ತಾಂಬಾದಲ್ಲಿ ಶೀಘ್ರ ಸರ್ಕಾರಿ ಕಾಲೇಜು ಪ್ರಾರಂಭ: ಶಾಸಕ ಮನಗೂಳಿ

| Published : Nov 25 2025, 03:15 AM IST

ಸಾರಾಂಶ

ಶೀಘ್ರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ತಾಂಬಾ ಗ್ರಾಮದಲ್ಲಿ ಆರಂಭಗೊಳಿಸಲಾಗುವುದು ಎಂದು ಸಿಂದಗಿ ಅಶೋಕ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಂಬಾ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲು ಸಹಾಯ ಮಾಡಿದ ಸಮಾಜ ಸೇವಕ ಪ್ರದೀಪ ಗುತ್ತೆದಾರ ಕಾರ್ಯ ಶ್ಲಾಘನೀಯ. ಶೀಘ್ರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ತಾಂಬಾ ಗ್ರಾಮದಲ್ಲಿ ಆರಂಭಗೊಳಿಸಲಾಗುವುದು ಎಂದು ಸಿಂದಗಿ ಅಶೋಕ ಮನಗೂಳಿ ಹೇಳಿದರು.

ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಳವಡಿಸಿದ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಬೌದ್ಧಿಕ ಹಾಗೂ ದೈಹಿಕವಾಗಿ ಸದೃಢರನ್ನಾಗಿ ಮಾಡಲು ಸ್ಮಾರ್ಟ್ ಕ್ಲಾಸ್ ಪೂರಕವಾಗಿದೆ. ಸಿಎಂ ಸಿದ್ದರಾಮಯ್ಯನವರು ಶಿಕ್ಷಣಕ್ಕಾಗಿ ವಿಶೇಷ ಅನುದಾನ ಮೀಸಲಿಟ್ಟಿದ್ದಾರೆ. ಇಲ್ಲಿಯ ಕೋಣೆಗಳ ನಿರ್ಮಾಣಕ್ಕಾಗಿ ವಿಪ ಸದಸ್ಯ ಪ್ರಕಾಶ ಹುಕ್ಕೆರಿಯವರ ವಿಶೇಷ ಅನುದಾನದಲ್ಲಿ ₹೨೫ ಲಕ್ಷ ಮಂಜೂರು ಮಾಡಲಾಗಿದೆ ಹಾಗೂ ಈ ಶಾಲೆ ಕಂಪೌಂಡ ನಿರ್ಮಾಣಕ್ಕಾಗಿ ಮುಂಬರುವ ದಿನಗಳಲ್ಲಿ ₹೧೦ ಲಕ್ಷ ನೀಡಲಾಗುವುದು ಎಂದರು.

ಇಲ್ಲಿನ ವಿದ್ಯಾರ್ಥಿಗಳು ಪದವಿ ಪೂರ್ವ ಕಾಲೇಜಿನ ಶಿಕ್ಷಣಕ್ಕಾಗಿ ಅಲೆದಾಡುವುದನ್ನು ತಪ್ಪಿಸಲು ಮತ್ತು ಪೋಷಕರ ಕಾಳಜಿಗೆ ಸ್ಪಂದಿಸಲು ನನ್ನ ಕ್ಷೇತ್ರದಲ್ಲಿ ೩ ಕಾಲೇಜುಗಳು, ೮ ಪ್ರೌಢ ಶಾಲೆಗಳು, ೩ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ವಸತಿ ನಿಲಯಗಳಿಗೆ ಹೆಚ್ಚಿನ ಮಹತ್ವ ನೀಡಿ ತಾಂಬಾ ಗ್ರಾಮದಲ್ಲಿ ಮಹಿಳಾ ವಸತಿ ನಿಲಯದ ಕಟ್ಟಡ ಪ್ರಾರಂಭಗೊಳಿಸಲಾಗಿದೆ. ಗ್ರಾಮಸ್ಥರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ ಮಲ್ಲಯ್ಯ ಸಾರಂಗಮಠ ಮಾತನಾಡಿ, ಮಕ್ಕಳಿಗೆ ಉತ್ತಮ ಆಚಾರ, ವಿಚಾರ, ಜ್ಞಾನ ಮತ್ತು ಕೌಶಲ್ಯ ಸತತ ಮನದಲ್ಲಿ ತುಂಬುವಂತಹ ಕಾರ್ಯವಾಗಬೇಕು ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಸಿದ್ದು ಹತ್ತಳಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕರಾದ ಪ್ರದೀಪ ಗುತ್ತೇದಾರ, ಕಾಂಗ್ರೆಸ್ ಯುವನಾಯಕ ಅಪ್ಪಣ್ಣ ಕಲ್ಲೂರ, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ಗ್ರಾಪಂ ಉಪಾಧ್ಯಕ್ಷ ರಾಮಚಂದ್ರ ದೊಡ್ಡಮನಿ, ಗ್ರಾಪಂ ಸದಸ್ಯ ರಾಚಪ್ಪ ಗಳೇದ, ಮಹ್ಮದ ವಾಲಿಕಾರ, ಕಾಂತನಗೌಡ ಪಾಟೀಲ, ಮುಖ್ಯಗುರು ಪಿ.ಕೆ.ಬಿರಾದಾರ ಸೇರಿದಂತೆ ಮತ್ತಿತರರು ಇದ್ದರು. ವರ್ಗಾವಣೆಗೊಂಡ ಎಸ್.ಆರ್.ಕುಂಬಾರ ಹಾಗೂ ವ್ಹಿ.ಆರ್.ಹಂಚನಾಳ ಶಿಕ್ಷಕರನ್ನು ವೇದಿಕೆ ಮೇಲೆ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳು ಪ್ರಾರ್ಥಿಸಿ, ಶಿಕ್ಷಕ ಸದಾಶಿವ ಅಂಬಾರೆ ಸ್ವಾಗತಿಸಿ, ಶಿಕ್ಷಕಿ ಜ್ಯೋತಿ ಕನ್ನೂರ ನಿರೂಪಿಸಿ, ಗೀತಾ ಬಂದಿ ವಂದಿಸಿದರು.