ಅಲ್ಪಸಂಖ್ಯಾತರ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸರ್ಕಾರ ಬದ್ಧ : ತಮ್ಮಯ್ಯ

| Published : Oct 27 2025, 12:15 AM IST

ಅಲ್ಪಸಂಖ್ಯಾತರ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸರ್ಕಾರ ಬದ್ಧ : ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುಅಲ್ಪಸಂಖ್ಯಾತರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಸುಮಾರು ₹5 ಕೋಟಿ ವೆಚ್ಚದಲ್ಲಿ ಸ್ವಂತ ಶಾಲಾ ಕಟ್ಟಡಕ್ಕೆ ಅನುದಾನ ಬಿಡುಗಡೆಗೊಳಿಸಿ ಮಕ್ಕಳ ಸಮಗ್ರ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ಮೌಲಾನಾ ಆಜಾದ್ ಮಾದರಿ ಶಾಲೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಲ್ಪಸಂಖ್ಯಾತರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಸುಮಾರು ₹5 ಕೋಟಿ ವೆಚ್ಚದಲ್ಲಿ ಸ್ವಂತ ಶಾಲಾ ಕಟ್ಟಡಕ್ಕೆ ಅನುದಾನ ಬಿಡುಗಡೆಗೊಳಿಸಿ ಮಕ್ಕಳ ಸಮಗ್ರ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ವಾಜಪೇಯಿ ವಸತಿ ಬಡಾವಣೆಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ಧ ಮೌಲಾನಾ ಆಜಾದ್ ಮಾದರಿ ಶಾಲೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಜಾತ್ಯಾತೀತ ನಿಲುವು ಹೊಂದಿರುವ ಮುಖ್ಯಮಂತ್ರಿಯವರು ಕಳೆದ ಸರ್ಕಾರದ ಅವಧಿಯಲ್ಲೇ ಅಲ್ಪ ಸಂಖ್ಯಾತರ ಮಕ್ಕಳಿಗೆ ಶಾಲೆ ತೆರೆದು ವಿದ್ಯಾವಂತರಾಗಿಸಲು ಚಿಂತನೆ ನಡೆಸಿ ತೀರ್ಮಾನಿಸಿದ್ದರು. ಇದೀಗ ಮತ್ತೆ ಅವರದೇ ಸರ್ಕಾರದಲ್ಲೇ ರಾಜ್ಯದಲ್ಲಿ 200 ಶಾಲೆಗಳನ್ನು ತೆರೆಯಲು ಅನುಮೋದಿಸಿದ್ದು ಅದರಂತೆ ಚಿಕ್ಕಮಗಳೂರು ಕ್ಷೇತ್ರಕ್ಕೆ ಒಂದು ಶಾಲೆ ಮಂಜೂರಾಗಿದೆ ಎಂದರು.ಸಮಾಜದಲ್ಲಿರುವ ಮುಸ್ಲೀಂ, ಕ್ರಿಶ್ಚಿಯನ್, ಜೈನ, ಸಿಖ್ ಜನಾಂಗದ ಎಲ್ಲಾ ಧರ್ಮಗಳು ಅಲ್ಪಸಂಖ್ಯಾತರು. ಈ ಹಿಂದೆ ಆಂಗ್ಲ ಭಾಷೆ ವ್ಯಾಮೋಹದಿಂದ ಶಾಲೆ ಬಿಟ್ಟ ಅನೇಕ ಅಲ್ಪಸಂಖ್ಯಾತರ ಮಕ್ಕಳನ್ನು ಮರಳಿ ಶಾಲೆಗೆ ದಾಖಲಿಸಿ, ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದೇ ಮೂಲ ಉದ್ದೇಶ ಎಂದು ಹೇಳಿದರು.ಈ ಹಿಂದೆ ಮಾದರಿ ಶಾಲೆಯನ್ನು ಇಂದಾವರ ಸಮೀಪದಲ್ಲಿ ತೆರೆಯುವ ಉದ್ದೇಶವಿತ್ತು. ಆದರೆ, ಕೆಲವು ತಾಂತ್ರಿಕ ಸಮಸ್ಯೆಯಿತ್ತು. ಹಾಗಾಗಿ ಅತಿ ಹೆಚ್ಚು ಅಲ್ಪಸಂಖ್ಯಾತರು ವಾಸಿಸುವ ಬಡಾವಣೆಯಲ್ಲಿ ತೆರೆದರೆ, ಸುತ್ತಮುತ್ತಲಿನ ಅಲ್ಪಸಂಖ್ಯಾತ ಮಕ್ಕಳಿಗೆ ಅನುಕೂಲವಾಗಲಿದೆ ಎಂಬುದನ್ನು ಮನಗಂಡು ಉಪ್ಪಳ್ಳಿ ಸಮೀಪ ನಿರ್ಮಿಸಲು ಮುಂದಾಗಿದ್ದೇವೆ ಎಂದರು.

ಭಾರತ ಜಾತ್ಯಾತೀತ ರಾಷ್ಟ್ರ. ಆಯಾಯ ಸಂಸ್ಕೃತಿ, ಸಂಸ್ಕಾರ ಪಾಲಿಸುವ ಜೊತೆಗೆ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಪ್ರಮುಖವಾಗಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಅನುದಾನ ಬಿಡುಗಡೆಗೊಳಿಸಿ ಬಡವರ್ಗದ ಮಕ್ಕಳ ಓದಿಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಹೇಳಿದರು.

ನಗರಸಭೆ ಸದಸ್ಯ ಮುನೀರ್ ಅಹ್ಮದ್ ಮಾತನಾಡಿ, ಉಪ್ಪಳ್ಳಿ ಬಡಾವಣೆ ವಿಶೇಷತೆಯಿಂದ ಕೂಡಿದೆ. ಈಚೆಗೆ ನಮ್ಮ ಕ್ಲೀನಿಕ್ ತೆರೆದು ಸ್ಥಳೀಯರ ಆರೋಗ್ಯ ಕಾಪಾಡುತ್ತಿದ್ದು ಇದೀಗ ಅಲ್ಪಸಂಖ್ಯಾತರ ಮಕ್ಕಳ ಸಮಗ್ರ ವಿದ್ಯಾಭ್ಯಾಸಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಮುಂದಾಗುವ ಮೂಲಕ ನೂರಾರು ಮಕ್ಕಳಿಗೆ ಸಹಾಯ ಹಸ್ತ ಚಾಚಿರುವುದು ಉತ್ತಮ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಬಿ. ಶೀಲಾ ದಿನೇಶ್, ನಗರಸಭೆ ಸದಸ್ಯರಾದ ಖಲಂಧರ್, ಜಾವೀದ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ಸದಸ್ಯರಾದ ಸುದೀಪ್, ಗುಣವತಿ, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಅನ್ಸರ್ ಆಲಿ, ಮುಖಂಡರಾದ ತನೋಜ್‌ನಾಯ್ಡು, ಜಯ ರಾಜ್, ರಫೀಕ್ ಅಹ್ಮದ್, ಅಪ್ರೋಜ್, ಖಲೀಲ್, ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಮಾರ್ಕಂಡಯ್ಯ, ಶಾಲಾ ಶಿಕ್ಷಕಿ ಯುವರಾಣಿ ಉಪಸ್ಥಿತರಿದ್ದರು.

24 ಕೆಸಿಕೆಎಂ 2ಚಿಕ್ಕಮಗಳೂರಿನ ವಾಜಪೇಯಿ ವಸತಿ ಬಡಾವಣೆಯಲ್ಲಿ ಶುಕ್ರವಾರ ಮೌಲಾನಾ ಆಜಾದ್ ಮಾದರಿ ಶಾಲೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್‌.ಡಿ. ತಮ್ಮಯ್ಯ ಚಾಲನೆ ನೀಡಿದರು.