ಲಿಂಗರಾಜು ಕೋರಾ

ಕನ್ನಡಪ್ರಭ ವಾರ್ತೆ, ಬೆಂಗಳೂರುಕಳೆದ ಸಾಲಿನ (2024-25) ದ್ವಿತೀಯ ಪಿಯುಸಿಯಲ್ಲಿ ಅತೀ ಕಡಿಮೆ ಫಲಿತಾಂಶ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ದೇಶದಲ್ಲೇ 2ನೇ ಸ್ಥಾನಕ್ಕೆ ಕುಸಿದಿದ್ದ ಕರ್ನಾಟಕವು ಈ ಬಾರಿ ಶೇ.86.48ರಷ್ಟು ಐತಿಹಾಸಿಕ ಫಲಿತಾಂಶ ದಾಖಲಿಸಿದೆ. ಇದಕ್ಕೆ ದೊಡ್ಡ ಕೊಡುಗೆ ಸರ್ಕಾರಿ ಹಾಗೂ ಅನುದಾನಿತ ಪಿಯು ಕಾಲೇಜುಗಳದ್ದು!ಪ್ರತೀ ವರ್ಷ ಅನುದಾನರಹಿತ ಖಾಸಗಿ ಕಾಲೇಜುಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಫಲಿತಾಂಶ ದಾಖಲಿಸುತ್ತಿದ್ದ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಫಲಿತಾಂಶ ಈ ಬಾರಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ಸಾಲಿನಲ್ಲಿ ಶೇ.57.11ರಷ್ಟಿದ್ದ ಸರ್ಕಾರಿ ಕಾಲೇಜುಗಳ ಫಲಿತಾಂಶ ಈ ಬಾರಿ ಶೇ.78.72 ರಷ್ಟಾಗಿದ್ದು, ಶೇ.21ರಷ್ಟು ಏರಿಕೆಯಾಗಿದೆ. ಅನುದಾನಿತ ಪಿಯು ಕಾಲೇಜುಗಳಲ್ಲಿ ಕೂಡ ಶೇ.20ರಷ್ಟು ಫಲಿತಾಂಶ ಹೆಚ್ಚಾಗಿದೆ. ಕಳೆದ ಸಾಲಿನಲ್ಲಿ ಶೇ.62.69ರಷ್ಟಿದ್ದ ಈ ಕಾಲೇಜುಗಳ ಒಟ್ಟಾರೆ ಫಲಿತಾಂಶ ಈ ಬಾರಿ ಶೇ.82.91ಕ್ಕೆ ಏರಿಕೆಯಾಗಿದೆ. ಆದರೆ, ಕಳೆದ ಸಾಲಿನಲ್ಲಿ ಶೇ.82.68ರಷ್ಟಿದ್ದ ಅನುದಾನರಹಿತ ಖಾಸಗಿ ಪಿಯು ಕಾಲೇಜುಗಳ ಫಲಿತಾಂಶ ಈ ಬಾರಿ ಶೇ.90.73ರಷ್ಟು ಬಂದಿದೆ. ಸುಮಾರು ಶೇ.7ರಷ್ಟು ಮಾತ್ರ ಫಲಿತಾಂಶ ಹೆಚ್ಚಾಗಿದೆ.ಫಲಿತಾಂಶ ಸುಧಾರಣೆಗೆ ಕಾರಣವೇನು?:‘ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಫಲಿತಾಂಶ ಉತ್ತಮಗೊಳ್ಳಲು ಪ್ರಮುಖ ಕಾರಣ ಪರೀಕ್ಷಾ ಪೂರ್ವ ಸಿದ್ಧತೆಯಲ್ಲಿ ಸಮಾನತೆ ತಂದಿರುವುದು. ಎಲ್ಲ ಕಾಲೇಜು ಮಕ್ಕಳಿಗೂ ಒಂದೇ ಮಾದರಿಯ ಪ್ರಶ್ನೆ ಪತ್ರಿಕೆ, ಬ್ಲೂಪ್ರಿಂಟ್‌ ಮತ್ತು ಕ್ವಶ್ಚನ್‌ ಬ್ಯಾಂಕ್ ನೀಡಲಾಯಿತು. ಇನ್ನು, ವಾರ್ಷಿಕ ಪರೀಕ್ಷೆಯಷ್ಟೇ ಕಟ್ಟುನಿಟ್ಟಾಗಿ ಸರ್ಕಾರಿ ಕಾಲೇಜು ಮಕ್ಕಳಿಗೆ ಎರಡು ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಯಿತು. ಈ ಪೂರ್ವ ಸಿದ್ಧತೆ ಪರೀಕ್ಷೆಯಲ್ಲಿ ಫೇಲಾದ, ಅದರಲ್ಲೂ ಕೆಲವೇ ವಿಷಯದಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಗುರುತಿಸಿ ಹೆಚ್ಚು ಗಮನ ವಹಿಸಿ ಅವರ ಕಲಿಕೆ ಉತ್ತಮಗೊಳಿಸುವ ಕೆಲಸವನ್ನು ನಮ್ಮ ಉಪನ್ಯಾಸಕರು ಮಾಡಿದರು. ಪೂರ್ವ ಸಿದ್ಧತಾ ಪರೀಕ್ಷೆಗಳನ್ನೇ ವಾರ್ಷಿಕ ಪರೀಕ್ಷೆಯಂತೆ ನಡೆಸಿದ್ದರಿಂದ ವಾರ್ಷಿಕ ಪರೀಕ್ಷೆಯನ್ನು ಭಯ, ಆತಂಕವಿಲ್ಲದೆ ಮಕ್ಕಳು ಎದುರಿಸಿದರು’ ಎನ್ನುತ್ತಾರೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರಾದ ಭರತ್‌.ಕಮ್ಮಿ ಫಲಿತಾಂಶದ 2ನೇ ರಾಜ್ಯವಾಗಿದ್ದ ಕರ್ನಾಟಕ:2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕರ್ನಾಟಕವು ದಾಖಲೆಯ ಶೇ.81.15 ರಷ್ಟು ಫಲಿತಾಂಶದೊಂದಿಗೆ ದೇಶದಲ್ಲಿ ಅತಿ ಹೆಚ್ಚು ಫಲಿತಾಂಶ ನೀಡಿದ ರಾಜ್ಯಗಳ ಪಟ್ಟಿಯಲ್ಲಿ 18ನೇ ಸ್ಥಾನ ಪಡೆದಿತ್ತು. ಆದರೆ, 2025ರಲ್ಲಿ ಒಟ್ಟಾರೆ ಫಲಿತಾಂಶ ಶೇ.73.45ಕ್ಕೆ ಕುಸಿದು 18ನೇ ಸ್ಥಾನದಿಂದ ಏಕಾಏಕಿ 27ನೇ ಸ್ಥಾನಕ್ಕೆ ಇಳಿದಿತ್ತು. ಅರ್ಥಾತ್‌ ದೇಶದಲ್ಲಿ ಅತೀ ಕಡಿಮೆ ಫಲಿತಾಂಶ ನೀಡಿದ ರಾಜ್ಯಗಳಲ್ಲಿ ಕರ್ನಾಟಕದ್ದು 2ನೇ ಸ್ಥಾನವಾಗಿತ್ತು. ಕರ್ನಾಟಕಕ್ಕಿಂತ ಕಡಿಮೆ ಶೇ.73.37ರಷ್ಟು ಫಲಿತಾಂಶ ನೀಡಿ ತೆಲಂಗಾಣ ಮೊದಲ ಸ್ಥಾನದಲ್ಲಿತ್ತು. ಈಗ 2026ರಲ್ಲಿ ಕರ್ನಾಟಕದ ಫಲಿತಾಂಶ ಶೇ.86.48 ರಷ್ಟು ಬಂದಿರುವುದರಿಂದ ಉತ್ತಮ ಫಲಿತಾಂಶ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಮತ್ತೆ 18 ಅಥವಾ ಅದಕ್ಕೂ ಉತ್ತಮ ಸ್ಥಾನಕ್ಕೇರುವ ಸಾದ್ಯತೆ ಇದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು. ಈ ಮಧ್ಯೆ, ದೇಶದಲ್ಲಿ ಅತಿ ಹೆಚ್ಚು ಫಲಿತಾಂಶ ನೀಡುತ್ತಿರುವ ಟಾಪ್‌ 3 ರಾಜ್ಯಗಳ ಪಟ್ಟಿಯಲ್ಲಿ ರಾಜಸ್ಥಾನ, ಮಣಿಪುರ ಮತ್ತು ತಮಿಳುನಾಡು ರಾಜ್ಯಗಳಿವೆ.ಕೋಟ್‌ನಮ್ಮ ಮುಂದಿನ ಗುರಿ ಖಾಸಗಿ ಪಿಯು ಕಾಲೇಜುಗಳಿಗಿಂತ ಹೆಚ್ಚು ಫಲಿತಾಂಶವನ್ನು ಸರ್ಕಾರಿ ಕಾಲೇಜುಗಳಿಂದ ತರುವ ನಿಟ್ಟಿನಲ್ಲಿ ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.- ಭರತ್‌, ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)==ಬಾಕ್ಸ್‌5 ವರ್ಷದಲ್ಲಿ ಕಾಲೇಜುವಾರು ಪಿಯು ಫಲಿತಾಂಶವರ್ಷ ಸರ್ಕಾರಿ ಅನುದಾನಿತ ಅನುದಾನರಹಿತ ಕಾರ್ಪೊರೇಷನ್‌ ವಸತಿ ಕಾಲೇಜು2021-22 52.48% 62.05% 76.06% 55.72% 72.96%2022-23 63.63% 71.25% 83.71% 56.05% 80.06%2023-24 75.29% 79.82% 90.46% 76.81% 86.76%2024-25 57.11% 62.69% 82.66% 68.88% 78.51%2025-26 78.72% 82.91% 90.73% 77.78% 93.99%