ಚನ್ನಗಿರಿ ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ಆರಂಭಗೊಂಡು 2 ತಿಂಗಳುಗಳೇ ಕಳೆಯುತ್ತಿದೆ. ಹೀಗಿದ್ದರೂ ಸರ್ಕಾರಿ ಬಸ್‌ಗಳ ನಿಲುಗಡೆಗೆ ಸರಿಯಾದ ನಿಲ್ದಾಣವಿಲ್ಲದೇ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ದು ಪ್ರಯಾಣಿಕರ ವಲಯದಿಂದ ಕೇಳಿಬರುತ್ತಿದೆ.

- ಯಾವ ಬಸ್‌ಗಳು, ಎಲ್ಲಿಗೆ, ಯಾವ್ಯಾವ ಸಮಯಕ್ಕೆ ಸಂಚರಿಸುತ್ತವೆ ಅನ್ನೋದೇ ತಿಳಿಯುತ್ತಿಲ್ಲ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ಆರಂಭಗೊಂಡು 2 ತಿಂಗಳುಗಳೇ ಕಳೆಯುತ್ತಿದೆ. ಹೀಗಿದ್ದರೂ ಸರ್ಕಾರಿ ಬಸ್‌ಗಳ ನಿಲುಗಡೆಗೆ ಸರಿಯಾದ ನಿಲ್ದಾಣವಿಲ್ಲದೇ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ದು ಪ್ರಯಾಣಿಕರ ವಲಯದಿಂದ ಕೇಳಿಬರುತ್ತಿದೆ.

ಚನ್ನಗಿರಿ ಡಿಪೋದಿಂದ 42 ಸರ್ಕಾರಿ ಬಸ್‌ಗಳು ವಿವಿಧ ಪ್ರದೇಶಗಳಿಗೆ ಸಂಚರಿಸುತ್ತಿವೆ. ಎಲ್ಲ ಕಡೆಗಳಿಗೂ ಹೋಗುವಂತಹ ಈ ಬಸ್‌ಗಳು ಪಟ್ಟಣದ ನಾಲ್ಕು ಭಾಗಗಳಲ್ಲಿ ನಿಲ್ಲುತ್ತಿವೆ. ಇದರ ಪರಿಣಾಮ ಪ್ರಯಾಣಿಕರು ಯಾವ ಕಡೆ ಯಾವ ಬಸ್‌ಗಳು, ಯಾವ್ಯಾವ ಸಮಯಕ್ಕೆ ಸಂಚರಿಸುತ್ತವೆ ಎಂಬ ಗೊಂದಲ ಉಂಟಾಗುತ್ತಿದೆ ಎಂದು ಶ್ರೀನಿವಾಸ್, ಶಿವರಾಜ್, ಮಹೇಶ್ವರಪ್ಪ, ಪ್ರಸನ್ನಕುಮಾರ್, ರೂಪ, ಪುಪ್ಪಾ, ಅರಶಿನಘಟ್ಟ ನಾಗೇಶ್, ಸುರೇಶ್ ತಿಳಿಸಿದ್ದಾರೆ.

ಸರ್ಕಾರಿ ಬಸ್‌ಗಳನ್ನು ಹತ್ತಲು ಬಸ್ ನಿಲ್ದಾಣದ ಎಡ-ಬಲ ಬದಿಗಳಿಗೆ ರಸ್ತೆ ದಾಟುವಾಗ ವೇಗವಾಗಿ ಬರುವ ವಾಹನಗಳಿಗೆ ಪ್ರಯಾಣಿಕ ಪಾದಚಾರಿಗಳು ಸಿಲುಕಿಕೊಂಡು ಗಾಯಗೊಂಡಿದ್ದಾರೆ. ಇಂತಹ ಅವ್ಯವಸ್ಥೆಯ ಸರ್ಕಾರಿ ಬಸ್‌ಗಳ ನಿಲುಗಡೆಯಿಂದ ಶಾಲಾ-ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳಿಗೆ, ವಯೋವೃದ್ದರಿಗೆ, ಬಾಣಂತಿ, ಗರ್ಭಿಣಿ ಮಾತೆಯರಿಗೆ ತುಂಬಾ ತೊಂದರೆಗಳಾಗುತ್ತಿವೆ. ಸರ್ಕಾರದ ಶಕ್ತಿ ಯೋಜನೆಗೆ ಶಕ್ತಿ ತುಂಬುವಂತಹ ಕೆಲಸ ಆಗಬೇಕು ಎಂದು ಪ್ರಯಾಣಿಕರಾದ ಬಸವರಾಜ್, ನಾಗರಾಜ್, ಸಿದ್ದಪ್ಪ, ರುದ್ರಣ್ಣ ಸಹ ಒತ್ತಾಯಿಸಿದ್ದಾರೆ.

ಕೆಲ ಸರ್ಕಾರಿ ಬಸ್‌ಗಳು ಖಾಸಗಿ ಬಸ್ ನಿಲ್ದಾಣದ ಒಳಗೆ ಬಂದರೆ ಇನ್ನು ಕೆಲವು ಬಸ್‌ಗಳು ಬಸ್ ನಿಲ್ದಾಣದ ಎದುರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ನಿಲ್ಲುತ್ತವೆ. ಅರಳಿ ಮರದ ಎದುರು, ಬುಳ್ಳಿ ಕಾಂಪ್ಲೆಕ್ಸ್ ಎದುರು ಈಗೆ ಎಲ್ಲಿಬೇಕೆಂದರಲ್ಲಿ ಬಸ್‌ಗಳ ನಿಲುಗಡೆಯಿಂದ ಪ್ರಯಾಣಿಕರು ಎಲ್ಲಿಂದ ಬಸ್‌ಗಳನ್ನು ಹತ್ತಬೇಕು ಎಂದು ಗೊಂದಲಗಳಿಗೆ ಒಳಗಾಗಿದ್ದಾರೆ.

- - -

(ಬಾಕ್ಸ್‌) * ಸಭೆಯಲ್ಲಿ ಚರ್ಚೆ ನಡೆದರೂ ಪ್ರಯೋಜನ ಆಗಿಲ್ಲ ಸರ್ಕಾರಿ ಬಸ್‌ಗಳ ತಾತ್ಕಾಲಿಕ ತಂಗುದಾಣ ಎಂದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬುಳ್ಳಿ ಕಾಂಪ್ಲೆಕ್ಸ್ ಬಳಿ ತಾತ್ಕಾಲಿಕ ಶೆಡ್ ಅನ್ನು ಹಾಕಿರುವುದನ್ನು ಬಿಟ್ಟರೆ ಎಲ್ಲಿಯೋ ಪ್ರಯಾಣಿಕರಿಗೆ ಅನುಕೂಲ ಆಗುವಂತಹ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಇದರಿಂದ ಪ್ರಯಾಣಿಕರಲ್ಲಿ ಎಲ್ಲಿ ಬಸ್‌ಗಳು ನಿಲ್ಲುತ್ತವೆ ಎಂಬ ಗೊಂದಲ ಉಂಟಾಗಿದೆ. ಈ ಬಗ್ಗೆ ಡಿಪೋದ ವ್ಯವಸ್ಥಾಪಕ ಖಾನ್ ಅವರನ್ನು ವಿಚಾರಿಸಿದಾಗ ಕೆಲವೇ ದಿನಗಳಲ್ಲಿ ಬಸ್‌ಗಳು ಒಂದೇ ಕಡೆ ನಿಲ್ಲುವಂತೆ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾರೆ.

ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಕಳೆದ ತಿಂಗಳು ನಡೆದ ತಾಲೂಕುಮಟ್ಟದ ಪಂಚ ಗ್ಯಾರಂಟಿಗಳ ತಾಲೂಕುಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲೂ ಸರ್ಕಾರಿ ಬಸ್‌ಗಳ ನಿಲುಗಡೆ ಮತ್ತು ಸಂಚಾರದ ಬಗ್ಗೆ ಬಾರಿ ಚರ್ಚೆ ನಡೆದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಚನ್ನಗಿರಿ ನಾಗರಿಕರು, ಪ್ರಯಾಣಿಕರ ಬೇಸರ ಮತ್ತು ಆರೋಪವಾಗಿದೆ.

- - -

-17ಕೆಸಿಎನ್ಜಿ2: ಚನ್ನಗಿರಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ 4 ಕಡೆಗಳಲ್ಲಿ ನಿಲ್ಲುವ ಸರ್ಕಾರಿ ಬಸ್‌ಗಳು.

-17ಕೆಸಿಎನ್ಜಿ3: ರಾಷ್ಟ್ರೀಯ ಹೆದ್ದಾರಿಯಲ್ಲಿಯ ಬುಳ್ಳಿ ಕಾಂಪ್ಲೆಕ್ಸ್ ಬಳಿ ನಿರ್ಮಿಸಿರುವ ತಾತ್ಕಾಲಿಕ ಶೆಡ್.