ಮಹಾಬಲರಾವ್‌ಗೆ ಸರ್ಕಾರದಿಂದ ಅಗೌರವ: ಡಿ.ಎನ್‌.ಜೀವರಾಜ್

| Published : Nov 19 2025, 12:15 AM IST

ಮಹಾಬಲರಾವ್‌ಗೆ ಸರ್ಕಾರದಿಂದ ಅಗೌರವ: ಡಿ.ಎನ್‌.ಜೀವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪದ ಸಹಕಾರ ದುರೀಣ, ಬ್ರಾಹ್ಮಣ ಮಹಾ ಸಭಾದ ಮುಖಂಡ ಹಾಗೂ ಬಿಜೆಪಿ ಮುಖಂಡ ಮಹಾಬಲರಾವ್ ಅವರಿಗೆ ಸರ್ಕಾರವು ಸಹಕಾರ ರತ್ನ ಪ್ರಶಸ್ತಿ ಘೋಷಣೆ ಮಾಡಿ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಹೋಗಿದ್ದಾಗ ಪ್ರಶಸ್ತಿ ಪಟ್ಟಿಯಿಂದ ಅವರನ್ನು ಕೈಬಿಟ್ಟು ಅವರಿಗೆ ಅಗೌರವ ತೋರಿಸಿದೆ ಎಂದು ಮಾಜಿ ಸಚಿವ ಡಿ.ಎನ್‌.ಜೀವರಾಜ್ ಆರೋಪಿಸಿದರು.

ನರಸಿಂಹರಾಜಪುರ: ಕೊಪ್ಪದ ಸಹಕಾರ ದುರೀಣ, ಬ್ರಾಹ್ಮಣ ಮಹಾ ಸಭಾದ ಮುಖಂಡ ಹಾಗೂ ಬಿಜೆಪಿ ಮುಖಂಡ ಮಹಾಬಲರಾವ್ ಅವರಿಗೆ ಸರ್ಕಾರವು ಸಹಕಾರ ರತ್ನ ಪ್ರಶಸ್ತಿ ಘೋಷಣೆ ಮಾಡಿ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಹೋಗಿದ್ದಾಗ ಪ್ರಶಸ್ತಿ ಪಟ್ಟಿಯಿಂದ ಅವರನ್ನು ಕೈಬಿಟ್ಟು ಅವರಿಗೆ ಅಗೌರವ ತೋರಿಸಿದೆ ಎಂದು ಮಾಜಿ ಸಚಿವ ಡಿ.ಎನ್‌.ಜೀವರಾಜ್ ಆರೋಪಿಸಿದರು.

ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಪ್ಪದ ಮಹಾಬಲರಾವ್ ಅವರಿಗೆ ರಾಜ್ಯ ಸಹಕಾರ ಮಹಾ ಮಂಡಳದಿಂದ ಪತ್ರ ಬರೆದು ನಿಮ್ಮ ಸೇವೆ ಗುರುತಿಸಿ ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು ನ.14 ರಂದು ಬೆಂಗಳೂರಿನ ಗಾಯಿತ್ರಿ ವಿಹಾರ್‌ನಲ್ಲಿ ನಡೆಯುವ ಪ್ರಶಸ್ತಿ ಸಮಾರಂಭಕ್ಕೆ ಬರಲು ಆಹ್ವಾನಿಸಲಾಗಿತ್ತು. ಆದರೆ, ಮಹಾಬಲರಾವ್ ಬೆಂಗಳೂರಿಗೆ ಹೋದಾಗ ಸರ್ಕಾರದ ಸೂಚನೆಯಿಂದ ನಿಮ್ಮನ್ನು ಪ್ರಶಸ್ತಿ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ. ಮಹಾಬಲರಾವ್ ಅವರು ಬಹಳ ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಕೊಪ್ಪ ಯಸ್ಕಾನ್ ಫೌಂಡೇಷನ್ ಅಧ್ಯಕ್ಷರಾಗಿದ್ದಾರೆ. ಜಿಲ್ಲಾ ಯೂನಿಯನ್ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ರಾಜ್ಯ ಸೌಹಾರ್ದ ಫೆಡರೇಷನ್ ನಿರ್ದೇಶಕರಾಗಿದ್ದರು. ಸಹಕಾರ ರತ್ನ ಪ್ರಶಸ್ತಿ ಪಡೆಯಲು ಎಲ್ಲಾ ಅರ್ಹತೆ ಅವರಿಗೆ ಇತ್ತು. ಈ ಘಟನೆಯ ಹಿಂದೆ ಶಾಸಕರ ಸೇಡಿನ ರಾಜಕಾರಣ ಎದ್ದು ಕಾಣುತ್ತಿದೆ ಎಂದು ದೂರಿದ ಅವರು, ಶೃಂಗೇರಿಯಲ್ಲೂ ಬಿಜೆಪಿಗರ ಅಂಗಡಿಗಳನ್ನು ಮಾತ್ರ ಕಿತ್ತು ಹಾಕಿದ್ದಾರೆ. ಶಾಸಕರ ಈ ವರ್ತನೆಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ಹಣ ಬಿಡುಗಡೆ ಬಗ್ಗೆ ಮಾಹಿತಿ ನೀಡಿ:

ರಸ್ತೆ ಗುಂಡಿ ಮುಚ್ಚುವ ಕಾರ್ಯ ಈಗ ಪ್ರಾರಂಭವಾಗಿದೆ. ಕೊರಲಕೊಪ್ಪ- ಎನ್‌.ಆರ್.ಪುರ ಮಾರ್ಗದ ರಸ್ತೆಯಲ್ಲಿ ಗುಂಡಿ ಮುಚ್ಚುತ್ತಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಕಿತ್ತು ಬರಲಿದೆ. ನಾನು ಶಾಸಕನಾಗಿದ್ದಾಗ ರಸ್ತೆ ಮಾಡಿದ ಮೇಲೆ 8 ರಿಂದ 10 ವರ್ಷ ರಸ್ತೆ ಹಾಳಾಗುತ್ತಿರಲಿಲ್ಲ. ಈಗ 8 ತಿಂಗಳಲ್ಲೇ ಹಾಳಾಗುತ್ತಿದೆ. ಶಾಸಕರು ಮಳೆಯ ಕಾರಣ ಕೊಡುತ್ತಿದ್ದಾರೆ. ಆಗಲೂ ಮಳೆ ಇದೇ ರೀತಿ ಸುರಿಯುತ್ತಿತ್ತು. ಈ ಹಿಂದೆ ಕಾಮಗಾರಿ ಮಾಡುವಾಗ ಕಾಮಗಾರಿ ವಿವರವನ್ನು ಬ್ಯಾನರ್‌ನಲ್ಲಿ ಹಾಕಲಾಗುತ್ತಿತ್ತು. ಈಗ ನಿಂತು ಹೋಗಿದೆ. ನೀವು ಶಾಸಕರಾದ 7.50 ವರ್ಷದಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಎಂದು ಪಟ್ಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕೊಪ್ಪ, ನರಸಿಂಹರಾಜಪುರಕ್ಕೆ ಅಮೃತ-2.0 ಯೋಜನೆಯಡಿ ತುಂಗಾ ನದಿಯಿಂದ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿದೆ. ನರಸಿಂಹರಾಜಪುರ ಸಮೀಪದ ಭದ್ರಾ ಹಿನ್ನೀರಿನಿಂದ ನೀರು ತರಲು ಕೇವಲ 5 ಕಿ.ಮೀ.ಸಾಕಾಗಿತ್ತು. ಈಗ 25 ಕಿ.ಮೀ. ದೂರದ ಮುತ್ತಿನಕೊಪ್ಪದಿಂದ ತುಂಗಾ ನದಿಯಿಂದ ನೀರು ತರುವ ಯೋಜನೆ ರೂಪಿಸಲಾಗಿದ್ದು, ಇದರಿಂದ ಅನಗತ್ಯವಾಗಿ ಹಣ ಪೋಲಾಗಲಿದೆ ಎಂದರು.

ಕೊಪ್ಪ ತಾಲೂಕಿನಲ್ಲಿ ಹರಿಹರಪುರ ತುಂಗಾ ನದಿಯಿಂದ ನೀರು ತರಲು ಯೋಜನೆ ಈ ಹಿಂದಿನಿಂದಲೂ ಇದ್ದು ಕೊಪ್ಪ ಪಟ್ಟಣದಲ್ಲಿ ಪೈಪ್‌ಗಳು ಚೆನ್ನಾಗಿಯೇ ಇತ್ತು. ಅದನ್ನು ಅನಗತ್ಯವಾಗಿ ಅಗೆಯಲಾಗಿದೆ. ಹರಿಹರಪುರದಿಂದ ಈ ಹಿಂದೆ ಹಾಕಿದ್ದ ಪೈಪ್ ಹಾಳಾಗಿದ್ದು ಆ ಪೈಪ್ ಮಾತ್ರ ಹೊಸದಾಗಿ ಹಾಕಿದರೆ ಸಾಕಾಗಿತ್ತು ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನೀಲೇಶ್, ಅರುಣಕುಮಾರ್, ಆಶೀಶ್ ಕುಮಾರ್, ಎನ್‌.ಎಂ.ಕಾಂತರಾಜ್, ಸುರಭಿ ರಾಜೇಂದ್ರ, ಪರ್ವೀಜ್, ಕೆಸವಿ ಮಂಜುನಾಥ್ ಇದ್ದರು.

ನ್ಯಾಷನಲ್ ಹೈವೇಗೆ ಶೀಘ್ರ ಅನುಮೋದನೆಹೊಸಪೇಟೆ-ಹರಿಹರ-ಶಿವಮೊಗ್ಗ-ನರಸಿಂಹರಾಜಪುರ- ಬಾಳೆಹೊನ್ನೂರು- ಶೃಂಗೇರಿಗೆ ನ್ಯಾಷನಲ್ ಹೈವೇ ರಸ್ತೆ ಮಾಡಿಸಿಕೊಡಬೇಕು ಎಂದು ಚಿಕ್ಕಮಗಳೂರು- ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಶಿವಮೊಗ್ಗದ ಸಂಸದ ರಾಘವೇಂದ್ರ ಅವರಿಗೆ ನಾನು ಮನವಿ ಸಲ್ಲಿಸಿದ್ದು ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ. ಅಲ್ಲದೆ ಹಾಸನ- ಚಿಕ್ಕಮಗಳೂರು- ಬಾಳೆಹೊನ್ನೂರು-ಶೃಂಗೇರಿಗೆ ನ್ಯಾಷನಲ್ ಹೈವೇ ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಬಹುದು ಮಾಜಿ ಸಚಿವ ಡಿ.ಎನ್‌.ಜೀವರಾಜ್ ತಿಳಿಸಿದರು.