ಸಾರಾಂಶ
ಕಳೆದ ಮೂರು ವರ್ಷಗಳಿಂದ ಭೂಮಿಯನ್ನು ಉಳಿಸಿಕೊಳ್ಳಲು ರೈತರು ಹೋರಾಟ ನಡೆಸುತ್ತಿದ್ದಾರೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಸುಮಾರು 13 ಗ್ರಾಮಗಳ ಕೃಷಿ ಭೂಮಿಯನ್ನು ಈ ಹಿಂದೆ ಬಿಜೆಪಿ ಸರ್ಕಾರ ಕೈಗಾರಿಕಾ ಉದ್ದೇಶಕ್ಕೆ ಕಾಪೋರೇಟ್ ನವರಿಗೆ ನೀಡಲು ಮುಂದಾದಾಗ ವಿರೋಧಿಸಿದ್ದ ಕಾಂಗ್ರೆಸ್ ಇಂದು ಅದೇ ಕೇಲಸವನ್ನು ಮಾಡಲು ಮುಂದಾಗಿದೆ ಎಂದು ಅಖಿಲ ಭಾರತ ಯುನೈಟೆಡ್ ಕಿಸಾನ್ ಸಭಾ ರಾಜ್ಯ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ ಹೇಳಿದರು.ಕಳೆದ 3 ವರ್ಷಗಳಿಂದ ಭೂಮಿಯನ್ನು ಉಳಿಸಿಕೊಳ್ಳಲು ರೈತರು ಹೋರಾಟ ನಡೆಸುತ್ತಿದ್ದಾರೆ. ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ವಿರೋಧ ಪಕ್ಷದವರಾಗಿದ್ದಾಗ ಸ್ಥಳಕ್ಕೆ ತೆರಳಿ, ರೈತರಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದರು. ಈಗ ಅವರೇ ಮುಖ್ಯ ಮಂತ್ರಿಗಳಾಗಿದ್ದು, ಮತ್ತೊಮ್ಮೆ ರೈತರಿಂದ ಕೃಷಿ ಭೂಮಿ ಕಸಿಯಲು ಮುಂದಾಗಿದ್ದಾರೆ. ಜೂ.25 ರಂದು ರಾಜ್ಯದ ರೈತ ದಲಿತ ಸಂಘಟನೆಗಳು, ಪ್ರಗತಿಪರ ಚಿಂತಕರು, ಚಳುವಳಿಗಾರರು ಸೇರಿದಂತೆ ಸಾವಿರಾರು ಹೋರಾಟಗಾರರು ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸುವ ಸಂದರ್ಭ 500 ಕ್ಕೂ ಹೆಚ್ಚಿನ ಹೋರಾಟಗಾರರು ಹಾಗೂ ರೈತರನ್ನು ಬಂಧಿಸಲಾಗಿದೆ.
ಸರ್ಕಾರದ ರೈತ ವಿರೋಧಿ ನೀತಿಯನ್ನು ಅಖಿಲ ಭಾರತ ಯುನೈಟೆಡ್ ಕಿಸಾನ್ ಸಭಾದ ಕೊಡಗು ಜಿಲ್ಲಾ ಸಮಿತಿ ಖಂಡಿಸಿದ್ದು, ಕೂಡಲೇ ಬಂಧಿಸಿರುವವರನ್ನು ಬಿಡುಗಡೆ ಮಾಡಬೇಕು. ರೈತರಿಂದ ಕೃಷಿ ಭೂಮಿಯನ್ನು ಕಿತ್ತುಕೊಳ್ಳಬಾರದು ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ ಒತ್ತಾಯಿಸಿದ್ದಾರೆ.