾಜೇಂದ್ರ, ನಮ್ಮ ಕಷ್ಟ ಕಂಡು ಗ್ರಾಮಗಳಿಗೆ ಬಸ್‌ ಭಾಗ್ಯ ಕಲ್ಪಿಸಿರುವುದು ಸಂತಸ ತಂದಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. ಈ ಗ್ರಾಮಗಳ ಜನರು ಪಟ್ಟಣಕ್ಕೆ ಕಾಲ್ನಡಿಗೆಯಲ್ಲಿಯೇ ನಡೆದು ಹೋಗಬೇಕಾಗಿತ್ತು ಅಥವಾ ಡಬಲ್‌ ಹಣತ್ತೆತ್ತು ಆಟೋಗಳನ್ನು ಅವಲಂಬಿಸಬೇಕಾಗಿತ್ತು. ಇಲ್ಲಿ ಕಳೆದ 20 ವರ್ಷಗಳಿಂದ ಮೂರಾರ್ಜಿ ವಸತಿ ಶಾಲೆ ಕೂಡ ನಡೆಯುತ್ತಿದ್ದು, ಗ್ರಾಮಗಳ ಜನತೆಗೆ ಬಸ್‌ ಬಿಡುವುದರಲ್ಲಿ ಪ್ರಮುಖ ಪಾತ್ರವಹಿಸಿದ ಸಚಿವರ ಕಾಳಜಿ ಮೆಚ್ಚುವಂಥದ್ದು ಎಂದು ಇಲ್ಲಿನ ಗ್ರಾಮಸ್ಥರು,ಶಾಲಾ ಮಕ್ಕಳು ಹರ್ಷ ವ್ಯಕ್ತಪಡಿಸಿದ್ದಾರೆ. ಕೆ.ಸಿ.ರೊಪ್ಪ ಗ್ರಾಮದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ಗೆ ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಈ ಗ್ರಾಮಗಳಿಗೆ ಬಸ್‌ ಸಂಚರಿಸದಿರುವುದು ದುರಂತವೇ ಸರಿ, ಈ ಗ್ರಾಮಗಳ ಜನರ ಬೇಡಿಕೆಯಂತೆ ಪ್ರತಿನಿತ್ಯ ಎರಡು ಸಾರಿಗೆ ಬಸ್‌ಗಳು ಸಂಚರಿಸಲಿವೆ. ಇದರಿಂದ ಗ್ರಾಮಸ್ಥರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ವ್ಯಾಪಾರ ವಹಿವಾಟು ಮಾಡುವವರಿಗೆ ಅನುಕೂಲವಾಗಲಿದೆ ಎಂದರು.

ಪುರಸಭೆ ಸದಸ್ಯರಾದ ಲಾಲಪೇಟೆ ಮಂಜುನಾಥ್‌, ಮುಂಜುನಾಥ್‌ ಆಚಾರ್‌, ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮಮ್ಮ, ಸದಸ್ಯ ನಾಗಾರಾಜು, ಮುಖಂಡರಾದ ತುಂಗೋಟಿ ರಾಮಣ್ಣ, ಮರಿಯಣ್ಣ, ಗೇಟ್‌ ಶಿವಣ್ಣ, ತಲ್ಲಿಮಂಜು, ಬಾಣದರಂಗಯ್ಯ, ತಹಸೀಲ್ದಾರ್‌ ಸಿಗ್ಬತ್‌ವುಲ್ಲಾ, ಇಒ ಲಕ್ಷ್ಮಣ್‌,ಪಿಡಿಒ ಶಿವಕುಮಾರ್‌ ಸೇರಿ ಗ್ರಾಮಸ್ಥರಿದ್ದರು.