ಪಟ್ಟಣದ ಕಾಗೆಹಳ್ಳ, ಹೊಂಗೆಹಳ್ಳ, ಮಾತೆಕಟ್ಟೆ ಹಳ್ಳ, ಕೆಬ್ಬೆಕಟ್ಟೆ ಹಳ್ಳ, ನೇನೇಕಟ್ಟೆ ಹಳ್ಳ ಇದೇ ನಿದು ಇಷ್ಟೊಂದು ಹಳ್ಳಗಳು ಎನ್ನದಿರಿ! ಇವು ಈಗಲೂ ಗುಂಡ್ಲುಪೇಟೆ ಪಟ್ಟಣದ ಬಡಗಲು ದಿಕ್ಕಿನಲ್ಲಿ ಗುರುತಿಸಬಹುದಾದ ಹಾಗೂ ನಶಿಸುತ್ತಿರುವ ನೀರು ಹರಿಯುವ ಹಳ್ಳಗಳು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಕಾಗೆಹಳ್ಳ, ಹೊಂಗೆಹಳ್ಳ, ಮಾತೆಕಟ್ಟೆ ಹಳ್ಳ, ಕೆಬ್ಬೆಕಟ್ಟೆ ಹಳ್ಳ, ನೇನೇಕಟ್ಟೆ ಹಳ್ಳ ಇದೇ ನಿದು ಇಷ್ಟೊಂದು ಹಳ್ಳಗಳು ಎನ್ನದಿರಿ! ಇವು ಈಗಲೂ ಗುಂಡ್ಲುಪೇಟೆ ಪಟ್ಟಣದ ಬಡಗಲು ದಿಕ್ಕಿನಲ್ಲಿ ಗುರುತಿಸಬಹುದಾದ ಹಾಗೂ ನಶಿಸುತ್ತಿರುವ ನೀರು ಹರಿಯುವ ಹಳ್ಳಗಳು.

ಕಳೆದ ನಾಲ್ಕು ದಿನಗಳ ಹಿಂದೆ ಸುರಿದ ಮಳೆಗೆ ಪಟ್ಟಣದ ಪಡವಲು ಹಾಗೂ ಬಡಗಲು ದಿಕ್ಕುಗಳಲ್ಲಿ ಸುರಿದ ಮಳೆಯಿಂದಾಗಿ ಇವು ಐದಾರು ಹಳ್ಳಗಳೆಲ್ಲ ಮೈದುಂಬಿ ಹರಿದು ನಲ್ಲೂರು ಅಮಾನಿಕೆರೆ ಸೇರಿದವು. ವರ್ಷಧಾರೆ ನಿಂತ ಮೇಲೆ ನೋಡಲು ಹೊರಟರೆ, ಈ ಹಳ್ಳಗಳನ್ನು ಅತಿಕ್ರಮಿಸಿಕೊಂಡವರೆಲ್ಲ ಪ್ರಭಾವಿಗಳೇ ಎಂಬುದು ಕಣ್ಣಿಗೆ ರಾಚುತ್ತಿದೆ.

ಖಾಕಿ ಮತ್ತೆ ಒತ್ತುವರಿ?:

ಪಟ್ಟಣದ ಮಡಹಳ್ಳಿ ರಸ್ತೆಯ ಪೊಲೀಸ್‌ ಠಾಣೆಯ ಹಿಂಭಾಗದ ಕಾಗೆಹಳ್ಳ ಒತ್ತುವರಿಯಾಗಿತ್ತು. ಕನ್ನಡಪ್ರಭ ನಿರಂತರ ವರದಿ ಪರಿಣಾಮ ಪೊಲೀಸ್‌ ಠಾಣೆ ಹಿಂಭಾಗ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ತನಕ ಒತ್ತುವರಿ ಬಿಡಲಾಗಿತ್ತು.

ಆದರೆ ಮುಂದೆ ಪೊಲೀಸರೇ ಇದರೊಳಗೆ ಒಂದೆರಡು ಪೈಪು ಹಾಕಿ,ಪೂರ್ಣ ಮಣ್ಣು ತುಂಬಿ ಅತಿಕ್ರಮಿಸಿಕೊಂಡು ಪೊಲೀಸರು ಸೀಜ್‌ ಮಾಡಿದ ಹಾಗೂ ಅಪಘಾತಕ್ಕೀಡಾದ ವಾಹನಗಳ ನಿಲುಗಡೆಗೆ ಪಾರ್ಕಿಂಗ್‌ ಮಾಡಿಕೊಂಡಿದ್ದಾರೆ.

ಪೊಲೀಸರು ಕಾಗೆಹಳ್ಳ ಮುಚ್ಚಿದ ಕಾರಣ ಮಳೆ ನೀರು ರಸ್ತೆ ಮೇಲೆ ಹರಿದು ಪಟ್ಟಣದ ಹಲವು ರಸ್ತೆಗಳು ಜಲಾವೃತವಾಗಿದವು ಅಲ್ಲದೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದೊಳಗೆ ಮಳೆ ನೀರು ನಿಂತು ಬಸ್‌ ನಿಲ್ದಾಣದ ಚಿಕ್ಕ ಕೆರೆಯಂತಾಗಿತ್ತು.

ಹೊಂಗೆಹಳ್ಳ ಕಥೆ?:

ಇನ್ನೂ ಪಟ್ಟಣದ ಉತ್ತರ ದಿಕ್ಕಿನ ಹೊಂಗೆಹಳ್ಳ ಇಟ್ಟಿಗೆ ಫ್ಯಾಕ್ಟರಿ ಬಾಲು ಜಮೀನಿನಿಂದ ದುಂದಾಸನಪುರ ದವರೆಗೂ ಮುಚ್ಚಿ ಹೋಗಿದೆ(ಕೆಲವರು ಮುಚ್ಚಿ ಹಾಕಿದ್ದಾರೆ).ಇನ್ನು ಮಾತೆಕಟ್ಟೆ ಹಳ್ಳ ವಿಜಯ್ ಗ್ಯಾಸ್ ಏಜೆನ್ಸಿ ಪಕ್ಕದಿಂದ ಹಾದು ಹೋಗುವುದು.ಇದನ್ನು ಲೇ ಔಟ್‌ಗಳನ್ನು ನಿರ್ಮಿಸುವವರು,ನ್ಯಾಷನಲ್ ಹೈವೇಯವರು ಅತಿಕ್ರಮಿಸಿದ್ದಾರೆ.ಹೀಗೆ ಕೆಬ್ಬೆಕಟ್ಟೆ ಹಳ್ಳ, ನೇನೇಕಟ್ಟೆ ಹಳ್ಳ ಸೇರಿದಂತೆ ಎಲ್ಲಾ ಹಳ್ಳಗಳನ್ನು ಬಲಿಷ್ಠರು ನುಂಗಿ ಹಾಕಿದ್ದಾರೆ. ಅಲ್ಲದೆ ಕೇರಳ ರಸ್ತೆಯ ಮಹದೇವಪ್ರಸಾದ್‌ ನಗರದ ಬಳಿಯ ರಾಜ ಕಾಲುವೆ ಮುಚ್ಚಿ ಉದ್ಯಮಿಯೊಬ್ಬರು ಲೇಔಟ್‌ ನಿರ್ಮಿಸಿದ್ದಾರೆ. ಈ ಎಲ್ಲಾ ಹಳ್ಳಗಳು ಇತ್ತೀಚೆಗೆ ಸುರಿದ ಮಳೆಗೆ ಮೈದುಂಬಿ ಹರಿದು ನಲ್ಲೂರು ಅಮಾನಿಕೆರೆ ಸೇರಿದ್ದವು. ಆದರೆ ಅವುಗಳ ದಾರಿಯುದ್ದಕ್ಕೂ ಒತ್ತುವರಿಯಾಗಿದೆ.

ಬಲಿಷ್ಠರ ಕೈವಶವಾಗಿರುವ ಹಳ್ಳಗಳನ್ನು ಬಿಡಿಸಿಕೊಡಿ. ರಾಜಕಾಲುವೆ ಹಾಗೂ ನೀರು ಹರಿಯುವ ಹಳ್ಳಗಳನ್ನು ಉಳಿಸಿಕೊಡಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಪಟ್ಟಣದೊಳಗೆ ಹಾಗೂ ಪಟ್ಟಣದ ಹೊರ ವಲಯದ ರಾಜಕಾಲುವೆ, ನೀರು ಹಳ್ಳಗಳು ಒತ್ತುವರಿಯಾಗಿವೆ. ಕೂಡಲೇ ಒತ್ತುವರಿ ಬಿಡಿಸಿ ಮಳೆ ನೀರು ಹರಿಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರಿ ಹಳ್ಳಗಳನ್ನು ಬಿಡಿಸಬೇಕು.ಒತ್ತುವರಿ ತೆರವಾಗಬೇಕು. ತಾಲೂಕಿನಾದ್ಯಂತ ಬಲಿಷ್ಠರ ಕೈವಶವಾಗಿರುವ ಹಳ್ಳಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಗುಂಡ್ಲುಪೇಟೆ ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌ ಒತ್ತಾಯಿಸಿದ್ದಾರೆ.