ಸಾರಾಂಶ
ಎಂ.ನರಸಿಂಹಮೂರ್ತಿ
ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣಕೊಳೆಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಹಾಗೂ ದುರ್ಬಲ ವರ್ಗದವರಿಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ‘ನಮ್ಮ ಕ್ಲಿನಿಕ್’ನ ಪರಿಕಲ್ಪನೆ ಹಳ್ಳ ಹಿಡಿದಂತಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸುಮಾರು 12 ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯರು, ಸಿಬ್ಬಂದಿ ವರ್ಗದವರಿಗೆ ಸಂಬಳ ಸರಿಯಾಗಿ ನೀಡುತ್ತಿಲ್ಲ ಹಾಗೂ ಖಾಸಗಿ ಕಟ್ಟಡಗಳಲ್ಲಿರುವ ಕ್ಲಿನಿಕ್‌ಗಳಿಗೆ ಮೂರ್ನಾಲ್ಕು ತಿಂಗಳಿನಿಂದ ಬಾಡಿಗೆ ನೀಡದೆ ಸತಾಯಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಬೇಕು ಎನ್ನುವ ದೃಷ್ಟಿಯಿಂದ ಹಿಂದಿನ ಬಿಜೆಪಿ ಸರ್ಕಾರ ಗಟ್ಟಿಯಾದ ತಳಹದಿಯಿಲ್ಲದೆ ಚುನಾವಣಾ ಸಮಯದಲ್ಲಿ ಆರಂಭಿಸಿದ ‘ನಮ್ಮ ಕ್ಲಿನಿಕ್’ ಯೋಜನೆಯನ್ನು ಚುನಾವಣೆಯ ನಂತರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಲಪಡಿಸುವ ಗೋಜಿಗೆ ಹೋಗಲಿಲ್ಲ. ಹಾಗೆಯೇ ಮುಂದುವರೆಸಿಕೊಂಡು ಹೋಗುವ ಮನಸ್ಸು ಮಾಡಿದಂತಿಲ್ಲ.
ಸರ್ಕಾರದಲ್ಲಿ ಅನುದಾನದ ಕೊರತೆಯಿದೆ ಹಾಗೂ ಸಂಬಳ ನೀಡಬೇಕಾದ ಖಾತೆಗಳು ನಿಷ್ಕ್ರಿಯವಾಗಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ನಮ್ಮ ಕ್ಲಿನಿಕ್‌ಗಳು ಹೆಸರಿಗಷ್ಟೇ ಉಳಿದಿವೆ ಎಂಬಂತೆ ತೋರುತ್ತಿದೆ.ಕಡಿಮೆ ವೇತನ ನಿಗದಿಪಡಿಸಿರುವ ಕಾರಣ ಹಲವೆಡೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಮಧುಮೇಹ, ಮೂತ್ರ ಪರೀಕ್ಷೆ, ಡೆಂಘಿ ಮತ್ತು ಮಲೇರಿಯಾ ತಪಾಸಣೆ ಹಾಗೂ ರಕ್ತ ಪರೀಕ್ಷೆ ಸೇರಿ 14 ಉಚಿತ ಡಯಾಗ್ನೋಸ್ಟಿಕ್ ಸೇವೆಗಳ ವರದಿ ವಿಳಂಬದಿಂದಾಗಿ ಚಿಕಿತ್ಸಾ ವಿಧಾನಗಳು ಹಲವು ದಿನಗಳವರೆಗೆ ನಡೆಯುವ ಕಾರಣ ರೋಗಿಗಳು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲವೆಡೆ ವೈದ್ಯರು ರಜೆಯ ಸಂದರ್ಭಗಳಲ್ಲಿ ನರ್ಸಿಂಗ್ ಸಿಬ್ಬಂದಿ ಚಿಕಿತ್ಸೆ ನೀಡುವುದು ಕಂಡು ಬರುತ್ತಿದೆ. ವೈದ್ಯರಿಲ್ಲದ ಕಾರಣ ಸಣ್ಣಪುಟ್ಟ ಕಾಯಿಲೆಗಳ ಚಿಕಿತ್ಸೆಗೆ ಬರುವ ರೋಗಿಗಳು ಇಲ್ಲಿ ಇರುವ ನರ್ಸ್‌ಗಳಿಂದ ಚಿಕಿತ್ಸೆ ಪಡೆಯಬೇಕಿದ್ದು, ಕಾಯಿಲೆ ಹೆಚ್ಚಿದಲ್ಲಿ ಅನಿವಾರ್ಯವಾಗಿ ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಹೋಗಬೇಕಾಗಿದೆ. ಸಣ್ಣಪುಟ್ಟ ಕಾಯಿಲೆಗಳಿಗೂ ಚಿಕಿತ್ಸೆ ದೊರಕದೆ, ಕೇವಲ ಮಾತ್ರೆಗಳನ್ನು ನೀಡಿ ವಾಪಸ್ ಕಳುಹಿಸುತ್ತಾರೆ ಎಂದು ಕ್ಲಿನಿಕ್‌ಗೆ ಬರುವ ರೋಗಿಗಳು ನೋವು ತೋಡಿಕೊಂಡಿದ್ದಾರೆ.ಆರೋಗ್ಯ ಸೇವೆಗಳಿಗಾಗಿ ಜನ ಪರದಾಡುವ ಸ್ಥಿತಿಯನ್ನು ಸರ್ಕಾರ ಸೃಷ್ಟಿಸಬಾರದು. ಬಡವರು, ಜನಸಾಮಾನ್ಯರ ಆರೋಗ್ಯದ ವಿಷಯದಲ್ಲಿ ಸರ್ಕಾರ ಉದಾಸೀನದಿಂದ ನಡೆದುಕೊಳ್ಳಬಾರದು. ವೈದ್ಯರು ಹಾಗೂ ಸಿಬ್ಬಂದಿಗೆ ನಿಗದಿಪಡಿಸಿರುವ ಸಂಬಳವನ್ನು ಸರಿಯಾಗಿ ನೀಡಬೇಕು. ಯಾವುದೇ ಸರ್ಕಾರದ ಯೋಜನೆಯಾದರೂ ಜನಸ್ನೇಹಿಯಾಗಿದ್ದರೆ ಉತ್ತೇಜನ ನೀಡಬೇಕು ಎಂದು ಸ್ಥಳೀಯ ನಿವಾಸಿ ನಾಗರಾಜ್ ಸರ್ಕಾರಕ್ಕೆ ಆಗ್ರಹಿಸಿದರು.ನಿಷ್ಕ್ರಿಯ ಬ್ಯಾಂಕ್ ಖಾತೆಗಳನ್ನು ಸಕ್ರಿಯಗೊಳಿಸುವ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ. ಈ ತಿಂಗಳಿನಿಂದ ಎಲ್ಲಾ ಸಿಬ್ಬಂದಿಯ ಸಂಬಳ ಸರಿಯಾದ ಸಮಯಕ್ಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಖಾಸಗಿ ಕಟ್ಟಡಗಳಲ್ಲಿರುವ ಕ್ಲಿನಿಕ್‌ಗಳಿಗೆ ಉಳಿಕೆ ಸಹಿತ ಬಾಡಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ.
-ಲಕ್ಷ್ಮೀಪತಿ, ಬೊಮ್ಮನಹಳ್ಳಿ ವಲಯ ಕಾರ್ಯಕ್ರಮ ನಿರ್ವಾಹಕಪ್ರತಿ ತಿಂಗಳು 40 ಸಾವಿರ ಬಾಡಿಗೆ ನೀಡುವುದಾಗಿ ಕರಾರು ಮಾಡಿಕೊಂಡಿದ್ದು, ಕಳೆದ ಐದಾರು ತಿಂಗಳಿಂದ ಬಾಡಿಗೆ ಸರಿಯಾಗಿ ನೀಡುತ್ತಿಲ್ಲ. ಕೇಳಿದರೆ ಅನುದಾನದ ಕೊರತೆ ಎಂದು ಸಬೂಬು ಹೇಳುತ್ತಾರೆ. ಖಾಲಿ ಮಾಡಿಸೋಣ ಎಂದರೆ ಜನಸಾಮಾನ್ಯರಿಗೆ ತೊಂದರೆ ಆಗಬಹುದೆಂಬ ದೃಷ್ಟಿಯಿಂದ ಸುಮ್ಮನಾಗಿದ್ದೇವೆ.-ಅರುಣ್ ಸಿಂಹ, ಕಾಳೇನ ಅಗ್ರಹಾರದ ನಮ್ಮ ಕ್ಲಿನಿಕ್ ಕಟ್ಟಡ ಮಾಲೀಕ